ರಮೇಶ್ ಜಾರಕಿಹೊಳಿ ‘cd’ ಕೇಸ್ : ಎಸ್‌ಐಟಿ ಅಸ್ತಿತ್ವ ಪ್ರಶ್ನಿಸಿದ ಅರ್ಜಿ ಮುಂದೂಡಿಕೆ
ಬೆಂಗಳೂರು, ಸೆ. 27: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಬಿಡುಗಡೆ ಪ್ರಕರಣ ಸಂಬಂಧ ಎಸ್‌ಐಟಿ ತನಿಖಾ ತಂಡ ಅಂತಿಮ ವರದಿ ಸಲ್ಲಿಸಲು ಇನ್ನೂ ಕಾಲ ಕೂಡಿ ಬಂದಂತೆ ಕಾಣುತ್ತಿಲ್ಲ. ಎಸ್‌ಐಟಿ ತನಿಖಾ ತಂಡ ರಚನೆಯ ಕಾನೂನು ಬದ್ಧತೆ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಅಕ್ಟೋಬರ್ 7ಕ್ಕೆ ಮುಂದೂಡಿದೆ. ಹೀಗಾಗಿ ತನಿಖಾ ವರದಿಯನ್ನು ಸಲ್ಲಿಸುವ ಎಸ್‌ಐಟಿ ತಂಡದ ಕಾರ್ಯಕ್ಕೆ ಹಿನ್ನೆಡೆಯಾಗಿದೆ.
ಎಸ್‌ಐಟಿ ಮನವಿಗೆ ಆಕ್ಷೇಪ : ರಮೇಶ್ ಜಾರಕಿಹೊಳಿ ಅಶ್ಲೀಲ ಸಿಡಿ ಬಿಡುಗಡೆ ಸಂಬಂಧ ದಾಖಲಾಗಿದ್ದ ಎರಡು ದೂರುಗಳ ತನಿಖೆ ಪುರ್ಣಗೊಳಸಿರುವ ಎಸ್‌ಐಟಿ ತನಿಖಾ ತಂಡ ಎರಡು ಪ್ರಕರಣದಲ್ಲಿ ಅಂತಿಮ ವರದಿ ಸಲ್ಲಿಸಲು ಸಿದ್ಧತೆ ನಡೆಸಿದೆ. ಸಂತ್ರಸ್ತ ಯುವತಿ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ನೀಡಿದ್ದ ದೂರಿಗೆ ಸಂಬಂಧಿಸಿದಂತೆ ಯಾವುದೇ ಸಾಕ್ಷಾಧಾರ ಇಲ್ಲದ ಹಿನ್ನೆಲೆಯಲ್ಲಿ “ಬಿ” ವರದಿ ಸಲ್ಲಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಹನಿಟ್ರ್ಯಾಪ್ ಮಾಡಿರುವ ಆರೋಪ ಸಂಬಂಧ ರಮೇಶ್ ಜಾರಕಿಹೊಳಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಿದ್ದ ಪ್ರಕರಣ ಸಂಬಂಧ ದೋಷಾರೋಪ ಪಟ್ಟಿ ಸಲ್ಲಿಸಲು ಎಸ್‌ಐಟಿ ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದರೆ, ಎಸ್‌ಐಟಿ ತನಿಖಾ ತಂಡದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಸಂತ್ರಸ್ತ ಯುವತಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ವಿಭಾಗೀಯ ಪೀಠ ಸೋಮವಾರ ನಡೆಸಿತು. ಎಸ್‌ಐಟಿ ತನಿಖೆ ಪೂರ್ಣಗೊಳಿಸಿದೆ. ಅಂತಿಮ ವರದಿಯನ್ನು ಸಲ್ಲಿಸಲು ಅನುಮತಿ ನೀಡುವಂತೆ ಅಡ್ವೋಕೇಟ್ ಜನರಲ್ ಅರವಿಂದ ನಾವದಗಿ ಅವರು ಹೈಕೋರ್ಟ್ ಗೆ ಮನವಿ ಮಾಡಿದರು.
ಇದಕ್ಕೆ ಆಕ್ಷೇಪಣೆ ವ್ಯಕ್ತಪಡಿಸಿದ ಸಂತ್ರಸ್ತ ಯುವತಿ ಪರ ವಕೀಲೆ ಇಂದಿರಾ ಜೈ ಸಿಂಗ್, ಎಸ್‌ಐಟಿ ತಂಡ ರಚನೆ ಸಂಬಂಧ ಗೃಹ ಸಚಿವರು ಆದೇಶ ಮಾಡಿದ್ದಾರೆ. ಎಸ್‌ಐಟಿ ರಚನೆಯ ಮಾನದಂಡಗಳನ್ನು ಪಾಲನೆ ಮಾಡಿಲ್ಲ. ಮಿಗಿಲಾಗಿ ಎಸ್‌ಐಟಿ ಮುಖ್ಯಸ್ಥರ ಅನುಪಸ್ಥಿತಿಯಲ್ಲಿ ತನಿಖೆ ನಡೆದಿದೆ. ಎಸ್‌ಐಟಿ ರಚನೆಗೆ ಮಾನ್ಯತೆ ಇಲ್ಲ ಎಂದು ಸಂತ್ರಸ್ತ ಯುವತಿ ಪರ ವಕೀಲರಾದ ಇಂದಿರಾ ಜೈ ಸಿಂಗ್ ವಾದ ಮಂಡಿಸಿದ್ದಾರೆ. ಎರಡೂ ಕಡೆ ವಾದ ಆಲಿಸಿದ ಹೈಕೋರ್ಟ್ ಪೀಠ ಅರ್ಜಿಯ ವಿಚಾರಣೆಯನ್ನು ಅಕ್ಟೋಬರ್ 07 ಕ್ಕೆ ಮುಂದೂಡಿದೆ.
ಇನ್ನೊಂದೆಡೆ ಅಶ್ಲೀಲ ಸಿಡಿ ಬಿಡುಗಡೆ ಸಂಬಂಧ ಎಸ್‌ಐಟಿ ತನಿಖೆ ಪೂರ್ಣಗೊಂಡಿರುವ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ಮತ್ತೊಮ್ಮೆ ಸಚಿವ ಸ್ಥಾನ ಪಡೆಯಲು ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದಾರೆ. ಎಸ್‌ಐಟಿ ತನಿಖೆ ಮುಂದಿಟ್ಟುಕೊಂಡು ಸಚಿವ ಸ್ಥಾನ ನೀಡುವಂತೆ ರಮೇಶ್ ಜಾರಕಿಹೊಳಿ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ. ಆದರೆ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜಾರಕಿಹೊಳಿ ಅವರನ್ನು ಸಚಿವರನ್ನಾಗಿ ಮಾಡಲು ನಿರಾಸಕ್ತಿ ತೋರಿದ್ದಾರೆ ಎನ್ನಲಾಗಿದೆ. ಆರೋಪದಿಂದ ಮುಕ್ತರಾಗಿ ಬಂದ ಬಳಿಕವೇ ಸಚಿವ ಸ್ಥಾನ ಎಂದು ಪಕ್ಷದ ವರಿಷ್ಠರು ತಿಳಿಸಿದ್ದಾರೆ. ಪ್ರಕರಣ ಸಂಬಂಧ ಅಂತಿಮ ವರದಿ ಸಲ್ಲಿಕೆಯಾದ ಬಳಿಕ ಈ ಕುರಿತು ಕೇಂದ್ರ ವರಿಷ್ಠರ ಜತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುವುದಾಗಿ ಸಿಎಂ ಸೂಚಿಸಿದ್ದಾರೆ ಎಂದು ಉನ್ನತ ಮೂಲಗಳಿಂದ ತಿಳಿದು ಬಂದಿದೆ.
ಜಲ ಸಂಪನ್ಮೂಲ ಸಚಿವ ಆಗಿದ್ ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಬಳಿಕ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಪ್ರಕರಣ ನಾನಾ ಸ್ವರೂಪ ಪಡೆದುಕೊಂಡಿತ್ತು. ಅಂತಿಮವಾಗಿ ಪ್ರಕರಣವನ್ನು ಎಸ್‌ಐಟಿ ತನಿಖೆಗೆ ವಹಿಸಲಾಗಿತ್ತು. ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ದಾಖಲಾಗಿರುವ ದೂರುಗಳನ್ನು ಎಸ್‌ಐಟಿ ತನಿಖೆ ಪೂರ್ಣಗೊಳಿಸಿದೆ.