ಮೊದಲ ಬಾರಿಗೆ ಪರೇಡ್ನಲ್ಲಿ ಭಾಗವಹಿಸಲು ಮಹಿಳಾ ಪೊಲೀಸ್ ತುಕಡಿಗೆ ಅವಕಾಶ
ದೆಹಲಿ, ಜ.10: ಈ ಬಾರಿಯ ಗಣರಾಜ್ಯೋತ್ಸವದಂದು ಮಹಿಳೆಯರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಮಹಿಳಾ ಸಬಲೀಕರಣಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಈ ಬಾರಿ ಪರೇಡ್ನಲ್ಲಿ ಮಹಿಳಾ ಸಿಬ್ಬಂದಿಗಳಿಗೆ ಅವಕಾಶವನ್ನು ನೀಡಲಾಗಿದೆ. ಸೈನ್ಯದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಸೇನಾನಿಗಳಿಗೆ ಈ ಬಾರಿಯ ಪರೇಡ್ನಲ್ಲಿ ಭಾಗವಹಿಸುವ ಅವಕಾಶವನ್ನು ನೀಡಲಾಗಿದೆ. ಜತೆಗೆ ಅಗ್ನಿವೀರ್ ಮೂಲಕ ಆಯ್ಕೆ ಆಗಿರುವ ಮಹಿಳಾ ಸೈನಿಕರು ಈ ಬಾರಿಯ ಪರೇಡ್ನಲ್ಲಿ ಭಾಗವಹಿಸಲಿದ್ದಾರೆ. ಇದೀಗ ದೆಹಲಿಯ ಮಹಿಳಾ ಪೊಲೀಸ್ ತುಕಡಿಗಳಿಗೆ ಪರೇಡ್ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಇದೇ ಮೊದಲ ಬಾರಿಗೆ ಮಹಿಳಾ ಪೊಲೀಸ್ ಸಿಬ್ಬಂದಿಗಳು ಗಣರಾಜೋತ್ಸವ ಪರೇಡ್ ಭಾಗವಹಿಸುತ್ತಿದ್ದಾರೆ.
ಈ ವರ್ಷ ಭಾಗವಹಿಸುವವರಲ್ಲಿ 80 ಪ್ರತಿಶತದಷ್ಟು ಜನರು ಈಶಾನ್ಯ ರಾಜ್ಯಗಳಿಂದ ಬಂದವರು ಎಂದು ಹೇಳಲಾಗಿದೆ. ದೆಹಲಿ ಪೊಲೀಸರ ಪ್ರಕಾರ, ಪೊಲೀಸರು ಮತ್ತು ಎಂಟು ಈಶಾನ್ಯ ರಾಜ್ಯಗಳ ಜನರ ಅಂತರವನ್ನು ತೆಗೆದು ಹಾಕಲು ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ. ಮಹಿಳಾ ಐಪಿಎಸ್ ಅಧಿಕಾರಿ ಶ್ವೇತಾ ಕೆ ಸುಗತನ್ ಅವರು 194 ಮಹಿಳಾ ಹೆಡ್ ಕಾನ್‌ಸ್ಟೆಬಲ್‌ಗಳ ಹಾಗೂ ಕಾನ್‌ಸ್ಟೆಬಲ್‌ಗಳ ಪಡೆಯನ್ನು ಮುನ್ನಡೆಸಲಿದ್ದಾರೆ ಎಂದು ಹೇಳಲಾಗಿದೆ.
ಈಗಾಗಲೇ ದೆಹಲಿಯಲ್ಲಿ ನಡೆಯುತ್ತಿರುವ ಪರೇಡ್ ಅಭ್ಯಾಸದಲ್ಲಿ ಮಹಿಳಾ ಹೆಡ್ ಕಾನ್‌ಸ್ಟೆಬಲ್‌ಗಳು ಪ್ರತಿದಿನ ಬೆಳಿಗ್ಗೆ ಭಾಗವಹಿಸುತ್ತಿದ್ದಾರೆ ಎಂದು ಹೇಳಲಾಗಿದೆ. ವಿಶೇಷ ಪೊಲೀಸ್ ಆಯುಕ್ತ (ಸಶಸ್ತ್ರ ಪೊಲೀಸ್) ರಾಬಿನ್ ಹಿಬು ಅವರ ಪ್ರಕಾರ ಮೊದಲು ಬಾರಿಗೆ ಮಹಿಳಾ ಪೊಲೀಸ್ ಸಿಬ್ಬಂದಿಗಳು ಭಾಗವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ. ಭಾರೀ ಉತ್ಸಾಹದಿಂದ ಅಭ್ಯಾಸದಲ್ಲಿ ಭಾಗವಹಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಮೆರವಣಿಗೆಗೆ ನಮ್ಮ ಪಡೆಯ ಸಶಸ್ತ್ರ ಘಟಕದಿಂದ ಆಯ್ಕೆ ಮಾಡಲಾಗಿದೆ. ಹೆಚ್ಚಿನವರು ಈಶಾನ್ಯ ಭಾಗದ ಪೊಲೀಸ್ ಸಿಬ್ಬಂದಿಗಳು ಇದರಲ್ಲಿ ಇರಲಿದ್ದಾರೆ. ಹಾಗಾಗಿ ಈ ಬಾರಿ ದೆಹಲಿ ಪೊಲೀಸರಲ್ಲಿ ಈಶಾನ್ಯದ ಜನರನ್ನು ಪ್ರತಿನಿಧಿಸುತ್ತದೆ ಎಂದು ಹೇಳಿದ್ದಾರೆ. ಮಹಿಳಾ ಪೈಪ್ ಬ್ಯಾಂಡ್ ಕೂಡ ಇದರಲ್ಲಿ ಇರಲಿದೆ. ಕಾನ್‌ಸ್ಟೆಬಲ್ ರುಯಾಂಗುನುವೋ ಕೆನ್ಸ್ ನೇತೃತ್ವದಲ್ಲಿ ಈ ಪರೇಡ್ ಸಾಗಲಿದೆ ಎಂದು ಹೇಳಿದ್ದಾರೆ.
135 ಹೆಡ್ ಕಾನ್‌ಸ್ಟೆಬಲ್‌ಗಳು ಮತ್ತು ಕಾನ್‌ಸ್ಟೆಬಲ್‌ಗಳನ್ನು ಒಳಗೊಂಡಿರುವ ಈ ಬ್ಯಾಂಡ್ “ದೆಹಲಿ ಪೊಲೀಸ್ ಸಾಂಗ್”ನ್ನು ನುಡಿಸಲಿದೆ. ಕಳೆದ ವರ್ಷವು ಮಹಿಳಾ ಪೈಪ್ ಬ್ಯಾಂಡ್ ಭಾಗವಹಿಸಿತ್ತು . ಆದರೆ ಅಂದು ಇದರ ನೇತೃತ್ವವನ್ನು ಪುರುಷರೊಬ್ಬರು ವಹಿಸಿದರು. ಆದರೆ ಈ ಬಾರಿ ರಕ್ಷಣಾ ಸಚಿವಾಲಯವು ಎಲ್ಲ ಪಡೆಗಳು, ರಾಜ್ಯ ಸರ್ಕಾರಗಳು ಹಾಗೂ ಇಲಾಖೆಗಳಿಗೆ ಮಹಿಳೆಯರು ಈ ಬಾರಿಯಲ್ಲಿ ಪ್ರಮುಖ ನೇತೃತ್ವವನ್ನು ವಹಿಸಿಕೊಳ್ಳಬೇಕು ಎಂದು ಹೇಳಿದರು.