ರೈತ ಸಂಘದ ಕಾರ್ಯಕರ್ತರು ಪಟ್ಟಣದ ತಾಲೂಕು ಕಚೇರಿ ಎದುರು ಪ್ರತಿಭಟನೆ ಮಾಡಿದರು.
ತಹಶೀಲ್ದಾರ್ ಕೆ.ಎಸ್.ಸೋಮಶೇಖರ್ ಅವರು ರೈತರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಒತ್ತಾಯಿಸಿ ರೈತ ಸಂಘದ ಕಾರ್ಯಕರ್ತರು ಪಟ್ಟಣದ ತಾಲೂಕು ಕಚೇರಿಗೆ ಎದುರು ಪ್ರತಿಭಟನೆ ಮಾಡಿದರು.
ರೈತರೊಂದಿಗೆ ತಹಶೀಲ್ದಾರ್ ಅವರು ಸೌಜನ್ಯದಿಂದ ವರ್ತಿಸಬೇಕು ಎಂದು ತಹಶೀಲ್ದಾರ್ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗಪ್ಪಾಜಿ ಮಾತನಾಡಿ, ತಾಲೂಕಿನ ತೊರೆಬೊಮ್ಮನಹಳ್ಳಿಯ ರಸ್ತೆ ತೆರವು ಮಾಡುವ ಸಂಬಂಧ ರೈತರು ತಹಶೀಲ್ದಾರ್ ಅವರಿಗೆ ದೂರವಾಣಿ ಕರೆ ಮಾಡಿದರೆ ಸೌಜನ್ಯದಿಂದ ಮಾತನಾಡದೆ ಬೇಕಾಬಿಟ್ಟಿ ಮಾತನಾಡಿದ್ದಾರೆ ಎಂದು ಆರೋಪಿಸಿದರು.
ತಹಶೀಲ್ದಾರ್ ಅವರು ಎಷ್ಟೇ ಕಾರ್ಯ ಒತ್ತಡದಲ್ಲಿ ಇದ್ದರೂ ರೈತರು ಮತ್ತು ಜನ ಸಾಮಾನ್ಯರು ದೂರವಾಣಿ ಕೆರೆ ಮಾಡಿದಾಗ ಸೌಜನ್ಯದಿಂದ ಮಾತನಾಡಬೇಕು ಎಂದು ಆಗ್ರಹ ಮಾಡಿದರು.
ಈ ಕೂಡಲೆ ತೊರೆಬೊಮ್ಮಹಳ್ಳಿಯಲ್ಲಿ ರಸ್ತೆ ಒತ್ತುವರಿ ತೆರವುಗೊಳಿಸಬೇಕು. ತಾಲೂಕು ಕಚೇರಿಯಲ್ಲಿ ರೈತರ ಹಾಗೂ ಸಾರ್ವಜನಿಕರ ಕೆಲಸಗಳನ್ನು ತ್ವರಿತವಾಗಿ ಮಾಡಿಕೊಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ತಹಸೀಲ್ದಾರ್ ಕೆ.ಎಸ್.ಸೋಮಶೇಖರ್ ಅವರು ಸ್ಥಳಕ್ಕೆ ಆಗಮಿಸಿ ರೈತರೊಂದಿಗೆ ಮಾತನಾಡಿ, ನಾನು ಜಿಲ್ಲಾಧಿಕಾರಿಗಳ ಸಭೆಯಲ್ಲಿದ್ದ ಕಾರಣ ದೂರವಾಣಿ ಸರಿಯಾಗಿ ಮಾತನಾಡಲು ಸಾಧ್ಯವಾಗಲಿಲ್ಲ. ನಾನು ರೈತರ ಹಾಗೂ ಸಾರ್ವಜನಿಕರ ಕೆಲಸಗಳನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೆನೆ. ಮುಂದೆ ಈ ರೀತಿಯಾಗದಂತೆ ನೋಡಿಕೊಳ್ಳುತ್ತೇನೆ. ರಸ್ತೆ ಒತ್ತುವರಿಯನ್ನು ಶೀಘ್ರವಾಗಿ ತೆರವುಮಾಡುತ್ತೇನೆ ಎಂದು ಭರವಸೆ ಕೊಟ್ಟ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಪ್ರತಿಭಟನೆಯಲ್ಲಿ ರೈತ ಸಂಘದ ಮುಖಂಡರಾದ ಲಿಂಗಪ್ಪಾಜಿ, ಪುನೀತ್ ಕುಮಾರ್, ಪುಟ್ಟಸ್ವಾಮಿ, ಜಿ.ಎ.ಶಂಕರ್, ವಿನೋದ್ ಬಾಬು, ರವಿಕುಮಾರ್, ದಯಾನಂದ್, ಗೊಲ್ಲರದೊಡ್ಡಿ ಅಶೋಕ್ ಇತರರು ಇದ್ದರು.