ಬೆಂಗಳೂರು: ಭಾನುವಾರ ರಾಜ್ಯದ ಸುಮಾರು 500ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ (Theatre) ಅಗಲಿದ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ (Power Star Puneeth Rajkumar) ಅವರಿಗೆ ಏಕಕಾಲದಲ್ಲಿ ಶ್ರದ್ದಾಂಜಲಿ ಸಲ್ಲಿಸಲು ನಿರ್ಧರಿಸಲಾಗಿದೆ, ಭಾನುವಾರ ಸಂಜೆ ಆರು ಗಂಟೆಗೆ ಶ್ರದ್ಧಾಂಜಲಿ ಸಲ್ಲಿಸುವ ಕಾರ್ಯಕ್ರಮವನ್ನು ಚಿತ್ರ ಪ್ರದರ್ಶಕರ ವಲಯ ಆಯೋಜಿಸಲಾಗಿದೆ. ಅಭಿಮಾನಿಗಳು ಎಲ್ಲಿದ್ದಾರೋ ಅಲ್ಲಿಯೇ ಥಿಯೇಟರ್ ಅಂಗಳದಲ್ಲಿ ಕಾರ್ಯಕ್ರಮ ಮಾಡಲಿದ್ದಾರೆ. ನಾಗೇಂದ್ರ ಪ್ರಸಾದ್ (Nagendra Prasad) ಬರೆದ ಹಾಡು ಹಾಡೋ ಮೂಲಕ ಗೀತಾಂಜಲಿ ಸಲ್ಲಿಸಲಾಗುವುದು. ಕೈಯಲ್ಲಿ ಮೇಣದ ಬತ್ತಿ ಹಿಡಿಯುವ ಮೂಲಕ ಶದ್ಧಾಂಜಲಿ ಸಲ್ಲಿಸಲಾಗುತ್ತದೆ. ನಾಳೆ ಅಭಿಮಾನಿಗಳು ತಾವಿದ್ದ ಸ್ಥಳದಲ್ಲಿಯೇ ಶ್ರದ್ಧಾಂಜಲಿ ಸಲ್ಲಿಸಲು ಸೂಚಿಸಲಾಗಿದೆ.
ಕಂಠೀರವ ಸ್ಟುಡಿಯೋದ ಅಪ್ಪು ಸಮಾಧಿ ಸ್ಥಳಕ್ಕೆ ಇಂದು ಸಹ ಅಭಿಮಾನಿಗಳು ಆಗಮಿಸಿ ತಮ್ಮ ನಮನಗಳನ್ನು ಸಲ್ಲಿಸುತ್ತಿದ್ದಾರೆ. ವಯೋ ವೃದ್ಧರು, ಮಕ್ಕಳು, ಯುವಕರು ಸೇರಿದಂತೆ ಮಹಿಳೆಯರು ಸಹ ಸಾಲಿನಲ್ಲಿ ಬಂದು ಅಪ್ಪು ದರ್ಶನ ಪಡೆಯುತ್ತಿದ್ದಾರೆ. ಕಣ್ಣೀರು ಹಾಕುತ್ತಲೇ ಅಭಿಮಾನಿಗಳು ಕಂಠೀರವ ಸ್ಟುಡಿಯೋದಿಂದ ಹೊರ ಬರುತ್ತಿದ್ದಾರೆ.
ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅಪ್ಪು ಸಮಾಧಿಗೆ ಭೇಟಿ
ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಅಪ್ಪು ಸಮಾಧಿಗೆ ಭೇಟಿ ನೀಡಿ ನಮನಗಳನ್ನು ಸಲ್ಲಿಸಿದರು. ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಇಮ್ರಾನ್ ಸರ್ದಾರಿಯಾ, ಅಪ್ಪು ಅವರನ್ನು ಕಳೆದುಕೊಂಡಿದ್ದೇವೆ ಎಂದು ಈಗಲೂ ನಂಬಲು ಆಗುತ್ತಿಲ್ಲ. ಅವರನ್ನು ಸಾವಿಗೂ ಒಂದು ವಾರ ಮುಂಚೆ ಮಾತನಾಡಿಸಿದ್ದೆ. ಫೋನ್ ಮಾಡಿದ್ದಾಗ ಬಾ ಇಮ್ರಾನ್ ಮನೆಗೆ, ಹೊಸ ಪ್ರಾಜೆಕ್ಟ್ ಏನಾದರೂ ಪ್ಲ್ಯಾನ್ ಮಾಡೋಣ ಎಂದಿದ್ದರು ಎಂದು ಭಾವುಕರಾದರು.