ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆ: ಅಯೋಧ್ಯೆಯಲ್ಲಿ ಭರತನಾಟ್ಯ ಪ್ರದರ್ಶನಕ್ಕೆ ಹುಬ್ಬಳ್ಳಿಯ ಯುವಕನಿಗೆ ಆಹ್ವಾನ
ಅಯೋಧ್ಯೆಯಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಕ್ಷಣಗಣನೆ ಶುರುವಾಗಿದೆ. ಅಯೋಧ್ಯೆಗೂ ಕರ್ನಾಟಕಕ್ಕೂ ಅವಿನಾಭಾವ ಸಂಬಂಧವಿದೆ. ಒಂದು ಕಡೆ ಈಗಾಗಲೇ ಮೈಸೂರಿನ ಶಿಲ್ಪಿ ಕೆತ್ತಿರುವ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪನೆಗೆ ಆಯ್ಕೆಯಾಗಿದ್ದು, ಇನ್ನೊಂದು ಕಡೆ ಹುಬ್ಬಳ್ಳಿಯ ಯುವಕನಿಗೆ ಅಯೋಧ್ಯೆಯಲ್ಲಿ ಭರತನಾಟ್ಯ ಪ್ರದರ್ಶನಕ್ಕೆ ಆಹ್ವಾನ ನೀಡಲಾಗಿದೆ. ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನಾ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಹುಬ್ಬಳ್ಳಿಯ ವಿದ್ವಾನ್ ಸುಜಯ ಶಾನಭಾಗ ಅವರಿಗೆ ಆಹ್ವಾನ ಬಂದಿದ್ದು, ಜ. 25ರಂದು ಅಯೋಧ್ಯೆಯಲ್ಲಿ ಭರತನಾಟ್ಯ ಪ್ರದರ್ಶನ ನೀಡಲಿದ್ದಾರೆ.
ಈ ಕುರಿತಂತೆ ಪ್ರತಿಕ್ರಿಯೆ ನೀಡಿದ ಸುಜಯ ಶಾನಭಾಗ, ತಮ್ಮಗೆ ಅವಕಾಶ ಸಿಕ್ಕಿದಕ್ಕೆ ಖುಷಿಯಾಗಿದೆ. ಮೈಸೂರಿನ ವಸುಂಧರ ದೊರೆಸ್ವಾಮಿಯವರ ನೇತೃತ್ವದಲ್ಲಿ ‘ಶ್ರೀರಾಮಂ ಭಜೆ’ ಅಂತ ನೃತ್ಯ ಸಮರ್ಪಣೆಯಾಗಲಿದೆ. ಅವರ ಹಿರಿಯ ಶಿಷ್ಯನಾಗಿ ಅವರ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದೇನೆ ಎಂದು ಹೇಳಿದ್ದಾರೆ.
ರಾಮ ಪ್ರಾಣ ಪ್ರತಿಷ್ಠಾಪನೆ ಸುಸಂದರ್ಭದಲ್ಲಿ ಈ ಅವಕಾಶ ಸಿಕ್ಕಿದು ನಮ್ಮ ಸೌಭಾಗ್ಯ. ಹುಬ್ಬಳ್ಳಿಯವನಾಗಿ ನಾನು ಶ್ರೀರಾಮನಿಗೆ ಪುಷ್ಪ ಅರ್ಪಣೆ ಮಾಡಿತ್ತಿರುವ ಖುಷಿ ಇದೆ. 45 ನಿಮಿಷಗಳ ಕಾಲ ನೃತ್ಯ ರೂಪಕ ಇದಾಗಿದೆ. ವಸುಂದರ ದೊರೆಸ್ವಾಮಿ ಸೇರಿದಂತೆ ನಾಲ್ವರ ತಂಡ ನೃತ್ಯ ರೂಪಕದಲ್ಲಿ ಪಾಲ್ಗೊಳ್ಳುತ್ತಿದ್ದು, ಅಯೋಧ್ಯೆಯಲ್ಲಿ ಕಾರ್ಯಕ್ರಮ ನೀಡುತ್ತಿರುವರು ಹೆಮ್ಮೆಯ ವಿಷಯ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಅಯೋಧ್ಯೆಯಲ್ಲಿ ಹುಬ್ಬಳ್ಳಿಗರ ಕೈಚಳಕ: ಬೃಹದಾಕಾರದ ಅಳಿಲು ಕಲಾಕೃತಿ ನಿರ್ಮಾಣ
ರಾವಣನ ಸಂಹಾರಕ್ಕೆ ಲಂಕೆಗೆ ಹೊರಟ ಶ್ರೀರಾಮನಿಗೆ ಸಮುದ್ರದ ಮೇಲೆ ಸೇತುವೆ ಕಟ್ಟಲು ಸಣ್ಣ ಅಳಿಲು ಸಹ ಸಹಾಯ ಮಾಡಿದೆ ಎಂಬ ಉಲ್ಲೇಖ ರಾಯಾಯಣದಲ್ಲಿದೆ. ಅದೇ ಅಳಿಲಿನ ಬೃಹದಾಕಾರದ ಕಲಾಕೃತಿಯನ್ನು ಅಯೋಧ್ಯೆ ಧಾಮ ಜಂಕ್ಷನ್’ನಲ್ಲಿ (ರೈಲ್ವೆ ನಿಲ್ದಾಣ) ನಿರ್ಮಿಸಲಾಗಿದ್ದು, ಈ ಕಲಾಕೃತಿಯನ್ನು ಹುಬ್ಬಳ್ಳಿಯ ಆರ್ಟ್ ವಾಲೇ ಸಂಸ್ಥೆ ನಿರ್ಮಿಸಿರುವುದು ಮತ್ತೊಂದು ವಿಶೇಷ.