ಮಾಜಿ ವಿಶ್ವ ಸುಂದರಿ ನಟಿ ಸುಶ್ಮಿತಾ ಸೇನ್ ಗೆ ಹೃದಯಾಘಾತ..
ಹೈದರಾಬಾದ್: .ಎರಡು ದಿನಗಳ ಹಿಂದೆ ನನಗೆ ಹೃದಯಾಘಾತವಾಗಿತ್ತು. ವೈದ್ಯರ ಸಲಹೆ ಮೇರೆಗೆ ಆಂಜಿಯೋಪ್ಲಾಸ್ಟಿ ಮಾಡಲಾಗಿದೆ. ಅಲ್ಲದೇ ಸ್ಟೆಂಟ್ಸ್ ಕೂಡ ಅಳವಡಿಸಲಾಗಿದೆ. ನನಗೆ ಚಿಕಿತ್ಸೆ ನೀಡಿದ ಹೃದ್ರೋಗ ತಜ್ಞರು ಆತಂಕ ಪಡುವ ಅಗತ್ಯವಿಲ್ಲ ಎಂದಿದ್ದಾರೆ. ಹೃದಯಾಘಾತ ಆದ ತಕ್ಷಣ ವೈದ್ಯಕೀಯ ನೆರವು ಸಿಕ್ಕಿತು. ಈಗ ಆರೋಗ್ಯ ಸ್ಥಿರವಾಗಿದೆ ಎಂದು ಸುಶ್ಮಿತಾ ಸೇನ್ ತಿಳಿಸಿದ್ದಾರೆ.
ಅಲ್ಲದೇ ತಮಗೆ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಾಯ ಮಾಡಿದ ಹಿತೈಷಿಗಳು, ಅಭಿಮಾನಿಗಳು, ಎಲ್ಲರಿಗೂ ಧನ್ಯವಾದ. ಎಲ್ಲವನ್ನೂ ಇನ್ನೊಂದು ಪೋಸ್ಟ್‌ನಲ್ಲಿ ವಿವರಿಸುವೆ. ಸದ್ಯಕ್ಕೆ ಧನ್ಯವಾದ, ವಿಷಯ ಹೇಳಬೇಕಿತ್ತು. ನನ್ನ ಆರೋಗ್ಯಕ್ಕಾಗಿ ಶ್ರಮಿಸಿದ ಎಲ್ಲರಿಗೂ ಧನ್ಯವಾದಗಳು. ನಿಮ್ಮ ಹಾರೈಕೆಯಿಂದ ನಾನು ಈಗ ಆರೋಗ್ಯವಾಗಿದ್ದೇನೆ. ಸದ್ಯ ನನ್ನಲ್ಲಿ ಯಾವುದೇ ಭಯವಿಲ್ಲ. ಈ ಮೊದಲಿನಂತೆಯೇ ನಾನು ಸಾಮಾನ್ಯ ಜೀವನವನ್ನು ನಡೆಸಬಲ್ಲೆ. ನಿಮ್ಮ ಪ್ರೀತಿಗೆ ಧನ್ಯವಾದಗಳು ಎಂದು ಅವರು ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ.
ಸುಶ್ಮಿತಾ ಸೇನ್ ಹೃದಯಾಘಾತಕ್ಕೆ ಒಳಗಾಗಿದ್ದಾರೆ ಎಂದು ತಿಳಿದ ತಕ್ಷಣ ಅವರ ಅಭಿಮಾನಿಗಳು ಆಘಾತಕ್ಕೊಳಗಾಗಿದ್ದಾರೆ. ಅವರ ಆರೋಗ್ಯ ಸುಧಾರಿಸಲೆಂದು ಹಲವರು ದೇವರಲ್ಲಿ ಬೇಡಿಕೊಳ್ಳುತ್ತ, ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಸುಶ್ಮಿತಾ ಸೇನ್ ಅವರ ಇನ್ಸ್ಟಾಗ್ರಾಮ್ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
47 ವರ್ಷದ ಸುಶ್ಮಿತಾ ಸೇನ್ ಫಿಟ್ನೆಸ್ ಬಗ್ಗೆ ಹೆಚ್ಚು ಕಾಳಜಿ ಇಟ್ಟುಕೊಂಡವರು. ಅವರು ಪ್ರತಿದಿನ ತಪ್ಪದೇ ವರ್ಕೌಟ್ ಮಾಡುತ್ತಾರೆ. ಈ ಮಧ್ಯೆ ಅವರಿಗೆ ಹೃದಯಾಘಾತ ಆಗಿರುವ ಸುದ್ದಿ ಕೇಳಿ ಅಭಿಮಾನಿಗಳು ಅಚ್ಚರಿಗೊಳಗಾಗಿದ್ದಾರೆ. ಹಾಗಾಗಿ ನೆಟಿಜನ್ಗಳು ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಗಮನ ಹರಿಸುವಂತೆ ಸಲಹೆ ನೀಡುತ್ತಿದ್ದಾರೆ.