ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ಗ್ರಾಮ ದೇವತೆ ಕೆಸ್ತೂರು ಮಾರಮ್ಮನ ಹಾಲರವಿ ಉತ್ಸವವು ವಿಜೃಂಭಣೆಯಿಂದ ನಡೆಯಿತು.
ಮುಂಜಾನೆ ವಾರ್ತೆ ದಿನ ಪತ್ರಿಕೆ
ವರದಿ ಆರ್ ಉಮೇಶ್ ಮಲಾರಪಾಳ್ಯ
ಯಳಂದೂರು: ತಾಲ್ಲೂಕಿನ ಕೆಸ್ತೂರು ಗ್ರಾಮದಲ್ಲಿ ರಾತ್ರಿ ಸಹಸ್ರಾರು ಜನಸ್ತೋಮದೊಂದಿಗೆ ಗ್ರಾಮ ದೇವತೆ ಕೆಸ್ತೂರು ಮಾರಮ್ಮನ ಹಾಲರವಿ ಉತ್ಸವವು ಬಾರಿ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ ನಾಡಗೌಡರು, ಗೌಡರು, ಎಲ್ಲಾ ಕೋಮಿನ ಯಜಮಾನರುಗಳ ಸಮ್ಮುಖದಲ್ಲಿ ದೇವಸ್ಥಾನ ಮುಂಭಾಗವಿರುವ ಬಾವಿಕೆರೆಯಲ್ಲಿ ಜಲ ಪೂಜೆ ಮಾಡಿ ಒಟ್ಟು ಇಪ್ಪತ್ತು ಹಬ್ಬಗಳಿಗೆ ಚಾಲನೆ ನೀಡಿದರು.
ಎಲ್ಲಾ ದೇವಾಲಯಗಳು ದೀಪಾಲಂಕಾರದಿಂದ ಕೂಡಿತ್ತು. ಗ್ರಾಮವು ತಳಿರು ತೋರಣಗಳಿಂದ ಸಿಂಗಾರಗೊಂಡಿತು.
ರಾತ್ರಿ 10 ರ ನಂತರ ಹಾಲರವಿ ಉತ್ಸವವು ಪ್ರಾರಂಭಗೊಂಡಿತು. ಕೆಸ್ತೂರು ಮಾರಮ್ಮನ ಉತ್ಸವ ಮೂರ್ತಿಯನ್ನು ಬಾವಿ ಕೆರೆಯಲ್ಲಿ ಪೂಜೆಹವನ ಮಾಡಿ,
ಬೃಹತ್ ಖುರ್ಜುನೊಳಗೆ ಗ್ರಾಮ ದೇವತೆ ಕೆಸ್ತೂರು ಮಾರಮ್ಮನ ಉತ್ಸವ ಮೂರ್ತಿಯನ್ನು ಇರಿಸಿ ವಿವಿಧ ಧಾರ್ಮಿಕ ಪೂಜೆಗಳನ್ನು ಮಾಡಿದರು. ಸಿಡಿಮದ್ದು, ಬಾಣಬಿರುಸುಗಳು ಜೋರಾಗಿತ್ತು ಇಲ್ಲಿ ಸಿಡಿಯುವ ಸಿಡಿಮದ್ದು ಹತ್ತೂರಿಗೆ ಕೇಳಿಸಬೇಕೆಂದು ವಾಡಿಕೆ. ಅದಕ್ಕೆ ಹೇಳೋದು ”ಹತ್ತೂರು ಉತ್ಸವಕ್ಕಿಂತ ಕೆಸ್ತೂರು ಮಾರಮ್ಮನ ಚಂದ ಅಂತ.”
ಖುರ್ಜುನ ಮುಂದೆ ನಾಡಗೌಡ್ರು, ಗೌಡರು, ಎಲ್ಲಾ ಕೋಮಿನ ಯಜಮಾನರು, ಹೆಂಗಳಿಯರ ಕುಂಭಮೇಳ, ಸತ್ತಿಗೆ ಸೂರಪಾನಿ, ಕೊಂಬು ಕಹಳೆ, ಪೆಂಜು, ಮಂಗಳವಾದ್ಯಗಳೊಂದಿಗೆ ಖುರ್ಜು ಬಸವೇಶ್ವರ ಗುಡಿಗೆ ಸಾಗಿ ನಂತರ ವಾಪಸು ಗ್ರಾಮದ ವಿವಿಧ ಬೀದಿಗಳಲ್ಲಿ ಮೆರವಣಿಗೆ ಸಾಗಿತು.
ಗ್ರಾಮದೇವತೆಗೆ ದಾರಿ ಉದ್ದಕ್ಕೂ ಹಣ್ಣು ಕಾಯಿ ಪೂಜೆ ನಡೆಯಿತು.
ದಾರಿ ಉದ್ದಕ್ಕೂ ಜನರು ಹಾಲರವಿ ಉತ್ಸವವನ್ನು ಯುವಕರು ,ಯುವತಿಯರು ಮೊಬೈಲ್ ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಕ್ಕೆ ಬಿಟ್ಟು ಸಂಭ್ರಮಿಸಿದರು.
ಹಾಲರವಿ ಮಹತ್ವ ಏನೆಂದರೆ? ಕೆಸ್ತೂರು ಮಾರಮ್ಮ ತನ್ನ ಅಣ್ಣನಾದ ಬಸವೇಶ್ವರ ಮತ್ತು ಸಪ್ತಾಮಾತೃಕೆಯರನ್ನು, ಗುಳಿಯಮ್ಮನನ್ನು. ಮುಂಬರುವ ದೊಡ್ಡ ಹಬ್ಬಕ್ಕೆ ಬನ್ನಿ ಎಂದು ಕರೆಯುವುದನ್ನೆ ಹಾಲರವಿ ಎಂದು ಕರೆಯಲಾಗುತ್ತದೆ. ಖುರ್ಜು ಈಶ್ವರನ ದೇವಾಲಯ ಮಹದೇಶ್ವರ ದೇವಾಲಯಗಳಿಗೆ ತೆರಳಿ ಈ ದೇವರುಗಳನ್ನು ಕೂಡ ಹಬ್ಬಕ್ಕೆ ಆಹ್ವಾನ ಮಾಡುವುದು ಎಂದು ಪ್ರತೀತಿಯಾಗಿದೆ.
ಎತ್ತ ನೋಡಿದರೂ ಜನರೋ ಜನರೋ ಈ ಹಬ್ಬವನ್ನು ನೋಡಬೇಕೆಂದು ಐದು ವರುಷಗಳಿಂದ ಗ್ರಾಮಸ್ಥರು, ಸುತ್ತಮುತ್ತಲಿನ ಗ್ರಾಮಸ್ಥರು ಆತುರದಿಂದ ಕಾಯುತ್ತಿದ್ದರು. ನೆನ್ನೆ ಕಾದಿ ಕಣ್ತುಂಬಿಕೊಂಡರು.
ರಾತ್ರಿ 3ರ ತನಕ ಹಾಲರವಿ ಉತ್ಸವವು ನಡೆಯಿತು.