ಯಡಿಯೂರಪ್ಪ ಅವರೇ ನಮ್ಮ ಸಿ.ಎಂ’
ಶಿರಾಳಕೊಪ್ಪ: ‘ಈಗಲೂ ನಮಗೆ ಬಿ.ಎಸ್. ಯಡಿಯೂರಪ್ಪ ಅವರೇ ಮುಖ್ಯಮಂತ್ರಿ. ಅವರ ಮಾರ್ಗದರ್ಶನದಲ್ಲೇ ನಡೆಯುತ್ತೇವೆ’ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಸಚಿವ ಕೆ.ಸಿ. ನಾರಾಯಣಗೌಡ ಹೇಳಿದರು.
ಶಿರಾಳಕೊಪ್ಪದಲ್ಲಿ ಭಾನುವಾರ ನಡೆದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಯಡಿಯೂರಪ್ಪ ಅವರು ರಾಜೀನಾಮೆ ಕೊಡುವ ಸಂದರ್ಭದಲ್ಲಿ ನಮ್ಮೆಲ್ಲ ಸಚಿವರಿಗೆ ಭಯವಾಗಿತ್ತು. ಆ ಭಯವನ್ನು ಎರಡೇ ದಿನಗಳಲ್ಲಿ ನಿವಾರಿಸಿ ಅವರ ಶಿಷ್ಯ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸುವ ಮೂಲಕ ಸರ್ಕಾರಕ್ಕೆ ಕಾವಲಾಗಿ ನಿಂತಿದ್ದಾರೆ’ ಎಂದು ಹೇಳಿದರು.
‘ನಾನು ಬೇರೆ ಪಕ್ಷದಲ್ಲಿ ಇದ್ದಾಗ ಬೆಳಗಿನ ಜಾವ 5.30ಕ್ಕೆ ಯಡಿಯೂರಪ್ಪ ಅವರನ್ನು ಭೇಟಿ ಆಗಿದ್ದೆ. ನನ್ನ ಜೊತೆಗೆ ಬಂದರೆ ಕೆ.ಆರ್. ಪೇಟೆ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇನೆ. ನಿನ್ನನ್ನು ಮಂತ್ರಿ ಮಾಡುತ್ತೇನೆ ಎಂದು ಮಾತು ನೀಡಿದ್ದರು. ಅದರಂತೆ ಕೆ.ಆರ್. ಪೇಟೆ ಕ್ಷೇತ್ರಕ್ಕೆ ₹ 1,400 ಕೋಟಿ ಅನುದಾನ ನೀಡಿ ತಮ್ಮ ಮಾತನ್ನು ಉಳಿಸಿಕೊಂಡಿದ್ದಾರೆ’ ಎಂದು ಹೇಳಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ‘ನನಗೆ ಯಾವುದೇ ಸ್ಥಾನಮಾನ ಇಲ್ಲದಿದ್ದರೂ ಶೀಘ್ರದಲ್ಲಿ ರಾಜ್ಯದಾದ್ಯಂತ ಪ್ರವಾಸ ಮಾಡಿ ಪಕ್ಷವನ್ನು ಸಂಘಟಿಸುತ್ತೇನೆ. ಮುಂದಿನ ಚುನಾವಣೆಯಲ್ಲಿ 140 ಸೀಟು ಗೆದ್ದು ತರುತ್ತೇನೆ’ ಎಂದು ತಿಳಿಸಿದರು.
‘ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೆಯವರಿಗೆ ಅವಕಾಶ ಕಲ್ಪಿಸಿಕೊಟ್ಟಿದ್ದೇನೆ. ರಾಜೀನಾಮೆ ನೀಡಿದ ತಕ್ಷಣ ಪ್ರಧಾನಿ ಮೋದಿ ಕರೆ ಮಾಡಿ ಆಶ್ಚರ್ಯ ವ್ಯಕ್ತಪಡಿಸಿದರು’ ಎಂದು ಹೇಳಿದರು.