
ರಾಜ್ಯಾದ್ಯಂತ ಆ.27ರಿಂದ ಮತ್ತೆ ಮಳೆ ಹೆಚ್ಚಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್: ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಕೊಡಗು, ಶಿವಮೊಗ್ಗ, ಬೆಳಗಾವಿ, ಬೀದರ್, ಕಲಬುರಗಿ, ಯಾದಗಿರಿ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿರುವ ಇಲಾಖೆ, ಸೆ.1ರ ವರೆಗೂ ಮಳೆ ಬೀಳುವ ಸಾಧ್ಯತೆ ಇದೆ ಎಂದು ತಿಳಿಸಿದೆ.
ಉಳಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಕೋಲಾರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ಹಾಸನ, ದಾವಣಗೆರೆ, ತುಮಕೂರು, ರಾಮನಗರ, ಮೈಸೂರು, ಮಂಡ್ಯ, ಚಾಮರಾಜನಗರ, ವಿಜಯನಗರ, ವಿಜಯಪುರ, ರಾಯಚೂರು, ಕೊಪ್ಪಳ, ಹಾವೇರಿ, ಗದಗ, ಧಾರವಾಡ ಜಿಲ್ಲೆಗಳಲ್ಲಿಯೂ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ.
ಕ್ಯಾಸಲ್ ರಾಕ್, ಕದ್ರಾದಲ್ಲಿ ಸೋಮವಾರ ಮಳೆಯಾಗಿದ್ದು, ಉಳಿದೆಡೆ ಒಣಹವೆ ಇತ್ತು.
ಬೆಂಗಳೂರಲ್ಲಿ ಹೇಗಿದೆ ವಾತಾವರಣ?: ಬೆಂಗಳೂರು ನಗರದಲ್ಲಿಂದು 28.8 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಇದ್ದರೆ, 19.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಇದೆ. ಹೆಚ್ಎಎಲ್ನಲ್ಲಿ 29.5 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ಇರಲಿದ್ದು, 18.9 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ಇರಲಿದೆ. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 29.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ ದಾಖಲಾಗಿದೆ.
ಉಕ್ಕಿ ಹರಿಯುತ್ತಿವೆ ಉತ್ತರದ ನದಿಗಳು: ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಮಳೆ ಮುಂದುವರಿದಿದೆ. ಪರಿಣಾಮ ಉತ್ತರ ಪ್ರದೇಶದಲ್ಲಿ ನದಿಗಳು ಇನ್ನೂ ಉಕ್ಕಿ ಹರಿಯುತ್ತಿವೆ. ಪ್ರಯಾಗ್ರಾಜ್ನಲ್ಲಿ, ಈ ವರ್ಷ ನಾಲ್ಕನೇ ಬಾರಿಗೆ ಗಂಗಾ-ಯಮುನಾ ನದಿಗಳ ನೀರು ಬಡಿ ಹನುಮಾನ್ ಮಂದಿರವನ್ನು ಪ್ರವೇಶಿಸಿದೆ. ಆಗ್ರಾದಲ್ಲಿ ಚಂಬಲ್ ಹಾಗೂ ಯಮುನಾ ನದಿಯ ನೀರಿನ ಮಟ್ಟ ಕಡಿಮೆಯಾಗಿದ್ದು, ಸ್ಥಳೀಯರು ನಿಟ್ಟಿಸಿರು ಬಿಟ್ಟಿದ್ದಾರೆ. ಆದರೆ, ಬನಾರಸ್ನಲ್ಲಿ ನಿರಂತರ ಮಳೆಯ ಪರಿಣಾಮ ಗಂಗಾ ನದಿಯ ನೀರಿನ ಮಟ್ಟ ಹೆಚ್ಚಾಗುತ್ತಿರುಬುದು ಆತಂಕ ತರಿಸಿದೆ. ಗಂಗಾ ನದಿಯ ನೀರಿನ ಮಟ್ಟ ಸುಮಾರು 68 ಮೀಟರ್ ದಾಟಿದ್ದರಿಂದ ಮಣಿಕರ್ಣಿಕಾ ಸೇರಿದಂತೆ ಹರಿಶ್ಚಂದ್ರ ಘಾಟ್ನ ಕೆಳಗಿನ ಭಾಗವೂ ನೀರಿನಲ್ಲಿ ಮುಳುಗಿದೆ. ಇದರಿಂದಾಗಿ ಅಂತ್ಯಕ್ರಿಯೆಗೆ ಕಷ್ಟವಾಗುತ್ತಿದೆ.
ಹನುಮಾನ್ ದೇವಾಲಯಕ್ಕೆ ನುಗ್ಗಿದ ನೀರು: ಪ್ರತಿ ವರ್ಷ ಗಂಗಾ ನದಿ ನೀರು ಪ್ರಯಾಗ್ರಾಜ್ನ ಬಡೇ ಹನುಮಾನ್ ದೇವಾಲಯಕ್ಕೆ ಪ್ರವೇಶಿಸುವುದು ಸಾಮಾನ್ಯ. ಆದರೆ, ಈ ಬಾರಿ ನಾಲ್ಕನೇ ಬಾರಿಗೆ ದೇವಾಲಯಕ್ಕೆ ಪ್ರವೇಶಿಸಿದ್ದು ವಿಶೇಷ. ಜುಲೈ 15ರಂದು, ಮೊದಲ ಬಾರಿಗೆ ಗಂಗಾ-ಯಮುನಾ ನೀರು ಗರ್ಭಗುಡಿಯನ್ನು ಪ್ರವೇಶಿಸಿತ್ತು. ಇದಾದ ನಂತರ, ಜುಲೈ 17, ಜುಲೈ 29 ನೀರು ಗರ್ಭಗುಡಿ ಪ್ರವೇಶಿಸಿತ್ತು. ಈಗ ಆಗಸ್ಟ್ 25ರಂದು (ಸೋಮವಾರ) ಮತ್ತೆ ಗರ್ಭಗುಡಿಯನ್ನು ಪ್ರವೇಶಿಸಿತ್ತು. ಗಂಗಾ ಮಾತೆ ಒಂದು ವರ್ಷದಲ್ಲಿ ನಾಲ್ಕು ಬಾರಿ ಹನುಮಾನ್ಜಿಗೆ ಸ್ನಾನ ಮಾಡಿದ ಈ ಅದ್ಭುತ ಘಟನೆ ಬಹುಶಃ ಇತಿಹಾಸದಲ್ಲಿ ಹಿಂದೆಂದೂ ಸಂಭವಿಸಿಲ್ಲ ಎಂದು ಶ್ರೀಮಠದ ಪೀಠಾಧೀಶ ಬಲವೀರ್ ಗಿರಿ ಸ್ವಾಮೀಜಿ ಹೇಳಿದ್ದಾರೆ.


