ರಾಜ್ಯದಲ್ಲಿ ಇನ್ನೂ 2 ದಿನ ಸಾಧಾರಣ ಮಳೆ
ಬೆಂಗಳೂರು, ನವೆಂಬರ್ 22: ಬಂಗಾಳ ಕೊಲ್ಲಿ ಮತ್ತು ಅರಬ್ಬೀ ಸಮುದ್ರದಲ್ಲಿ ಉಂಟಾಗಿದ್ದ ವಾಯುಭಾರ ಕುಸಿತ ದುರ್ಬಲಗೊಂಡಿದೆ. ಆದರೆ ಮೇಲ್ಮೈ ಸುಳಿಗಾಳಿ ಸಕ್ರಿಯವಾಗಿದ್ದರಿಂದ ಕರ್ನಾಟಕದ ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಇನ್ನೂ ಎರಡು ದಿನಗಳ ಕಾಲ ಸಾಧಾರಣ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಲಾಗಿದೆ.
ಕಳೆದೊಂದು ವಾರದಿಂದ ರಾಜ್ಯದಲ್ಲಿ ಸುರಿಯುತ್ತಿರುವ ಅಬ್ಬರದ ಮಳೆ ಮುಂದಿನ ಎರಡು ದಿನ ತಗ್ಗಲಿದೆ. ಆದರೆ ರಾಜ್ಯದ ಬಹುತೇಕ ಭಾಗಗಳಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಲಿದ್ದು, ಒಂದೆರಡು ಬಾರಿ ಜೋರು ಮಳೆಯಾಗಲಿದೆ. ಭಾನುವಾರ ಹಗಲು ಬಿಡುವು ನೀಡಿದ್ದ ಮಳೆ, ಸಂಜೆ ವೇಳೆಗೆ ಮತ್ತೆ ಸುರಿದಿದೆ.
ಬೆಂಗಳೂರಿನ ತಾಪಮಾನ ಎಷ್ಟಿರಲಿದೆ?
ಸೋಮವಾರ ಬೆಂಗಳೂರಿನಲ್ಲಿ ಕನಿಷ್ಠ 19, ಗರಿಷ್ಠ 27 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಲಿದೆ. ಮೇಲ್ಮೈ ಸುಳಿಗಾಳಿ ದುರ್ಬಲಗೊಳ್ಳುತ್ತಿರುವ ಹಿನ್ನೆಲೆ ಬುಧವಾರದಿಂದ ರಾಜ್ಯದಲ್ಲಿ ಮಳೆಯ ಪ್ರಮಾಣ ತಗ್ಗಲಿದೆ. ದಕ್ಷಿಣ ಒಳನಾಡು ಮತ್ತು ಕರಾವಳಿ ಭಾಗದಲ್ಲಿಯೂ ಮಳೆಯ ಅಬ್ಬರ ಕಡಿಮೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ವಾಯುಭಾರ ಕುಸಿತ ಹಿನ್ನೆಲೆ ನೆರೆಯ ರಾಜ್ಯಗಳಾದ ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲೂ ಮಳೆಯಾಗುತ್ತಿದೆ.ಗೋವಾ, ಮಹಾರಾಷ್ಟ್ರ, ಕೇರಳ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳಲ್ಲೂ ಮಳೆಯಾಗುತ್ತಿದೆ. ಗೋವಾದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಪ್ರವಾಸಿಗರು ಎಚ್ಚರಿಕೆಯಿಂದಿರಬೇಕು ಎಂದು ಸರ್ಕಾರ ಸೂಚನೆ ನೀಡಿದೆ. ಪ್ರವಾಸಕ್ಕೆ ಬರುತ್ತಿದ್ದರೆ ರದ್ದುಗೊಳಿಸಿ ಎಂದು ಸಲಹೆ ನೀಡಲಾಗಿದೆ.
ಬೆಂಗಳೂರಿನಲ್ಲಿ ಮುಂದುವರಿಯಲಿದೆ ಮಳೆ
ಬೆಂಗಳೂರಿಗೆ ಇವತ್ತು ಸಹ ಮಳೆಯ ಅಲರ್ಟ್ ಇರುತ್ತದೆ ಎಂದಿರುವ ಹವಾಮಾನ ಇಲಾಖೆ, ಇವತ್ತೂ ಸಹ ಧಾರಾಕಾರ ಮಳೆ ಸುರಿಯುತ್ತಿರುತ್ತದೆ. ಈಗಷ್ಟೇ ಶಾಲೆಗೆ ಹೋಗುವುದಕ್ಕೆ ಶುರು ಮಾಡಿರುವ ವಿದ್ಯಾರ್ಥಿಗಳು, ಜ್ವರ, ಭಯದಿಂದ ಈಗೀಗ ಚೇತರಿಸಿಕೊಳ್ಳುತ್ತಿರುವ ಹಿರಿಯರು ಎಲ್ಲರ ಪಾಲಿಗೂ ಮಳೆ ದೊಡ್ಡ ಸಂಕಷ್ಟ ತಂದಿದೆ.
ಬೆಂಗಳೂರು ನಗರದಲ್ಲಿ ಭಾನುವಾರ ರಾತ್ರಿ ಸುರಿದ ಮಳೆಗೆ ರಸ್ತೆಯಲ್ಲಿ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಕೆಲವೆಡೆ ಮನೆಗಳಿಗೂ ನೀರು ನುಗ್ಗಿದೆ. ಪ್ರಮುಖ ರಸ್ತೆಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಬಂಗಾಳ ಕೊಲ್ಲಿಯಿಂದ ಅರಬ್ಬಿ ಸಮುದ್ರಕ್ಕೆ ಮೋಡಗಳು ಸಾಗುವ ಮಾರ್ಗದಲ್ಲಿ ಇರುವ ಎಲ್ಲಾ ಪ್ರದೇಶಗಳಿಗೆ ಸದ್ಯಕ್ಕಂತೂ ಮಳೆಯಿಂದ ಮುಕ್ತಿ ಇಲ್ಲ. ಹಾಗಾಗಿ ಮಳೆಗೆ ಹಿಡಿಶಾಪ ಹಾಕುವುದನ್ನು ಬಿಟ್ಟು ಅದರೊಂದಿಗೇ ಬದುಕಲು ಇಷ್ಟವಿಲ್ಲದಿದ್ದರೂ, ಕಷ್ಟವಾದರೂ ಸಜ್ಜಾಗಲೇಬೇಕಿದೆ.
ರಾಜ್ಯದಲ್ಲಿ ಎಲ್ಲೆಲ್ಲಿ ಮಳೆ?
ಹುಬ್ಬಳ್ಳಿ, ಗದಗ, ಧಾರವಾಡ, ಕೊಪ್ಪಳ, ಬಾಗಲಕೋಟೆ, ವಿಜಯಪುರ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ಬಿಸಿಲುನಾಡು ಪ್ರದೇಶಗಳಾದ ರಾಯಚೂರು, ಬೀದರ್, ಬಳ್ಳಾರಿಯಲ್ಲಿಯೂ ಸೋಮವಾರ ಸಹ ಮೋಡ ಕವಿದ ವಾತಾವರಣ ಮುಂದುವರಿಯಲ್ಲಿದ್ದು, ಕೆಲವು ಭಾಗಗಳಲ್ಲಿ ತುಂತುರು ಮಳೆಯಾಗಲಿದೆ.
ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ಯೆಲ್ಲೋ ಅಲರ್ಟ್ ಘೋಷಣೆ ಮಾಡಲಾಗಿದ್ದು, ಮಳೆಯಾಗಲಿದೆ. ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಹಾಸನ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ರಾಮನಗರ, ಕೊಡಗು, ಮಂಡ್ಯದಲ್ಲಿಯೂ ಸಾಧಾರಣ ಮಳೆ ಮುಂದುವರಿಯಲಿದೆ.