ವಿದೇಶ
Trending

ರಷ್ಯಾ-ಉಕ್ರೇನ್ ಸಂಘರ್ಷವು 'ಮೋದಿಯ ಯುದ್ಧ'; ಟ್ರಂಪ್​ ವ್ಯಾಪಾರ ಸಲಹೆಗಾರ ನವರೊ ಗಂಭೀರ ಆರೋಪ

ಭಾರತ ಹಾಗೂ ಅಮೆರಿಕ ಜೊತೆ ನಡೆಯುತ್ತಿರುವ ವ್ಯಾಪಾರ ಒಪ್ಪಂದದ ಬಿಕ್ಕಟ್ಟಿನ ಮಧ್ಯೆ, ಉಕ್ರೇನ್‌ ಹಾಗೂ ರಷ್ಯಾ ನಡುವಿನ ಯುದ್ಧವನ್ನು ‘ಮೋದಿಯ ಯುದ್ಧ’ ಎಂದು ಶ್ವೇತಭವನದ ವ್ಯಾಪಾರ ಸಲಹೆಗಾರ ಪೀಟರ್ ನವರೊ ಆಘಾತಕಾರಿ ಹೇಳಿಕೆ ನೀಡಿದ್ದಾರೆ. ಅಲ್ಲದೆ, ಭಾರತವು ರಷ್ಯಾದಿಂದ ತೈಲ ಖರೀದಿಸುತ್ತಿರುವುದು ಉಕ್ರೇನ್‌-ರಷ್ಯಾ ಸಂಘರ್ಷಕ್ಕೆ ಉತ್ತೇಜನ ನೀಡುತ್ತಿದೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಬುಧವಾರ ಬ್ಲೂಮ್‌ಬರ್ಗ್ ಟೆಲಿವಿಷನ್‌ನ ಬ್ಯಾಲೆನ್ಸ್ ಆಫ್ ಪವರ್‌ಗೆ ನೀಡಿದ ಸಂದರ್ಶನದಲ್ಲಿ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ವ್ಯಾಪಾರ ಮತ್ತು ಉತ್ಪಾದನೆಯ ಪ್ರಮುಖ ಸಲಹೆಗಾರರಾಗಿರುವ ನವರೊ ಮಾತನಾಡಿ, ರಷ್ಯಾ ತನ್ನ ತೈಲವನ್ನು ಭಾರತಕ್ಕೆ ಮಾರಾಟದಿಂದ ಗಳಿಸುವ ಹಣವನ್ನು ತನ್ನ ಯುದ್ಧಕ್ಕೆ ಮತ್ತು ಹೆಚ್ಚಿನ ಉಕ್ರೇನಿಯನ್ನರನ್ನು ಕೊಲ್ಲಲು ಬಳಸುತ್ತದೆ ಎಂದು ಆರೋಪಿಸಿದರು.

ಭಾರತೀಯ ಸರಕುಗಳ ಮೇಲೆ ಅಮೆರಿಕ ಶೇಕಡಾ 50ರಷ್ಟು ಸುಂಕವನ್ನು ವಿಧಿಸುತ್ತಿದ್ದು, ಅದರ ಪರಿಷ್ಕರಣೆಗೆ ನವದೆಹಲಿಯೊಂದಿಗೆ ವಾಷಿಂಗ್ಟನ್ ಮಾತುಕತೆ ನಡೆಸುತ್ತಿದೆಯೇ ಎಂಬ ಬಗ್ಗೆ ಪ್ರತಿಕ್ರಿಯಿಸಿದ ನವರೊ, ”ನೋಡಿ, ಅದು ಸುಲಭ; ರಷ್ಯಾದ ತೈಲ ಖರೀದಿಸುವುದನ್ನು ಮತ್ತು ಯುದ್ಧದ ಪೋಷಣೆಗೆ ನೆರವಾಗುವುದನ್ನು ನಿಲ್ಲಿಸಿದರೆ ಭಾರತ ನಾಳೆಯೇ ಶೇಕಡಾ 25ರಷ್ಟು ರಿಯಾಯಿತಿ ಪಡೆಯುತ್ತದೆ. ಆದರೆ, ಅವರು ಹಾಗೆ ಮಾಡಲ್ಲ. ಇದು ನಮಗೆ ಗೊಂದಲವಾಗಿದೆ. ಮೋದಿ ಒಬ್ಬ ಮಹಾನ್ ನಾಯಕ. ಭಾರತ ಬುದ್ಧಿವಂತ ಜನರನ್ನು ಹೊಂದಿರುವ ಪ್ರಬುದ್ಧ ಪ್ರಜಾಪ್ರಭುತ್ವ. ನಮ್ಮೊಂದಿಗೆ ನೇರವಾಗಿ ಮಾತನಾಡುವ ಅವರು, ಹೆಚ್ಚಿನ ಪ್ರಮಾಣದಲ್ಲಿ ಸುಂಕವನ್ನು ಹೊಂದಿದ್ದರೂ, ನಮ್ಮಲ್ಲಿ ಜಗತ್ತಿನಲ್ಲಿಯೇ ಅತ್ಯಧಿಕ ಸುಂಕಗಳೇನು ಇಲ್ಲ ಎಂದು ಹೇಳುತ್ತಾರೆ. ಆದರೆ ನೀವು ಸಂಖ್ಯೆಗಳನ್ನು ನೋಡಿದರೆ ಅದು ನಿಮಗೆ ತಿಳಿಯುತ್ತದೆ” ಎಂದು ಹೇಳಿದ್ದಾರೆ.

”ಯುಎಸ್ ‘ಮೋದಿಯ ಯುದ್ಧ’ಕ್ಕೆ ಹಣಕಾಸು ಒದಗಿಸಬೇಕಾಗಿರುವುದರಿಂದ ಅಮೆರಿಕದಲ್ಲಿ ತೆರಿಗೆದಾರರು ಹಣವನ್ನು ಕಳೆದುಕೊಳ್ಳುತ್ತಿದ್ದಾರೆ” ಎಂದ ಅವರು, ”ನಾವು ರಷ್ಯಾದ ತೈಲ ಖರೀದಿ ಮಾಡುವುದನ್ನು ನಿಲ್ಲಿಸುವುದಿಲ್ಲ ಎಂದು ಭಾರತ ಹೇಳುತ್ತದೆ. ಅದರ ಅರ್ಥವೇನು? ಭಾರತವು ರಷ್ಯಾದ ತೈಲವನ್ನು ರಿಯಾಯಿತಿಯಲ್ಲಿ ಖರೀದಿಸಿ, ಬಳಿಕ ಭಾರತೀಯ ಸಂಸ್ಕರಣಾಗಾರರು ರಷ್ಯಾದ ಸಂಸ್ಕರಣಾಗಾರ ಸಹಭಾಗಿತ್ವದಲ್ಲಿ, ಅದನ್ನು ತಯಾರಿಸಿ ಪ್ರಪಂಚದ ಉಳಿದ ಭಾಗಗಳಿಗೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಾರೆ. ಇದರಿಂದ ರಷ್ಯಾ ತನ್ನ ಯುದ್ಧ ತಂತ್ರಕ್ಕೆ ಅಗತ್ಯ ಹಣಕಾಸು ಹೊಂದಲಿದ್ದು, ಹೆಚ್ಚಿನ ಉಕ್ರೇನಿಯನ್ನರನ್ನು ಕೊಲ್ಲಲು ಆ ಹಣವನ್ನು ಬಳಸುತ್ತದೆ. ಇದರ ಪರಿಣಾಮ, ಉಕ್ರೇನ್ ನಮಗೆ ಮತ್ತು ಯುರೋಪ್‌ಗೆ ಬಂದು ‘ನಮಗೆ ಹೆಚ್ಚಿನ ಹಣವನ್ನು ನೀಡಿ’ ಎಂದು ಕೋರುತ್ತದೆ. ಆದ್ದರಿಂದ ಭಾರತ ಮಾಡುತ್ತಿರುವ ಕೆಲಸದಿಂದಾಗಿ ಅಮೆರಿಕದಲ್ಲಿ ಎಲ್ಲರೂ ನಷ್ಟ ಅನುಭವಿಸುತ್ತಾರೆ. ಗ್ರಾಹಕರು, ವ್ಯವಹಾರಗಳು, ಕಾರ್ಮಿಕರು ಹಾಗೂ ತೆರಿಗೆದಾರರು ಹಣ ಕಳೆದುಕೊಳ್ಳುತ್ತಾರೆ. ಏಕೆಂದರೆ ನಾವು ಮೋದಿಯ ಯುದ್ಧಕ್ಕೆ ಹಣಕಾಸು ಒದಗಿಸಬೇಕಾಗಿದೆ. ಶಾಂತಿಯ ಹಾದಿಯು ಭಾಗಶಃ ನವದೆಹಲಿಯ ಮೂಲಕ ಸಾಗುತ್ತದೆ” ಎಂದು ಆರೋಪ ಮಾಡಿದ್ದಾರೆ.

ಅಮೆರಿಕವು ಚೀನಾದ ಮೇಲಿನ ಹತೋಟಿಯನ್ನು ಕಳೆದುಕೊಳ್ಳುತ್ತಿದೆಯೇ ಎಂದು ಕೇಳಿದಾಗ, ನವರೋ ಅವರು “ಈ ರಾಷ್ಟ್ರೀಯತಾವಾದಿ ಭದ್ರತಾ ತಂತ್ರಗಳ ಬಗ್ಗೆ ಬೇಸತ್ತಿದ್ದೇವೆ” ಎಂದು ಹೇಳಿದರು. ”ವಾಸ್ತವದಲ್ಲಿ, ಭಾರತ ಮತ್ತು ಚೀನಾ ರಷ್ಯಾದ ತೈಲವನ್ನು ಖರೀದಿಸುವುದನ್ನು ತಡೆಯಬೇಕು. ಅದನ್ನು ನಾಳೆಯೇ ಮಾಡಿದರೂ ಯುದ್ಧ ಮುಗಿಯುತ್ತದೆ. ಅಲ್ಲದೆ, ಯುರೋಪ್ ಇನ್ನೂ ರಷ್ಯಾದ ತೈಲವನ್ನು ಖರೀದಿಸುತ್ತಿರುವುದು ಹುಚ್ಚುತನ” ಎಂದು ತಿಳಿಸಿದರು.

”ದೇಶಗಳು ರಷ್ಯಾದ ತೈಲವನ್ನು ಖರೀದಿಸುವುದನ್ನು ನಿಲ್ಲಿಸಿದರೆ, ಪುಟಿನ್ ಯುದ್ಧಕ್ಕೆ ನೆರವು ಒದಗಿಸಲು ಹಣವಿಲ್ಲದಂತಾಗಲಿದೆ. ಇದು ಕೆಲವೇ ಸಮಯದ ವಿಚಾರವಾಗಿದೆ. ಆದ್ದರಿಂದ ಮೋದಿ ಅದರಲ್ಲಿ ದೊಡ್ಡ ಭಾಗವಾಗಿದ್ದಾರೆ. ಇದು ದಿನಕ್ಕೆ ಒಂದೂವರೆ ಮಿಲಿಯನ್ ಬ್ಯಾರೆಲ್ ತೈಲದ ಮೇಲಿದೆ. ಅದರಿಂದ ಉಕ್ರೇನಿಯನ್ನರನ್ನು ಕೊಲ್ಲಲು ಬಹಳಷ್ಟು ಡ್ರೋನ್‌ಗಳು ಮತ್ತು ಬಾಂಬ್‌ಗಳನ್ನು ಖರೀದಿಸಲಾಗುತ್ತದೆ” ಎಂದು ಪೀಟರ್ ನವರೊ ಹೇಳಿದರು.

ಸುಂಕಗಳ ಬಗ್ಗೆ ಭಾರತೀಯರು ತುಂಬಾ ದುರಹಂಕಾರ ತೋರುತ್ತಿರುವುದು ನಮಗೆ ತೊಂದರೆಯಾಗಿದೆ ಎಂದ ನವರೋ , ”ಭಾರತೀಯರು ತಾವು ಹೆಚ್ಚಿನ ಸುಂಕ ವಿಧಿಸುವುದಿಲ್ಲ ಎನ್ನುತ್ತಾರೆ. ಅದು ಸಾರ್ವಭೌಮತ್ವ. ನಾವು ಯಾರಿಂದ ಬೇಕಾದರೂ ತೈಲ ಖರೀದಿಸಬಹುದು ಎನ್ನಬಹುದು. ಆದರೆ ನಿಮ್ಮದು (ಭಾರತ) ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ. ಎಲ್ಲರೂ ಒಂದು ಎಂಬ ರೀತಿಯಲ್ಲಿ ವರ್ತಿಸಿ. ಪ್ರಜಾಪ್ರಭುತ್ವಗಳ ಪರವಾಗಿರಿ. ನೀವು ಸರ್ವಾಧಿಕಾರಿಗಳೊಂದಿಗೆ ಹಾಸಿಗೆ ಹಿಡಿಯುತ್ತಿದ್ದೀರಿ. ಚೀನಾ ಹಾಗೂ ನೀವು ದಶಕಗಳಿಂದ ಪರಸ್ಪರ ಶಾಂತ ಯುದ್ಧದಲ್ಲಿದ್ದೀರಿ. ಅವರು ನಿಮ್ಮ ಅಕ್ಸಾಯ್ ಚಿನ್ ಮತ್ತು ಇತರ ಪ್ರದೇಶವನ್ನು ಆಕ್ರಮಿಸಿದ್ದಾರೆ. ಅವರು ನಿಮ್ಮ ಸ್ನೇಹಿತರಲ್ಲ” ಎಂದರು.

ಭಾರತ ಮತ್ತು ಯುಎಸ್ ನಡುವಿನ ಸಂಬಂಧವು ಹದಗೆಡುತ್ತಿರುವ ಈ ಸಂದೆರ್ಭದಲ್ಲಿ ನವರೊ ಅವರ ಇಂತಹ ಹೇಳಿಕೆಗಳನ್ನು ನೀಡಿದ್ದಾರೆ. ರಷ್ಯಾದಿಂದ ತೈಲ ಖರೀದಿ ಮಾಡುತ್ತಿರುವ ಭಾರತದ ಮೇಲೆ ಟ್ರಂಪ್ ವಿಧಿಸಿದ ಹೆಚ್ಚುವರಿ 25 ಪ್ರತಿಶತ ಸುಂಕವು ಬುಧವಾರ(ನಿನ್ನೆ) ಜಾರಿಗೆ ಬಂದಿದೆ. ಭಾರತದ ಸರಕಿನ ಮೇಲೆ ಅಮೆರಿಕ ವಿಧಿಸಿರುವ ಒಟ್ಟು ಸುಂಕಗಳ ಮೊತ್ತವು ಶೇಕಡಾ 50ಕ್ಕೆ ಏರಿದೆ.

Related Articles

Leave a Reply

Your email address will not be published. Required fields are marked *

Back to top button