ಲೂಟಿ ಎಂಬುದು ಕಾಂಗ್ರೆಸ್ ಪಕ್ಷದ DNA ನಲ್ಲೇ ಇದೆ: ನಿರ್ಮಲಾ ಸೀತಾರಾಮನ್ ಕಿಡಿ..!
ನವ ದೆಹಲಿ (ಅಕ್ಟೋಬರ್ 06); ಲೂಟಿಕೋರತನ ಎಂಬುದು ಕಾಂಗ್ರೆಸ್ ಪಕ್ಷದ ಡಿಎನ್ಎ ನಲ್ಲೇ ಇದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಕಿಡಿಕಾರಿದ್ದಾರೆ. ಕೇಂದ್ರ ಸರ್ಕಾರ ಇತ್ತೀಚೆಗೆ ’ಸರ್ಕಾರಿ ಆಸ್ತಿ ನಗದೀಕರಣ’ (National Asset Monetisation Pipeline Scheme – NMP) ಯೋಜನೆಯನ್ನು ಜಾರಿಗೆ ತಂದಿತ್ತು. ಆದರೆ, ಈ ಯೋಜನೆಯ ವಿರುದ್ದ ಕಾಂಗ್ರೆಸ್ (Congress) ತೀವ್ರ ಅಸಮಾಧಾನವನ್ನು ಹೊರಹಾಕಿತ್ತು.
ಬಿಜೆಪಿಯು (BJP) ದೇಶದ ಸಾರ್ವಜನಿಕ ಆಸ್ತಿಯನ್ನು ಮಾರಾಟ ಮಾಡುತ್ತಿದೆ ಎಂದು ಕಾಂಗ್ರೆಸ್ ಬಹಿರಂಗ ಹೇಳಿಕೆ ನೀಡುವ ಮೂಲಕ ಕೇಂದ್ರ ಸರ್ಕಾರದ (Central Government) ವಿರುದ್ಧ ವಾಗ್ದಾಳಿ ನಡೆಸಿತ್ತು. ಆದರೆ, ಕಾಂಗ್ರೆಸ್ ಟೀಕೆಗೆ ಪ್ರತಿಕ್ರಿಯಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ಕಾಂಗ್ರೆಸ್ ಪಕ್ಷದ ಡಿಎನ್ಎಯಲ್ಲಿಯೇ ಲೂಟಿ ಇದೆ ಎಂದು ಆರೋಪಿಸುವ ಮೂಲಕ ಪ್ರತಿ ದಾಳಿ ನಡೆಸಿದ್ದಾರೆ.
ಛತ್ತೀಸ್‌ಗಢ ರಾಜಧಾನಿ ರಾಯ್ಪುರದಲ್ಲಿ ಮಾತನಾಡಿರುವ ಸಚಿವೆ ನಿರ್ಮಲಾ ಸೀತಾರಾಮನ್ , “ಲೂಟಿಯು ಕಾಂಗ್ರೆಸ್‌ನ ಮನಸ್ಸಿನಿಂದ ಹೊರಹೋಗುವುದಿಲ್ಲ. ಅವರ ಆಳ್ವಿಕೆಯಲ್ಲಿ ಸ್ಪೆಕ್ಟ್ರಮ್, ಗಣಿ, ನೀರು ಸೇರಿದಂತೆ ಎಲ್ಲಾ ವಲಯದಲ್ಲೂ ಲೂಟಿ ಹರಡಿಕೊಂಡಿತ್ತು” ಎಂದು ವಾಗ್ದಾಳಿ ನಡೆಸಿದ್ದಾರೆ.