ರಾಜಕೀಯ

ಮಾರ್ಚ್ 15 ರಂದು ಬೆಳಗಾವಿ ಮೇಯರ್‌, ಉಪಮೇಯರ್‌ ಆಯ್ಕೆ ಚುನಾವಣೆ

ಬೆಳಗಾವಿ : ಇಲ್ಲಿನ ಮಹಾನಗರ ಪಾಲಿಕೆಯ 23 ನೇ ಅವಧಿಯ ಮೇಯರ್‌ ಮತ್ತು ಉಪಮೇಯರ್‌ ಆಯ್ಕೆಗೆ ಮಾ.15 ರಂದು ಚುನಾವಣೆ ಹಿನ್ನೆಲೆಯಲ್ಲಿ ಆಡಳಿತ ಪಕ್ಷದಲ್ಲಿ ಚಟುವಟಿಕೆಗಳು ತೀವ್ರಗೊಂಡಿವೆ. ಗದ್ದುಗೆ ಏರಲು ಪ್ರತಿಪಕ್ಷವೂ ತಮ್ಮದೇ ತಂತ್ರ ರೂಪಿಸುತ್ತಿರುವುದರಿಂದ ಚುನಾವಣೆ ಕುತೂಹಲ ಹೆಚ್ಚುವಂತಾಗಿದೆ.ಈ ಬಾರಿ ಮೇಯರ್‌ ಸ್ಥಾನ ಸಾಮಾನ್ಯ ವರ್ಗ ಹಾಗೂ ಉಪಮೇಯರ್‌ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಿದೆ. ಅರ್ಹತೆ ಹೊಂದಿದ ಆಕಾಂಕ್ಷಿಗಳು ಶಾಸಕ ಅಭಯ್‌ ಪಾಟೀಲ್ ಹಾಗೂ ರಮೇಶ ಜಾರಕಿಹೊಳಿ ಅವರ ಮೊರೆ ಹೋಗಿದ್ದಾರೆ. ಈ ನಡುವೆ ಅಧಿಕಾರ ಹಂಚಿಕೆ ಸೂತ್ರಕ್ಕೆ 24 ನೇ ಅವಧಿಯ ಮೀಸಲಾತಿ ಕೊಕ್ಕೆ ಹಾಕಿದೆ. ಕಾರಣ ಮೇಯರ್‌ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿದ್ದು, ಉಪಮೇಯರ್‌ ಸ್ಥಾನ ಎಸ್‌ಸಿ ಮಹಿಳೆಗೆ ಮೀಸಲಾಗಿದೆ.ಆದರೆ, ಬೆಳಗಾವಿ ಉತ್ತರ ಕ್ಷೇತ್ರದ ಸದಸ್ಯರಿಗೆ ಮೇಯರ್‌ ಸ್ಥಾನ ನೀಡಿದರೆ, ಉಪಮೇಯರ್‌ ಸ್ಥಾನಕ್ಕೇರಲು ದಕ್ಷಿಣ ವಿಧಾನ ಸಭಾ ಕ್ಷೇತ್ರದಲ್ಲಿ ಎಸ್‌ಸಿ ಮಹಿಳಾ ಸದಸ್ಯರೇ ಇಲ್ಲ. ಹೀಗಾಗಿ, ಅಧಿಕಾರ ಹಂಚಿಕೆ ಸೂತ್ರದಂತೆ ಈ ಬಾರಿ ಎರಡೂ ಸ್ಥಾನಗಳನ್ನು ದಕ್ಷಿಣ ಕ್ಷೇತ್ರದ ಸದಸ್ಯರಿಗೆ ನೀಡಿ, 24 ನೇ ಅವಧಿಯಲ್ಲಿ ಎರಡೂ ಸ್ಥಾನಗಳನ್ನು ಉತ್ತರಕ್ಕೆ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ಬಗ್ಗೆ ಚರ್ಚಿಸಲು ಹಾಗೂ ಅಭ್ಯರ್ಥಿಗಳ ಆಯ್ಕೆಗಾಗಿ ಬಿಜೆಪಿ ಮುಖಂಡ ಎನ್‌.ರವಿಕುಮಾರ್‌ ನೇತೃತ್ವದಲ್ಲಿ ಮಂಗಳವಾರ ನಗರದಲ್ಲಿ ಸಭೆ ನಡೆಯಲಿದೆ.ಪಾಲಿಕೆಯ 58 ವಾರ್ಡ್‌ಗಳಲ್ಲಿ ಬಿಜೆಪಿ 35, ಕಾಂಗ್ರೆಸ್‌ 10, ಎಐಎಂಐಎಂ 1 ಹಾಗೂ ಪಕ್ಷೇತರರು 12 ಸ್ಥಾನಗಳನ್ನು ಹೊಂದಿದ್ದಾರೆ. ಇತ್ತೀಚೆಗೆ ಪಾಲಿಕೆ ಸದಸ್ಯರಾದ ಜಯಂತ್‌ ಜಾಧವ, ಮಂಗೇಶ ಪವಾರ ಅವರ ಸದಸ್ಯತ್ವ ರದ್ದುಗೊಂಡಿದ್ದರಿಂದ ಬಿಜೆಪಿ ಸಂಖ್ಯಾ ಬಲ 35 ರಿಂದ 33 ಕ್ಕೆ ಕುಸಿದಿದೆ. ಆದರೂ, ಮೇಯರ್‌, ಉಪ ಮೇಯರ್‌ ಸ್ಥಾನಕ್ಕೇರಲು ಅಗತ್ಯ ಸಂಖ್ಯಾ ಬಲ ಬಿಜೆಪಿ ಬಳಿ ಇದೆ.ಇನ್ನು, ಅಧಿಕಾರಕ್ಕಾಗಿ ಕನ್ನಡ, ಮರಾಠಾ ಭಾಷಿಕ ಸದಸ್ಯರ ಮಧ್ಯೆ ಸ್ಪರ್ಧೆ ನಡೆದಿದ್ದು, ನಗರದ ಉತ್ತರ- ದಕ್ಷಿಣ ಭಾಗದವರಲ್ಲಿ ಯಾರು ಮೇಯರ್‌ ಆಗಬೇಕು? ಎಂಬ ಚರ್ಚೆ ನಡೆಯುತ್ತಿವೆ. 24 ನೇ ವಾರ್ಡ್‌ ಸದಸ್ಯ ಗಿರೀಶ ದೋಂಗಡೆ, 6 ನೇ ವಾರ್ಡ್‌ ಸದಸ್ಯ ಸಂತೋಷ ಪೇಡನೇಕರ್‌ ಸೇರಿದಂತೆ ನಾಲ್ಕೈದು ಸದಸ್ಯರು ಮೇಯರ್‌ ಸ್ಥಾನದ ಆಕಾಂಕ್ಷಿಗಳಿದ್ದಾರೆ. ಇದರೊಂದಿಗೆ ಮೇಯರ್‌ ಸ್ಥಾನ ತಪ್ಪಿದಲ್ಲಿ ಉಪಮೇಯರ್‌ ಸ್ಥಾನವನ್ನಾದರೂ ನೀಡಿ ಎಂದು ಮಹಿಳಾ ಸದಸ್ಯರು ತಮ್ಮ ನಾಯಕರ ಮೇಲೆ ಒತ್ತಡ ಹಾಕುತ್ತಿದ್ದಾರೆ.ಚುನಾವಣೆಯಲ್ಲಿ ಬಿಜೆಪಿ ಸದಸ್ಯರ ಸಂಖ್ಯಾ ಬಲ ಕುಸಿಯುವಂತೆ ಮಾಡುವುದು, ವಾಸದ ವಿಳಾಸ ಬದಲಾವಣೆಯೊಂದಿಗೆ ಕೆಲ ವಿಧಾನ ಪರಿಷತ್‌ ಸದಸ್ಯರಿಗೆ ಮತದಾನದ ಹಕ್ಕು ಸಿಗುವಂತೆ ಮಾಡಲು ತೆರೆಮರೆಯಲ್ಲಿ ಕಾಂಗ್ರೆಸ್‌ ಯತ್ನಿಸುತ್ತಿದೆ ಎನ್ನಲಾಗಿದೆ.ಕಾಂಗ್ರೆಸ್‌ ಪಕ್ಷ ಸದ್ಯ 10 ಸದಸ್ಯರ ಬಲ ಹೊಂದಿದ್ದು, ಇದರೊಂದಿಗೆ ಬಿಜೆಪಿಯ ನಾಲ್ಕು, ಎಐಎಂಐಎಂ 1 ಹಾಗೂ ಪಕ್ಷೇತರರು 12 ಸದಸ್ಯರ ಬೆಂಬಲ ಪಡೆಯುವುದು. ಜತೆಗೆ ಮೂವರು ಶಾಸಕರು, ಒಬ್ಬರು ಸಂಸದರು, ಒಬ್ಬರು ವಿಧಾನ ಪರಿಷತ್‌ ಸದಸ್ಯರ ಮತದೊಂದಿಗೆ ಮತ್ತೆ ಮೂರು ವಿಧಾನಪರಿಷತ್‌ ಸದಸ್ಯರ ಮತಗಳನ್ನು ಸೇರ್ಪಡೆ ಮಾಡಿಕೊಳ್ಳುವ ಲೆಕ್ಕಾಚಾರ ನಡೆದಿದೆ ಎಂಬ ಮಾತು ಕೇಳಿ ಬಂದಿದೆ.

ಪಾಲಿಕೆ ಸದಸ್ಯರ ಸಂಖ್ಯಾಬಲ

ಬಿಜೆಪಿ 33

ಕಾಂಗ್ರೆಸ್‌ 10

ಎಐಎಂಐಎಂ 1

ಪಕ್ಷೇತರರು 12

ಶಾಸಕರು 4

ಸಂಸದರು 2

ಎಂಎಲ್ಸಿ 1

ಒಟ್ಟು 63

ಮೇಯರ್‌, ಉಪ ಮೇಯರ್‌ ಅಭ್ಯರ್ಥಿಗಳು ಯಾರೆಂಬುದು ಇನ್ನೂ ಅಂತಿಮವಾಗಿಲ್ಲ. ಪಕ್ಷದ ನಾಯಕರ ನೇತೃತ್ವದಲ್ಲಿ ಮಂಗಳವಾರ ಸಭೆ ನಡೆಯಲಿದೆ. ಸಭೆಯಲ್ಲಿ ಎಲ್ಲರ ಅಭಿಪ್ರಾಯ ಪರಿಗಣಿಸಿ ನಾಯಕರು ನಿರ್ಧಾರ ಕೈಗೊಳ್ಳಲಿದ್ದಾರೆ – ಅಭಯ್‌ ಪಾಟೀಲ, ಶಾಸಕ

ಮಹಾನಗರ ಪಾಲಿಕೆಯಲ್ಲಿ ಈ ಬಾರಿ ಅಧಿಕಾರ ಹಿಡಿಯಲು ಈಗಾಗಲೇ ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಮಾತುಕತೆ ನಡೆಸಲಾಗಿದೆ. ಸಂಖ್ಯಾಬಲ ಹೆಚ್ಚಿಸಿಕೊಳ್ಳಲು ತಂತ್ರಗಾರಿಕೆ ರೂಪಿಸಲಾಗುತ್ತಿದೆ – ಮುಜಮ್ಮಿಲ್‌ ಡೋಣಿ, ಪಾಲಿಕೆ ಪ್ರತಿಪಕ್ಷದ ನಾಯಕ

Related Articles

Leave a Reply

Your email address will not be published. Required fields are marked *

Back to top button