ಮಾಲಿನ್ಯ ತಡೆಗೆ ಕ್ರಮ: ದಿಲ್ಲಿಯಲ್ಲಿ ಪಟಾಕಿ ಸಂಪೂರ್ಣ ನಿಷೇಧ
ಹೊಸದಿಲ್ಲಿ, ಸೆ.29: ದಿಲ್ಲಿಯಲ್ಲಿ 2022ರ ಜನವರಿ ಒಂದರವರೆಗೆ ಪಟಾಕಿ ಸಿಡಿಸುವುದನ್ನು ಸಂಪೂರ್ಣ ನಿಷೇಧಿಸಿ ದಿಲ್ಲಿ ಮಾಲಿನ್ಯ ನಿಯಂತ್ರಣ ಸಮಿತಿ (ಡಿಪಿಸಿಸಿ) ಆದೇಶ ಹೊರಡಿಸಿದೆ. ಈ ನಿಷೇಧವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವ ಜತೆಗೆ ಈ ಬಗ್ಗೆ ಕ್ರಮ ಕೈಗೊಂಡ ವರದಿಯನ್ನು ಪ್ರತಿದಿನ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳು ಮತ್ತು ಉಪ ಆಯುಕ್ತರಿಗೆ ಸೂಚನೆ ನೀಡಿದೆ.
ಈ ನಿಷೇಧ ಸಂಪೂರ್ಣವಾಗಿದ್ದು, ಹಿಂದೆ ಅವಕಾಶ ನೀಡಲಾಗಿದ್ದ ಹಸಿರು ಪಟಾಕಿಗಳಿಗೆ ಕೂಡಾ ಅವಕಾಶವಿಲ್ಲ ಎಂದು ಡಿಪಿಸಿಸಿ ಸ್ಪಷ್ಟಪಡಿಸಿದೆ. ದಿಲ್ಲಿಯಲ್ಲಿ ಅತ್ಯಧಿಕವಾಗಿರುವ ವಾಯುಮಾಲಿನ್ಯವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ನಿರ್ಬಂಧಿಸುವ ಅಗತ್ಯವಿದೆ. ಇದರ ಜತೆಗೆ ಕೋವಿಡ್-19ನ ಮತ್ತೊಂದು ಅಲೆ ತಡೆಯುವ ದೃಷ್ಟಿಯಿಂದ ಸಂಪೂರ್ಣ ನಿಷೇಧಕ್ಕೆ ಆದೇಶಿಸಲಾಗಿದೆ ಎಂದು ಸ್ಪಷ್ಟಪಡಿಸಿದೆ.
“ಹಲವು ಮಂದಿ ತಜ್ಞರು ಕೋವಿಡ್-19 ಪ್ರಕರಣಗಳ ಏರಿಕೆ ಸಾಧ್ಯತೆಯ ಬಗ್ಗೆ ಸುಳಿವು ನೀಡಿದ್ದು, ಪಟಾಕಿ ಸಿಡಿಸುವ ದೊಡ್ಡ ಪ್ರಮಾಣದ ಸಂಭ್ರಮಾಚರಣೆಯಂಥ ಕ್ರಮಗಳು ಸುರಕ್ಷಿತ ಅಂತರ ನಿಯಮಗಳನ್ನು ಉಲ್ಲಂಘಿಸುವುದು ಮಾತ್ರವಲ್ಲದೇ, ಅಧಿಕ ಪ್ರಮಾಣದ ವಾಯುಮಾಲಿನ್ಯಕ್ಕೂ ಕಾರಣವಾಗಲಿದೆ. ಇದು ದಿಲ್ಲಿಯಲ್ಲಿ ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಲಿದೆ” ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.
“ಇವು ಮಾಲಿನ್ಯದ ಪ್ರಮುಖ ಮೂಲಗಳಲ್ಲಿ ಒಂದು. ವಾಯು ಗುಣಮಟ್ಟ ತೀವ್ರ ಸ್ವರೂಪದ ವರ್ಗದಲ್ಲಿದ್ದು, ಇದು ಆರೋಗ್ಯವಂತರಿಗೆ ಕೂಡಾ ಉಸಿರಾಟದ ಸಮಸ್ಯೆಗಳನ್ನು ಸೃಷ್ಟಿಸುವ ಅಪಾಯವಿದೆ. ಜತೆಗೆ ಶ್ವಾಸಕೋಶ ಮತ್ತು ಹೃದ್ರೋಗ ಸಮಸ್ಯೆ ಇರುವವರಲ್ಲಿ ಗಂಭೀರ ಸಮಸ್ಯೆಗಳನ್ನು ಸೃಷ್ಟಿಸಲಿದೆ” ಎಂದು ಎಚ್ಚರಿಸಿದೆ. ಕಳೆದ ವರ್ಷ ಕೂಡಾ ಎನ್‌ಸಿಆರ್ ಪ್ರದೇಶದಲ್ಲಿ ಪಟಾಕಿ ಮಾರಾಟ ಹಾಗೂ ಬಳಕೆಯನ್ನು ಎನ್‌ಜಿಟಿ ನಿಷೇಧಿಸಿತ್ತು.