‘ಕೆಜಿಎಫ್ ಚಾಪ್ಟರ್ 2’ ಟ್ರೇಲರ್ನಲ್ಲಿ ಅಬ್ಬರಿಸಿ, ಬೊಬ್ಬಿರಿದ ಯಶ್
ಹಲವು ಸಮಯದಿಂದ ಕಾಯುತ್ತಿದ್ದ ದಿನ ಬಂದೇಬಿಟ್ಟಿದೆ. ‘ಕೆಜಿಎಫ್ 2’ ಚಿತ್ರದ ಟ್ರೇಲರ್ ಮಾರ್ಚ್ 27 ರಿಲೀಸ್ ಆಗಿದೆ. ಕೆಜಿಎಫ್ ಸಿನಿಮಾ ತೆರೆಕಂಡು ಮೂರು ವರ್ಷಗಳ ಬಳಿಕ ‘ಕೆಜಿಎಫ್ 2’ ತೆರೆಗೆ ಬರುತ್ತಿದೆ. ಈ ಸಿನಿಮಾ ಹೇಗಿದೆ ಎನ್ನುವ ಝಲಕ್ ಇಂದು ರಿಲೀಸ್ ಆದ ಟ್ರೇಲರ್ನಲ್ಲಿ ಸಿಕ್ಕಿದೆ. ಶಿವರಾಜ್ಕುಮಾರ್ ಅವರು ಟ್ರೇಲರ್ ರಿಲೀಸ್ ಮಾಡಿ ಚಿತ್ರಕ್ಕೆ ಆಲ್ ದಿ ಬೆಸ್ಟ್ ಹೇಳಿದರು. ಖ್ಯಾತ ನಿರೂಪಕ ಕರಣ್ ಜೋಹರ್ ಅವರು ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದು ವಿಶೇಷವಾಗಿತ್ತು.
ಕೆಜಿಎಫ್ನ ಅಧಿಪತಿ ಆಗಿದ್ದ ಗರುಡನನ್ನು ಹತ್ಯೆ ಮಾಡಿದ ನಂತರದಲ್ಲಿ ಆ ಸಾಮ್ರಾಜ್ಯ ರಾಕಿಯ ಕೈ ಸೇರಿದೆ. ರಾಕಿ ನಟೋರಿಯಸ್ ಗ್ಯಾಂಗ್ಸ್ಟರ್ ಹಾಗೂ ಉದ್ಯಮಿ ಎರಡೂ ಹೌದು. ‘ಕೆಜಿಎಫ್ ಚಾಪ್ಟರ್ 2 ’ ಟ್ರೇಲರ್ ತುಂಬಾನೇ ಅದ್ಭುತವಾಗಿ ಮೂಡಿ ಬಂದಿದೆ. ಯಶ್ ಪಾತ್ರ ಸಖತ್ ಹೈಲೈಟ್ ಆಗಿದೆ. ಅಧೀರನಾಗಿ ಸಂಜಯ್ ದತ್ ಮಿಂಚಿದ್ದಾರೆ. ರಾಕಿ ಹಾಗೂ ಅಧೀರನ ನಡುವೆ ದೊಡ್ಡ ಫೈಟ್ ಇದೆ ಎನ್ನುವ ಸೂಚನೆ ಟ್ರೇಲರ್ನಲ್ಲಿ ಸಿಕ್ಕಿದೆ.
‘ರಕ್ತದಿಂದ ಬರೆದ ಕಥೆ ಇದು, ಶಾಹಿಯಿಂದ ಮುಂದುವರಿಸೋಕೆ ಆಗಲ್ಲ. ಮುಂದುವರಿಸಬೇಕು ಎಂದರೆ ಮತ್ತೆ ರಕ್ತವನ್ನೇ ಕೇಳತ್ತೆ’, ‘ಅಲ್ಲಿ ಬೀಳುವ ಹೆಣಗಳೂ ಉಪಯೋಗಕ್ಕೆ ಬರುತ್ತದೆ, ಬೇಕಿದ್ದರೆ ರಣಹದ್ದುಗಳನ್ನು ಕೇಳು’ ಎಂಬಿತ್ಯಾದಿ ಡೈಲಾಗ್ಗಳು ಟ್ರೇಲರ್ನಲ್ಲಿ ಹೈಲೈಟ್ ಆಗಿದೆ. ಸಿನಿಮಾದ ಹಿನ್ನೆಲೆ ಸಂಗೀತ ಟ್ರೇಲರ್ನ ತೂಕವನ್ನು ಹೆಚ್ಚಿಸಿದೆ.
ಸಿನಿಮಾ ವಿಳಂಬ ಏಕೆ?
‘ಕೆಜಿಎಫ್’ ಸಿನಿಮಾ ಸೃಷ್ಟಿಸಿದ ಹೈಪ್ ತುಂಬಾನೇ ದೊಡ್ಡಮಟ್ಟದ್ದು. ಈ ಕಾರಣಕ್ಕೆ ‘ಕೆಜಿಎಫ್ 2’ ಕಣ್ತುಂಬಿಕೊಳ್ಳೋಕೆ ಅಭಿಮಾನಿಗಳು ಕಾದು ಕೂತಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ ಈ ಮೊದಲೇ ಸಿನಿಮಾ ತೆರೆಗೆ ಬಂದು ಅಬ್ಬರಿಸಬೇಕಿತ್ತು. ಮೊದಲ ಚಾಪ್ಟರ್ ಪೂರ್ಣಗೊಳ್ಳುತ್ತಿದ್ದಂತೆ ಎರಡನೇ ಚಾಪ್ಟರ್ ಕೆಲಸಗಳು ಆರಂಭಗೊಂಡಿದ್ದವು. ಆದರೆ, ಕೊವಿಡ್ ಮೂರು ಅಲೆಗಳಿಂದ ಸಿನಿಮಾ ಕೆಲಸಗಳು ವಿಳಂಬ ಆದವು. ಈಗ ಮೂರನೇ ಅಲೆ ತಣ್ಣಗಾಗಿದೆ. ಹೀಗಾಗಿ, ಸಿನಿಮಾ ಏಪ್ರಿಲ್ 14ರಂದು ರಿಲೀಸ್ ಆಗುತ್ತಿದೆ.
ಅಬ್ಬರಿಸಿದ್ದ ‘ತೂಫಾನ್..’ ಸಾಂಗ್
ಈ ಮೊದಲು ರಿಲೀಸ್ ಆಗಿದ್ದ ‘ತೂಫಾನ್..’ ಹಾಡು ಅಬ್ಬರಿಸಿದೆ. ಕನ್ನಡ ವರ್ಷನ್ಗಿಂತ ಹಿಂದಿ ವರ್ಷನ್ನ ಹಾಡು ಹೆಚ್ಚು ವೀಕ್ಷಣೆ ಕಂಡಿದೆ. ಇದರಿಂದ ಸಿನಿಮಾ ಮೇಲೆ ಬಾಲಿವುಡ್ ಮಂದಿ ಎಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ ಎಂಬುದು ಸಾಬೀತಾಗಿದೆ.
ಸಿನಿಮಾದಲ್ಲಿದೆ ದೊಡ್ಡ ತಾರಾಗಣ..
‘ಕೆಜಿಎಫ್ 2’ ಸಿನಿಮಾದಲ್ಲಿ ದೊಡ್ಡ ತಾರಾಗಣ ಇದೆ. ಬಾಲಿವುಡ್ನ ಖ್ಯಾತ ನಟ ಸಂಜಯ್ ದತ್ ಅಧೀರನಾಗಿ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಚಿತ್ರದ ಮೂಲಕ ರವೀನಾ ಟಂಡನ್ ಹಲವು ವರ್ಷಗಳ ಬಳಿಕ ಸ್ಯಾಂಡಲ್ವುಡ್ಗೆ ಮರಳುತ್ತಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರಾಜ್ ಚಿತ್ರದಲ್ಲಿ ನಟಿಸಿದ್ದಾರೆ. ಯಶ್ಗೆ ಜತೆಯಾಗಿ ಶ್ರೀನಿಧಿ ಶೆಟ್ಟಿ ಕಾಣಿಸಿಕೊಂಡಿದ್ದಾರೆ.