ರಸ್ತೆಯಲ್ಲಿ ಬೇಕಾಬಿಟ್ಟಿ ಗುಂಡಿ ಅಗೆಯುವವರ ವಿರುದ್ಧ ಶಿಸ್ತುಬದ್ಧ ಕ್ರಮಕ್ಕೆ ಬಿಬಿಎಂಪಿ!
ಬೆಂಗಳೂರಿನಲ್ಲಿ ಬೇಕಾಬಿಟ್ಟಿ ರಸ್ತೆ ಅಗೆದವರ ವಿರುದ್ಧ ಎಫ್ಐಆರ್ ಹಾಕುವಂತೆ ನಗರ ಪೊಲೀಸ್ ಆಯುಕ್ತರಿಗೆ ಬಿಬಿಎಂಪಿ ಪತ್ರ ಬರೆದಿದೆ. ರಸ್ತೆ ಹಾಗೂ ಮೂಲಭೂತ ಸೌಕರ್ಯ ವಿಭಾಗ ಮುಖ್ಯ ಅಭಿಯಂತರರು ಈ ಪತ್ರವನ್ನು ಬರೆದಿದ್ದಾರೆ.
ಬೆಂಗಳೂರಿನಲ್ಲಿ ಅನುಮತಿ ಇಲ್ಲದೇ ರಸ್ತೆ ಅಗೆದ್ರೆ ಇನ್ಮುಂದೆ ಎಫ್ಐಆರ್ ದಾಖಲಾಗುತ್ತದೆ. BESCOM, BWSSB ಅಥವಾ ಸಾರ್ವಜನಿಕರು ಯಾರೇ ರಸ್ತೆ ಅಗೆದರೂ ಕಡ್ಡಾಯವಾಗಿ ಅನುಮತಿ ತೆಗೆದುಕೊಳ್ಳಬೇಕು ಮತ್ತು ಕಾಮಗಾರಿ ಸ್ಥಳದಲ್ಲಿ ಕಡ್ಡಾಯವಾಗಿ ಬೋರ್ಡ್ ಹಾಕಬೇಕೆಂದು ಬಿಬಿಎಂಪಿ ಸೂಚಿಸಿದೆ.
ಜನವರಿ 30ರಂದು ಬೆಂಗಳೂರಿನ ಮಾಗಡಿ ರಸ್ತೆಯ ಬ್ಯಾಡರಹಳ್ಳಿ ಬಳಿ ಗುಂಡಿ ತಪ್ಪಿಸಲು ಹೋಗಿ ಆಯತಪ್ಪಿ ಬಿದ್ದ ಮಹಿಳೆ ಮೇಲೆ ಲಾರಿ ಹರಿದಿತ್ತು. ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಮೃತ ಮಹಿಳೆಯನ್ನು ಶರ್ಮಿಳಾ ಎಂದು ಗುರುತಿಸಲಾಗಿತ್ತು.ಅಂಜನಾನಗರ ಮುಖ್ಯ ರಸ್ತೆಯಲ್ಲಿ ಜಲಮಂಡಳಿ ರಸ್ತೆ ಅಗೆದು ದುರಸ್ತಿ ಕಾರ್ಯ ಮಾಡಿರಲಿಲ್ಲ. ಈ ಹಿನ್ನೆಲೆ ರಸ್ತೆಯಲ್ಲಿ ಗುಂಡಿ ನಿರ್ಮಾಣವಾಗಿತ್ತು. ಮಹಿಳೆ ಸಾವಿನ ಬೆನ್ನಲ್ಲೇ ಬಿಬಿಎಂಪಿ ಮತ್ತು ಜಲಮಂಡಳಿ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ಈ ಕುರಿತು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುರತ್ತಿದ್ದಂತೆ ಎಚ್ಚೆತ್ತಿರುವ ಬಿಬಿಎಂಪಿ ಪ್ರಕರಣ ದಾಖಲಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿದೆ.ಬಿಬಿಎಂಪಿ ವ್ಯಾಪ್ತಿಗೆ ಒಳಪಡುವ ರಸ್ತೆಗಳನ್ನು ಅಗೆಯುವ ಮೊದಲು ಅನುಮತಿ ಪಡೆದುಕೊಳ್ಳುವ ನಿಯಮ ಈ ಮೊದಲು ಸಹ ಇದೆ. ಆದ್ರೆ ನಿಯಮ ಕಾರ್ಯರೂಪಕ್ಕೆ ಬಂದಿಲ್ಲ.