ಮಾಜಿ ಎಸ್ಪಿ, ಐಪಿಎಸ್ ಅಧಿಕಾರಿಯನ್ನು ಬಂಧಿಸಿದ ರಾಷ್ಟ್ರೀಯ ತನಿಖಾ ದಳ!
ನಿಷೇಧಿತ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ತಳಮಟ್ಟದ ಕೆಲಸಗಾರರಿಗೆ ಸಹಾಯ ಮಾಡಿ, ರಹಸ್ಯ ದಾಖಲೆಗಳು, ಮಾಹಿತಿಗಳನ್ನು ಸೋರಿಕೆ ಮಾಡಿದ ಆರೋಪದಡಿ ರಾಷ್ಟ್ರೀಯ ತನಿಖಾ ದಳ ತನ್ನ ಮಾಜಿ ಎಸ್ಪಿ, ಐಪಿಎಸ್ ಅಧಿಕಾರಿ ಅರವಿಂದ್ ದಿಗ್ವಿಜಯ್ ನೇಗಿ ಎಂಬುವರನ್ನು ಬಂಧಿಸಿದೆ. ಐಪಿಎಸ್ ಅಧಿಕಾರಿಯನ್ನು ಬಂಧಿಸಿರುವ ಬಗ್ಗೆ ಎನ್ಐಎ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದೇ ಪ್ರಕರಣದಲ್ಲಿ ಈ ಮೊದಲು ಎನ್ಐಎ ಆರು ಮಂದಿಯನ್ನು ಬಂಧಿಸಿತ್ತು. ಇದೀಗೆ ಅರೆಸ್ಟ್ ಆಗಿರುವ ನೇಗಿ 2011ನೇ ಬ್ಯಾಚ್ನ ಐಪಿಎಸ್ ಅಧಿಕಾರಿಯಾಗಿದ್ದು, ಕಳೆದ ವರ್ಷ ನವೆಂಬರ್ 6ರಂದು ಎನ್ಐಎ ಕೇಸ್ ದಾಖಲಿಸಿಕೊಂಡಿತ್ತು. ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ಹೆಚ್ಚೆಚ್ಚು ಹರಡಲು ಮತ್ತು ಯೋಜನೆಗಳನ್ನು ರೂಪಿಸಲು ಎಲ್ಇಟಿಯ ತಳಮಟ್ಟದ ಕೆಲಸಗಾರರಿಗೆ ಸಹಾಯ ಮಾಡಿದ ಆರೋಪ ಬಂದ ಹಿನ್ನೆಲೆಯಲ್ಲಿ ಎನ್ಐಎ ತನಿಖೆ ಶುರು ಮಾಡಿತ್ತು.
ಎನ್ಐಎನ್ಲ್ಲಿದ್ದ ಐಪಿಎಸ್ ಅಧಿಕಾರಿ ಎ.ಡಿ.ನೇಗಿಯವರನ್ನು ಶಿಮ್ಲಾದಲ್ಲಿ ಪೋಸ್ಟಿಂಗ್ ಮಾಡಲಾಗಿತ್ತು. ಕಳೆದ ವರ್ಷ ನವೆಂಬರ್ನಲ್ಲಿ ಕೇಸ್ ದಾಖಲಿಸಿ ಅವರ ಮನೆಯನ್ನು ಸರ್ಚ್ ಮಾಡಲಾಗಿದೆ. ಈ ವೇಳೆ ಎನ್ಐಎಗೆ ಸಂಬಂಧಪಟ್ಟ ರಹಸ್ಯ ದಾಖಲೆಗಳನ್ನು ಸೋರಿಕೆ ಮಾಡಿದ್ದಕ್ಕೆ ಪುರಾವೆ ಸಿಕ್ಕಿದೆ. ಈ ಮಾಹಿತಿಗಳನ್ನು ಎ.ಡಿ.ನೇಗಿ ಯಾರಿಗೆ ಕೊಟ್ಟಿದ್ದಾರೋ, ಆತ ಎಲ್ಇಟಿಯ ತಳಮಟ್ಟದ ಕೆಲಸಗಾರನಾಗಿದ್ದಾನೆ ಎಂದೂ ರಾಷ್ಟ್ರೀಯ ತನಿಖಾ ದಳದ ವಕ್ತಾರ ತಿಳಿಸಿದ್ದಾರೆ.
ಭಯೋತ್ಪಾದಕ ಸಂಘಟನೆ ಎಲ್ಇಟಿಗೆ ಸೇರಲು ಯುವಕರನ್ನು ಪ್ರೇರೇಪಿಸುವ ಮತ್ತು ಅವರನ್ನ ನೇಮಕ ಮಾಡಿಕೊಳ್ಳುತ್ತಿರುವ ಕೇಸ್ಗೆ ಸಂಬಂಧಪಟ್ಟಂತೆ ಬುಧವಾರ ಎನ್ಐಎ ಜಮ್ಮು-ಕಾಶ್ಮೀರದ ಮೂರು ಸ್ಥಳಗಳಲ್ಲಿ ಶೋಧ ಕಾರ್ಯ ನಡೆಸಿದೆ. ಇದಕ್ಕೆ ಕೇಂದ್ರ ಮೀಸಲು ಪಡೆ ಮತ್ತು ಜಮ್ಮು ಕಾಶ್ಮೀರ ಪೊಲೀಸರ ಸಹಾಯವನ್ನೂ ತೆಗೆದುಕೊಂಡಿದೆ. ಲಷ್ಕರ್ ಇ ತೊಯ್ಬಾದ ಅಂಗ ಸಂಸ್ಥೆ ದಿ ರೆಸಿಸ್ಟನ್ಸ್ ಫ್ರಂಟ್ನ ಕಮಾಂಡರ್ಗಳಾದ ಸಜ್ಜದ್ ಗುಲ್, ಸಲೀಂ ರೆಹಮಾನಿ ಅಲಿಯಾಸ್ ಅಬು ಸಾದ್ ಮತ್ತು ಸೈಫುಲ್ಲಾ ಸಜೀದ್ ಜಟ್ ಸೇರಿ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಯುವಕರನ್ನು ಸೆಳೆಯುವ ಕಾರ್ಯ ಮಾಡುತ್ತಿದ್ದಾರೆ. ಅವರನ್ನು ಉಗ್ರ ಸಂಘಟನೆಗೆ ಸೇರಿಸಲು ಪ್ರಚೋದಿಸುತ್ತಿದ್ದಾರೆ ಎಂದೂ ಎನ್ಐಎ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಶೋಧ ಕಾರ್ಯ ನಡೆಸಿದ ಎನ್ಐಎ ಅಧಿಕಾರಿಗಳು ಹಲವು ಡಿಜಿಟಲ್ ಡಿವೈಸ್ಗಳನ್ನು, ವಸ್ತುಗಳನ್ನೂ ಜಪ್ತಿ ಮಾಡಿದ್ದಾರೆ.