ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ, ಪಕ್ಷದಲ್ಲೇ ಇರುತ್ತೇನೆ: ಸುರೇಶ್ ಗೌಡ
ಬೆಂಗಳೂರು, ಸೆ.30- ತುಮಕೂರು ಜಿಲ್ಲಾ ಬಿಜೆಪಿ ಅಧ್ಯಕ್ಷ ಸ್ಥಾನಕ್ಕೆ ನೀಡಿರುವ ರಾಜೀನಾಮೆ ಹಿಂಪಡೆಯುವ ಪ್ರಶ್ನೆಯೇ ಇಲ್ಲ. ಪಕ್ಷದಲ್ಲೇ ಇರುತ್ತೇನೆ, ಬೇರೆ ಎಲ್ಲೂ ಹೋಗಲ್ಲ ಎಂದು ಮಾಜಿ ಶಾಸಕ ಸುರೇಶ್ ಗೌಡ ಸ್ಪಷ್ಟಪಡಿಸಿದ್ದಾರೆ. ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಮಾಜಿ ಶಾಸಕ ಸುರೇಶ್ ಗೌಡ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ನಿವಾಸಕ್ಕೆ ಆಗಮಿಸಿದ್ದರು. ಈ ವೇಳೆ ಬಿಎಸ್‍ವೈ ಜೊತೆ ತುಮಕೂರು ಜಿಲ್ಲಾ ರಾಜಕಾರಣದ ಕುರಿತು ಮಾತುಕತೆ ನಡೆಸಿದರು.
ರಾಜೀನಾಮೆ ನೀಡುವ ಸ್ಥಿತಿ ನಿರ್ಮಾಣದ ಬಗ್ಗೆ ವಿವರಣೆ ನೀಡಿದರು ಎಂದು ತಿಳಿದು ಬಂದಿದೆ. ಬಿಎಸ್‍ವೈ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದೇನೆ. ಅವರಿಗೆ ನಾನು ಮಾಹಿತಿ ಕೊಡಬೇಕಿತ್ತು ಕೊಟ್ಟಿದ್ದೇನೆ. ಆದರೆ, ರಾಜೀನಾಮೆ ಹಿಂಪಡೆಯುವ ಬಗ್ಗೆ ಅವರ ಜೊತೆ ಮಾತುಕತೆ ನಡೆಸಿಲ್ಲ.
ಈ ಬಗ್ಗೆ ನಾನು ಅವರ ಜೊತೆ ಯಾಕೆ ಚರ್ಚೆ ಮಾಡಲಿ, ಅವರಿಗೂ ಇದಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು. ಈ ಹಿಂದೆ ನಾನು ಯಡಿಯೂರಪ್ಪ, ಕೆಜೆಪಿಗೆ ಹೋದಾಗ ಪಕ್ಷ ಬಿಟ್ಟು ಹೋಗಿಲ್ಲ. ಇನ್ನು ಈಗ ಬೇರೆ ಪಕ್ಷಕ್ಕೆ ಹೋಗುವ ಚಿಂತೆ ಮಾಡುತ್ತೇನಾ, ಸದ್ಯ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಾನು ರಾಜೀನಾಮೆ ನೀಡಿದ್ದರೂ ಪಕ್ಷದ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ ಎಂದು ಕಾಂಗ್ರೆಸ್ ಸೇರುವ ವಿಚಾರವನ್ನು ಅಲ್ಲಗಳೆದರು.
ಕೆಲವು ವ್ಯಕ್ತಿಗಳು ನನಗೆ ಕೆಟ್ಟದ್ದನ್ನು ಮಾಡಿರಬಹುದು. ಆದರೆ, ಪಕ್ಷದಿಂದ ನನಗೆ ಕೆಟ್ಟದ್ದು ಆಗಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರು ನನಗೆ ಯಡಿಯೂರಪ್ಪ ಅವರಿಗಿಂತ ಆತ್ಮೀಯರು. ಅವರ ಜೊತೆ ನಾನು ತುಂಬಾ ಚೆನ್ನಾಗಿದ್ದೇನೆ. ಬೊಮ್ಮಾಯಿ ಮೇಲೆ ನಮಗೆ ತುಂಬಾ ನಂಬಿಕೆ ಇದೆ. ಅವರ ಜೊತೆ ಇದ್ದು ಪಕ್ಷವನ್ನು ಒಟ್ಟಿಗೆ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.