ಇತ್ತೀಚಿನ ಸುದ್ದಿದೇಶವಿದೇಶಸುದ್ದಿ

ರಷ್ಯಾದಿಂದ ಡಿಸ್ಕೌಂಟ್‌ ದರದಲ್ಲಿ ಕಚ್ಚಾ ತೈಲ ಖರೀದಿಸಲು ಮುಂದಾಗಿರುವ ಭಾರತ!

ಹೊಸದಿಲ್ಲಿ: ರಷ್ಯಾದಿಂದ ಡಿಸ್ಕೌಂಟ್‌ ದರದಲ್ಲಿ ಕಚ್ಚಾ ತೈಲ ಖರೀದಿಸಲು ಮುಂದಾಗಿರುವ ಭಾರತವನ್ನು ಟೀಕಿಸಿರುವ ಅಮೆರಿಕ ಸೇರಿದಂತೆ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ, ಈ ವಿಚಾರದಲ್ಲಿ ರಾಜಕೀಯ ಬೆರೆಸದಿರುವಂತೆ ಭಾರತೀಯ ವಿದೇಶಾಂಗ ಇಲಾಖೆ ಮನವಿ ಮಾಡಿದೆ.

ಭಾರತ  ನ್ಯಾಯಬದ್ಧವಾಗಿ ತನ್ನ ಅವಶ್ಯಕತೆಗಾಗಿ ರಷ್ಯಾದಿಂದ ತೈಲ ಖರೀದಿಸುತ್ತಿರುವುದನ್ನು ರಾಜಕೀಯಗೊಳಿಸಬಾರದು ಎಂದು ವಿದೇಶಾಂಗ ಇಲಾಖೆಯ ವಕ್ತಾರ ಅರಿಂದಮ್‌ ಬಗ್ಚಿ ತಿಳಿಸಿದ್ದಾರೆ.

”ಭಾರತ ತನ್ನ ತೈಲದ ಅಗತ್ಯಕ್ಕೆ ಬಹುತೇಕ ಆಮದನ್ನೇ ಅವಲಂಬಿಸಿದೆ. ತೈಲೋತ್ಪಾದಕರು ನೀಡುವ ಸ್ಪರ್ಧಾತ್ಮಕ ಪ್ರಸ್ತಾಪಗಳನ್ನು ಪರಿಶೀಲಿಸಲಾಗುವುದು” ಎಂದವರು ಹೇಳಿದ್ದಾರೆ.

ತೈಲದ ವಿಚಾರದಲ್ಲಿ ಸ್ವಾವಲಂಬಿಯಾಗಿರುವ ಅಥವಾ ಸ್ವತಃ ರಷ್ಯಾದಿಂದ ಆಮದು ಮಾಡುತ್ತಿರುವ ರಾಷ್ಟ್ರಗಳು, ನಿರ್ಬಂಧಿತ ವ್ಯಾಪಾರವನ್ನು ಬೋಧಿಸುವ ವಿಶ್ವಾಸಾರ್ಹತೆಯನ್ನು ಹೊಂದಿರುವುದಿಲ್ಲ ಎಂದು ಅವರು ಹೇಳಿದರು.

ಭಾರತವು ರಷ್ಯಾದಿಂದ ಡಿಸ್ಕೌಂಟ್‌ ದರದಲ್ಲಿ ಕಚ್ಚಾ ತೈಲವನ್ನು ಖರೀದಿಸಲು ಮುಂದಾಗಿರುವ ಬಗ್ಗೆ ಕೇಳಿ ಬಂದಿರುವ ಟೀಕೆಗಳಿಗೆ ಅವರು ತಿರುಗೇಟು ನೀಡಿದರು. ವರದಿಗಳ ಪ್ರಕಾರ ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾದಿಂದ ತೈಲ ಖರೀದಿಸದಂತೆ ಭಾರತದ ಮೇಲೆ ಒತ್ತಡ ಹೇರುತ್ತಿವೆ.

ಭಾರತಕ್ಕೆ ರಷ್ಯಾ ಒಂದೇ ಪ್ರಮುಖ ತೈಲ ಸರಬರಾಜುದಾರ ರಾಷ್ಟ್ರವಲ್ಲ. ಮುಖ್ಯವಾಗಿ ಯುರೋಪ್‌ನ ಹಲವಾರು ರಾಷ್ಟ್ರಗಳು ರಷ್ಯಾದ ತೈಲ ಮತ್ತು ನೈಸರ್ಗಿಕ ಅನಿಲ ಖರೀದಿಸುತ್ತಿವೆ. ಭಾರತ ಪ್ರಮುಖ ಇಂಧನ ಆಮದುದಾರ ದೇಶವಾಗಿ ಲಭ್ಯವಿರುವ ಎಲ್ಲಆಯ್ಕೆಗಳನ್ನು ಪರಿಶೀಲಿಸುತ್ತಿದೆ ಎಂದು ಬಗ್ಚಿ ಹೇಳಿದರು.

ಶ್ವೇತಭವನದ ವಕ್ತಾರರು ಹೇಳಿದ್ದೇನು?
ಭಾರತ ಮತ್ತು ಕೆಲ ರಾಷ್ಟ್ರಗಳು ರಷ್ಯಾದಿಂದ ಡಿಸ್ಕೌಂಟ್‌ ದರದಲ್ಲಿಕಚ್ಚಾ ತೈಲ ಖರೀದಿಸಲು ಮುಂದಾಗಿರುವ ವರದಿಗಳ ಬಗ್ಗೆ ಪ್ರತಿಕ್ರಿಯಿಸಿರುವ ಶ್ವೇತಭವನದ ವಕ್ತಾರೆ ಜೆನ್‌ ಪ್ಸಾಕಿ, ” ಯಾವುದೇ ರಾಷ್ಟ್ರವು ಅಮೆರಿಕ ವಿಧಿಸಿರುವ ನಿರ್ಬಂಧ ಮತ್ತು ಸಲಹೆಗಳನ್ನು ಪಾಲಿಸುವುದು ಸೂಕ್ತ. ಒಂದು ವೇಳೆ ಅನುಸರಿಸದಿದ್ದರೆ ನಿರ್ಬಂಧಗಳ ಉಲ್ಲಂಘನೆಯಾಗದಿರಬಹುದು. ಆದರೆ ಸಮಕಾಲೀನ ಇತಿಹಾಸದ ಪುಸ್ತಕದ ಯಾವ ಬದಿಯಲ್ಲಿ ನಿಲ್ಲುತ್ತೀರಿ ಎಂಬುದನ್ನು ಯೋಚಿಸಿ” ಎಂದು ಹೇಳಿದ್ದರು.

ಆದರೆ ಶ್ವೇತಭವನದ ವಕ್ತಾರೆಯ ಟೀಕೆಗೆ ಸಾಮಾಜಿಕ ಜಾಲ ತಾಣಗಳಲ್ಲಿ ತೀಕ್ಷ್ಣ ಪ್ರತಿಕ್ರಿಯೆಯೂ ಎದುರಾಗಿದೆ. ‘ಅಮೆರಿಕದ ಮಿತ್ರ ರಾಷ್ಟ್ರಗಳಿರುವ ಯುರೋಪ್‌ ಶೇ.45 ಅನಿಲವನ್ನು ರಷ್ಯಾದಿಂದ ಈಗಲೂ ಖರೀದಿಸುತ್ತಿವೆ. ಜರ್ಮನಿ ಶೇ.55 ನೈಸರ್ಗಿಕ ಅನಿಲ, ಶೇ.34 ತೈಲವನ್ನು ಅಲ್ಲಿಂದ ಕೊಳ್ಳುತ್ತಿದೆ. ಆದರೆ ಭಾರತ ತನ್ನ ಇತಿಹಾಸದಲ್ಲಿ ಎಂದೂ ರಷ್ಯಾದಿಂದ ಇಷ್ಟು ಖರೀದಿಸಿಲ್ಲ. ಹೀಗಾಗಿ ಇದು ಪೂರ್ವಾಗ್ರಹಪೀಡಿತ ಎಂದು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button