ರೂಪದರ್ಶಿಗೆ ಕಳಪೆ ಮಟ್ಟದ ಕೇಶ ವಿನ್ಯಾಸ: 2 ಕೋಟಿ ರೂ. ಪರಿಹಾರ ನೀಡಲು ಐಟಿಸಿ ಮೌರ್ಯ ಸಲೂನ್ ಗೆ ಆದೇಶ
ನವದೆಹಲಿ: ಐಟಿಸಿ ಮೌರ್ಯ ಸಲೂನ್ ನಿಂದ ತರಬೇತಿ ಪಡೆದ ಸಿಬ್ಬಂದಿ ಮಾಡಿದ ಕಳಪೆ ಮಟ್ಟದ ಕೇಶ ವಿನ್ಯಾಸದಿಂದ ಟಾಪ್ ಮಾಡೆಲ್ ಆಗುವ ಕನಸು ಭಗ್ನಗೊಂಡ ಮಹಿಳೆಗೆ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಆದೇಶಿಸಿದೆ.
ಮಹಿಳೆಯರು ತಮ್ಮ ಕೂದಲ ಬಗ್ಗೆ ಜಾಗರೂಕರಾಗಿರುತ್ತಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ, ತಮ್ಮ ಕೂದಲನ್ನು ಸುಸ್ಥಿತಿಯಲ್ಲಿಡಲು ಅವರು ತುಂಬಾ ಹಣವನ್ನು ವ್ಯಯ ಮಾಡುತ್ತಾರೆ. ಅಲ್ಲದೇ, ಕೂದಲಿನೊಂದಿಗೆ ಅವರು ಭಾವನಾತ್ಮಕ ಸಂಬಂಧ ಹೊಂದಿರುತ್ತಾರೆ ಎಂದು ಆಯೋಗದ ಅಧ್ಯಕ್ಷ , ನ್ಯಾಯಮೂರ್ತಿ ಕೆ.ಆರ್. ಅಗರ್ ವಾಲ್ ಮತ್ತು ಸದಸ್ಯ ಎಸ್.ಎಂ. ಕಾಂತಿಕರ್ ಅವರಿದ್ದ ಪೀಠ ಹೇಳಿದೆ.
ಗ್ರಾಹಕ ಸಂರಕ್ಷಣಾ ಕಾಯ್ದೆಯಡಿ ಸೇವೆಯಲ್ಲಿ ಕೊರತೆ ಆಗಿರುವುದರಿಂದ ಎಂಟು ವಾರಗಳಲ್ಲಿ ದೂರುದಾರೆ ಅಶ್ನಾರಾಯ್ ಗೆ 2 ಕೋಟಿ ರೂಪಾಯಿ ಪರಿಹಾರ ನೀಡುವಂತೆ ಐಟಿಸಿ ಮೌರ್ಯ ಸಲೂನ್ ಗೆ ಆಯೋಗ ನಿರ್ದೇಶಿಸಿದೆ.
ಘಟನೆಯಿಂದ ತೀವ್ರ ಮಾನಸಿಕ ಯಾತನೆಗೆ ಒಳಗಾಗಿದ್ದು, ಸ್ವಾಭಿಮಾನಕ್ಕೆ ಧಕ್ಕೆ ತಗುಲಿದೆ. ಸಾಮಾಜಿಕ ಚಟುವಟಿಕೆಗಳಿಂದ ದೂರ ಉಳಿಯುವಂತಾಗಿದೆ ಎಂದು ಆಶ್ನಾ ರಾಯ್ ತಮ್ಮ ಅಳಲು ತೋಡಿಕೊಂಡಿದ್ದಾರೆ.