ಮುಂದ್ರಾ ಬಂದರಲ್ಲಿ ಹೆರಾಯಿನ್ ವಶ ಪ್ರಕರಣ: ಪಿಎಂಎಲ್‌ಎ ಕಾಯ್ದೆಯಡಿ ಇಡಿ ತನಿಖೆ
ಅಹಮದಾಬಾದ್: ಗುಜರಾತಿನ ಮುಂದ್ರಾ ಬಂದರಿನಲ್ಲಿ ಸುಮಾರು 3,000 ಕೆ.ಜಿಯಷ್ಡು ಹೆರಾಯಿನ್ ವಶಪಡಿಸಿಕೊಂಡ ಪ್ರಕರಣವನ್ನು ಜಾರಿ ನಿರ್ದೇಶನಾಲಯವು ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(ಪಿಎಂಎಲ್‌ಎ)ಯಡಿ ತನಿಖೆ ನಡೆಸಲಿದೆ ಎಂದು ಎಎನ್‌ಐ ಎಎನ್‌ಐ ಟ್ವೀಟ್ ಮಾಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರೆವೆನ್ಯೂ ಗುಪ್ತಚರ ನಿರ್ದೇಶನಾಲಯ(ಡಿಆರ್‌ಐ)ವು, 5 ಮಂದಿ ವಿದೇಶಿ ಪ್ರಜೆಗಳು ಸೇರಿ 8 ಆರೋಪಿಗಳನ್ಬು ಬಂಧಿಸಿದೆ.
ಬಂದರಿನ ಎರಡು ಕಂಟೇನರ್‌ಗಳಲ್ಲಿ ಒಟ್ಟು 2988 ಕೆ.ಜಿಯಷ್ಟು ಬೃಹತ್ ಪ್ರಮಾಣದ ಹೆರಾಯಿನ್ ವಶಕ್ಕೆ ಪಡೆಯಲಾಗಿತ್ತು ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.
ಇದು ವಿಶ್ವದ ಅತಿ ದೊಡ್ಡ ಮಾದಕವಸ್ತು ಪ್ರಕರಣವಾಗಿದ್ದು, ವಶಪಡಿಸಿಕೊಂಡ ಹೆರಾಯಿನ್ ಮೌಲ್ಯ ವಿದೇಶಿ ಮಾರುಕಟ್ಟೆಯಲ್ಲಿ ಸುಮಾರು ₹ 21,000 ಕೋಟಿ ಆಗಿದೆ. ಪ್ರತಿ ಕೆ.ಜಿ ಹೆರಾಯಿನ್ ಬೆಲೆ ₹ 5 -7 ಕೋಟಿ ಆಗಿದೆ.
ಕೆಲವು ದಿನಗಳ ಹಿಂದೆ ಗುಜರಾತ್‌ನ ಕಛ್ ಜಿಲ್ಲೆಯ ಮುಂದ್ರಾ ಬಂದರಿಗೆ ಬಂದ ಎರಡು ಕಂಟೇನರ್‌ಗಳಿಂದ ಹೆರಾಯಿನ್ ಅನ್ನು ವಶಪಡಿಸಿಕೊಂಡ ನಂತರ, ಡಿಆರ್‌ಐ ದೇಶದಾದ್ಯಂತ ದಾಳಿಗಳನ್ನು ನಡೆಸಿದೆ. ದೆಹಲಿಯ ಗೋಡೌನ್‌ನಲ್ಲಿ 16.1 ಕೆಜಿ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ.
ಹಾಗಾಗಿ, ಪ್ರಕರಣದಲ್ಲಿ ವಶಪಡಿಸಿಕೊಂಡ ಒಟ್ಟು ಹೆರಾಯಿನ್ 3,004 ಕೆ.ಜಿ ಆಗಿದೆ ಎಂದು ಪ್ರಕಟಣೆ ತಿಳಿಸಿದೆ. 10.2 ಕೆ.ಜಿ ಶಂಕಿತ ಕೊಕೇನ್ ಮತ್ತು 11 ಕೆ.ಜಿ ಹೆರಾಯಿನ್ ಎಂದು ಶಂಕಿಸಲಾದ ಇನ್ನೊಂದು ವಸ್ತುವನ್ನು ನೋಯ್ಡಾದ ವಸತಿ ಸ್ಥಳದಿಂದ ಡಿಆರ್‌ಐ ವಶಪಡಿಸಿಕೊಂಡಿದೆ. ಸೆಪ್ಟೆಂಬರ್ 13 ರಂದು, ಡಿಆರ್‌ಐ, ಅಫ್ಗಾನಿಸ್ತಾನದ ಕಂದಹಾರ್‌ನಿಂದ ಇರಾನ್‌ನ ಬಂದರ್ ಅಬ್ಬಾಸ್ ಬಂದರಿನ ಮೂಲಕ ಮುಂದ್ರಾ ಬಂದರಿಗೆ ಬಂದ ಎರಡು ಕಂಟೇನರ್‌ಗಳನ್ನು ವಶಕ್ಕೆ ತೆಗೆದುಕೊಂಡಿತ್ತು.
ಎರಡೂ ಕಂಟೇನರ್‌ಗಳಲ್ಲಿ ಹೆರಾಯಿನ್ ಇದ್ದು, ಅದನ್ನು ‘ಜಂಬೋ ಬ್ಯಾಗ್‌ಗಳ’ ಕೆಳಗಿನ ಪದರಗಳಲ್ಲಿ ಟಾಲ್ಕ್ ಸ್ಟೋನ್‌ಗಳಿಂದ ಮುಚ್ಚಿಡಲಾಗಿತ್ತು ಎಂದುಸೆಪ್ಟೆಂಬರ್ 17 ಮತ್ತು 19ರ ಪರಿಶೀಲನೆಯಲ್ಲಿ ತಿಳಿದುಬಂದಿದೆ ಎಂದು ತಿಳಿಸಿದೆ.
ಬಳಿಕ, ಡಿಆರ್‌ಐ ತಂಡವು ಟಾಲ್ಕ್ ಸ್ಟೋನ್ಸ್ ಆಮದು ಮಾಡಿಕೊಂಡ ವಿಜಯವಾಡದಲ್ಲಿ ನೋಂದಾಯಿತ ಎಂ/ಎಸ್ ಆಶಿ ಟ್ರೇಡಿಂಗ್ ಕಂಪನಿಯ ಮಾಲೀಕರಾದ ಎಂ ಸುಧಾಕರ್ ಮತ್ತು ಅವರ ಪತ್ನಿ ದುರ್ಗಾ ವೈಶಾಲಿ ಅವರನ್ನು ಚೆನ್ನೈನಲ್ಲಿ ಬಂಧಿಸಿತ್ತು. ಸೋಮವಾರ, ಭುಜ್‌ನ ನಾರ್ಕೋಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್‌ಸ್ಟಾನ್ಸ್ ಆಕ್ಟ್ ಅಡಿಯ ವಿಶೇಷ ನ್ಯಾಯಾಲಯವು ದಂಪತಿಯನ್ನು 10 ದಿನಗಳ ಕಾಲ ಡಿಆರ್‌ಐ ವಶಕ್ಕೆ ನೀಡಿತ್ತು.