ಇತ್ತೀಚಿನ ಸುದ್ದಿರಾಜ್ಯಸುದ್ದಿ

ರಾಷ್ಟ್ರ ಧ್ವಜ ಹಾರಿಸಲು ನನ್ನ ಉಸಿರಿರುವವರೆಗೂ ಹೋರಾಟ!ಸಂಸದ ಎಸ್‌ ಮುನಿಸ್ವಾಮಿ

ಕೋಲಾರ: ನಗರದ ಕ್ಲಾಕ್ ಟವರ್‌ನಲ್ಲಿ ರಾಷ್ಟ್ರ ಧ್ವಜ ಹಾರಿಸಲು ನನ್ನ ಉಸಿರಿರುವವರೆಗೂ ಹೋರಾಟ ಮಾಡುತ್ತೇನೆ. 144 ಸೆಕ್ಷನ್ ಜಾರಿಯಿರುವ ಕಾರಣ ಶುಕ್ರವಾರದಿಂದ ಒಬ್ಬನೇ ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತೇನೆ ಎಂದು ನಗರದ ಪ್ರವಾಸಿ ಮಂದಿರದಲ್ಲಿ ಸಂಸದ ಎಸ್‌ ಮುನಿಸ್ವಾಮಿ ಹೇಳಿದರು.

ಮುಳಬಾಗಿಲಿನಲ್ಲಿ ನಡೆದ ಶಿವಾಜಿ ಜಯಂತಿ ವೇಳೆ ನನ್ನ ಭಾಷಣವನ್ನು ತಪ್ಪಾಗಿ ಅರ್ಥೈಸಲಾಗಿದೆ. ಯಾವುದೇ ಧರ್ಮದವರಾದರೂ ಭಾರತ ಧ್ವಜಕ್ಕೆ ಗೌರವ ಕೊಟ್ಟರೆ ಅವರು ದೇಶಪ್ರೇಮಿಗಳು. ಈ ದೇಶದಲ್ಲಿದ್ದು ಪಾಕಿಸ್ತಾನದ ಏಜೆಂಟ್‌ಗಳಂತೆ ನಡೆದುಕೊಳ್ಳುವವರನ್ನು ಬಿಡುವುದಿಲ್ಲ. ಈ ದೇಶದ ಗಾಳಿ, ನೆಲ, ಜಲ ಪಡೆದುಕೊಂಡು ದೇಶದ ವಿರುದ್ಧ ಇರುವವರು ದೇಶ ದ್ರೋಹಿಗಳು. ಕೆಲವು ಕಳ್ಳರು ನನ್ನ ಮಾತುಗಳನ್ನು ಅಪಪ್ರಚಾರ ಮಾಡುತ್ತಿದ್ದಾರೆ. ಬೆಂಗಳೂರಿನ ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆಯಲ್ಲಿ ಯಾರ‍್ಯಾರ ಪಾತ್ರ ಇತ್ತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದರು.

SDPI ಬೆದರಿಕೆಗಳಿಗೆ ನಾನು ಹೆದರಲ್ಲ!
ಭಾರತದ ವಿಭಜನೆ ಸಮಯದಲ್ಲಿ ಪಾಕಿಸ್ತಾನದಲ್ಲಿದ್ದ 20 ಲಕ್ಷ ಹಿಂದೂಗಳ ಮಾರಣಹೋಮ ಆಯಿತು. ದಿ ಕಾಶ್ಮೀರ್ ಫೈಲ್ಸ್ ಸಿನಿಮಾವು ಸತ್ಯ ಘಟನೆಗಳನ್ನು ಬಿಚ್ಚಿಟ್ಟಿದೆ. ಕೆಲವು ಮುಸ್ಲಿಂ ಸಮುದಾಯದವರು ದೇಶದ ಪರ ಕೆಲಸ ಮಾಡುತ್ತಿದ್ದಾರೆ. ಆದರೆ, ಕೆಲವು ಕಿಡಿಗೇಡಿಗಳು ದೇಶದ ವಿರುದ್ಧ ಕೆಲಸ ಮಾಡುತ್ತಿದ್ದಾರೆ. ನನಗೂ ಕೆಲವರು ಬೆದರಿಕೆ ಹಾಕುತ್ತಿದ್ದಾರೆ. SDPI ಬೆದರಿಕೆಗಳಿಗೆ ಹೆದರುವವನು ನಾನಲ್ಲ ಎಂದು ಮುನಿಸ್ವಾಮಿ ಹೇಳಿದರು.

ಕ್ಲಾಕ್ ಟವರ್ ಯಾರಪ್ಪನ ಆಸ್ತಿಯೂ ಅಲ್ಲ!
ಕ್ಲಾಕ್ ಟವರ್ ಬಗ್ಗೆ ಇಡೀ ದೇಶದ ಜನ ಪ್ರಶ್ನೆ ಮಾಡುತ್ತಿದ್ದಾರೆ. ಅದು ಯಾರಪ್ಪನ ಆಸ್ತಿಯೂ ಅಲ್ಲ. ಒಂದು ಧರ್ಮದ ಆಸ್ತಿಯೂ ಅಲ್ಲ. ನಾನು ಇಲ್ಲಿ ವೋಟ್ ಬ್ಯಾಂಕ್ ರಾಜಕಾರಣ ಮಾಡಲು ಬಂದಿಲ್ಲ. ಆದರೆ, ಕ್ಲಾಕ್ ಟವರ್ ಮೇಲೆ ರಾಷ್ಟ್ರ ಧ್ವಜ ಹಾರಿಸುವವರೆಗೂ ಬಿಡುವುದಿಲ್ಲ. ನನ್ನ ಉಸಿರಿರುವವರೆಗೂ ಹೋರಾಟ ಮಾಡುತ್ತೇನೆ. ಅತೀ ಶೀಘ್ರದಲ್ಲೇ ಕ್ಲಾಕ್ ಟವರ್ ಮೇಲೆ ತ್ರಿವರ್ಣ ಧ್ವಜ ಹಾರಿಸಲಾಗುತ್ತದೆ ಎಂದರು.

ಉಗ್ರ ಚಟುವಟಿಕೆ ನಡೆಸುವವರಿಗೆ ಆಶ್ರಯ ನೀಡುತ್ತಿದ್ದಾರೆ!
ನಾನು ಅಬ್ದುಲ ಕಲಾಂರಂತಹ ರಾಷ್ಟ್ರ ಪ್ರೇಮಿಗಳನ್ನು ನೋಡಿದ್ದೇನೆ. ನಗರದಲ್ಲಿ ಕಲಾಂ ಅವರ ಪುತ್ಥಳಿ ಇಡುವ ಬಗ್ಗೆಯೂ ಸಂಬಂಧಪಟ್ಟ ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಆದರೆ, ಕೆಲವು ಕಿಡಿಗೇಡಿಗಳು ಜಾತಿ, ಧರ್ಮದ ಹೆಸರೇಳಿ ನನ್ನ ವಿರುದ್ಧವೇ ಪ್ರಚೋದನೆ ಮಾಡುತ್ತಿದ್ದಾರೆ. ಕೋಲಾರ ಜಿಲ್ಲೆಯಲ್ಲಿ ಗಾಂಜಾ, ಕ್ರಿಕೆಟ್ ಬೆಟ್ಟಿಂಗ್, ಮಟ್ಕಾ ಸೇರಿ ಅಕ್ರಮ ಚಟುವಟಿಕೆಗಳಲ್ಲಿ ಯಾರ‍್ಯಾರು ಭಾಗವಹಿಸಿದ್ದಾರೆ ಎಂದು ತಿಳಿದಿದೆ. ಉಗ್ರ ಚಟುವಟಿಕೆ ನಡೆಸುವವರೆಗೆ ಕೋಲಾರದಲ್ಲಿ ಆಶ್ರಯ ನೀಡುತ್ತಿದ್ದಾರೆ. ಇವೆಲ್ಲವನ್ನೂ ಯಾರು ಮಾಡುತ್ತಿದ್ದಾರೆಂದು ತಿಳಿದಿದೆ ಎಂದು ಹೇಳಿದರು.

ನರೇಂದ್ರ ಮೋದಿ ಪ್ರಧಾನಿಯಾದಾಗಿನಿಂದ ದೇಶದಲ್ಲಿ ಒಂದೇ ಒಂದು ಕೋಮುಗಲಭೆಯಾಗಿಲ್ಲ. ಆದರೆ ಕೆಲವು ಕಿಡಿಗೇಡಿಗಳು ಜಾತಿ, ಧರ್ಮದ ಹೆಸರೇಳಿ ನನ್ನ ವಿರುದ್ಧವೇ ಪ್ರಚೋದನೆ ಮಾಡುತ್ತಿದ್ದಾರೆ. ಆದರೆ, ನಾನೊಬ್ಬ ಹಿಂದೂ. ಯಾರಿಗೂ ಬೆದರುವ ಅವಶ್ಯಕತೆ ಇಲ್ಲ. ನಾನು ಈ ದೇಶದ ಪ್ರಜೆಯಾಗಿ ಕ್ಲಾಕ್ ಟವರ್ ನಲ್ಲಿ ಧ್ವಜ ಹಾರಿಸಲು ನನ್ನ ಉಸಿರಿರೋವರೆಗೂ ಹೋರಾಟ ಮಾಡುತ್ತೇನೆ. ನಾಳೆಯಿಂದಲೇ ಮೌನ ಪ್ರತಿಭಟನೆ ಮಾಡ್ತೇನೆ. 144 ಸೆಕ್ಷನ್ ಮುಗಿದ ಮೇಲೆ ಜಿಲ್ಲೆಯಲ್ಲಿರುವ ದೇಶಾಭಿಮಾನಿಗಳು ಬನ್ನಿ. ಕ್ಲಾಕ್ ಟವರ್ ನಲ್ಲಿ ಧ್ವಜ ಹಾರಿಸೋವರೆಗೂ ಶಾಂತಿಯುತ ಹೋರಾಟ ಮಾಡೋಣ ಎಂದು ಸಾರ್ವಜನಿಕರಿಗೆ ಸಂಸದ ಮುನಿಸ್ವಾಮಿ ಕರೆ ನೀಡಿದರು.

Related Articles

Leave a Reply

Your email address will not be published. Required fields are marked *

Back to top button