ಲಕ್ನೋ (ಅಕ್ಟೋಬರ್ 14); ಉತ್ತರ ಪ್ರದೇಶದ ಲಖೀಂಪುರ್ ಖೇರಿ ರೈತ ಹತ್ಯಾಕಾಂಡ (Lakhimpur Kheri Massacre) ನಡೆದ 10 ದಿನಗಳಾಗಿವೆ. ರೈತ ಹೋರಾಟಗಾರರ ಮೇಲೆ ಕೇಂದ್ರ ಸಚಿವ ಅಜಯ್ ಮಿಶ್ರಾ (Ajay Mishra) ಅವರ ಮಗ ಆಶೀಶ್ ಮಿಶ್ರಾ (Ashish Mishra) ಹಾರು ಹರಿಸಿದ್ದ ಕಾರಣ ಸ್ಥಳದಲ್ಲೇ 4 ಜನ ರೈತರು ಮೃತಪಟ್ಟಿದ್ದರು. ಅಲ್ಲದೆ, ಘಟನೆಯ ನಂತರ ನಡೆದ ಗಲಭೆಯಲ್ಲಿ ಪತ್ರಕರ್ತ ಸೇರಿದಂತೆ 4 ಜನ ಮೃತಪಟ್ಟಿದ್ದರು.
ಒಟ್ಟು 9 ಜನರ ಸಾವಿಗೆ ಕಾರಣವಾದ ಈ ಘಟನೆಯ ನೇರ ಆರೋಪಿ ಬಿಜೆಪಿ ಸಚಿವ ಅಜಯ್ ಮಿಶ್ರಾ ಮತ್ತು ಆತನ ಮಗ ಆಶೀಶ್ ಮಿಶ್ರಾ ಎನ್ನಲಾಗಿದೆ. ಈ ಘಟನೆ ದೇಶದಾದ್ಯಂತ ದೊಡ್ಡ ಸಂಚಲನವನ್ನೇ ಸೃಷ್ಟಿಸಿದೆ. ಸ್ವತಃ ಸುಪ್ರೀಂ ಕೋರ್ಟ್ (Supreme Court) ಮಧ್ಯಪ್ರವೇಶ ಮಾಡಿರುವ ಕಾರಣ ಆಶೀಶ್ ಮಿಶ್ರಾ ವಿರುದ್ಧ ಕೇಸ್ ದಾಖಲಿಸಿ ಬಂದಿಸಲಾಗಿದೆ.
ಆದರೆ, ಘಟನೆ ನಡೆದು 10 ದಿನ ಕಳೆದರೂ ಸಹ ಯಾವೊಬ್ಬ ಬಿಜೆಪಿ (BJP) ನಾಯಕನೂ ಸಹ ಈ ಗ್ರಾಮಕ್ಕೆ ಭೇಟಿ ನೀಡಲು ಮುಂದಾಗಿರಲಿಲ್ಲ. ಆದರೆ, ಬುಧವಾರ ಉತ್ತರಪ್ರದೇಶ ಸರ್ಕಾರದ ಕಾನೂನು ಸಚಿವ ಬ್ರಿಜೇಶ್ ಪಾಠಕ್ (Brijesh Pathak) ಮೊದಲ ಬಾರಿಗೆ ಲಖೀಂಪುರ್ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ, ಮೃತ ರೈತರ ಮನೆಗಳಿಗೆ ಭೇಟಿ ನೀಡಿಲ್ಲ ಎನ್ನಲಾಗಿದೆ.