ಮಸಣವಾದ ಮದುವೆ ಮನೆ!
ಉತ್ತರ ಪ್ರದೇಶ(ಫೆ. 17): ಮದುವೆ ಮನೆ ಅಂದ್ರೆ ಕೇಳಬೇಕೆ ಅಲ್ಲಿ ಖುಷಿ, ಸಂಭ್ರಮ, ಸಡಗರ ಮನೆ ಮಾಡಿರುತ್ತದೆ. ಮದುವೆ ಸಮಾರಂಭದ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಬಂಧು-ಬಳಗ ಸೇರಿ ಮದುವೆಗೆ ಇನ್ನಷ್ಟು ಮೆರಗು ಬಂದಿರುತ್ತದೆ. ಮದುವೆ ಶಾಸ್ತ್ರಗಳಿಂದ ಮದುವೆ ಮನೆ ಸಂಭ್ರಮದಿಂದ ಕೂಡಿರುತ್ತದೆ. ಇಂತಹ ಖುಷಿಯಲ್ಲಿದ್ದ ಮದುವೆ ಮನೆಯಲ್ಲಿ ನಡೆಯಬಾರದ ಘಟನೆಯೊಂದು ನಡೆದು ಹೋಗಿದೆ. ಮದುವೆ ಮನೆ ಮಸಣವಾಗಿ ಸೂತಕದ ಛಾಯೆ ಆವರಿಸಿದೆ. ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ಗ್ರಾಮವೊಂದರಲ್ಲಿ ನಡೆದ ದುರಂತಕ್ಕೆ ಜನರು ಮಮ್ಮುಲ ಮರುಗಿದ್ದಾರೆ. ಅಷ್ಟಕ್ಕೂ ಅಲ್ಲಿ ನಡೆದ ಘಟನೆಯಾದರೂ ಏನು? ಮದುವೆ ಮನೆ ಮಸಣವಾಗಿದ್ದಾರೂ ಹೇಗೆ ಅಂತೀರಾ?
ಮದುವೆ ಸಂಭ್ರಮದಲ್ಲಿದ್ದವರು ಯಾರೂ ಸಹ ಊಹಿಸಲು ಅಸಾಧ್ಯವಾದ ಘಟನೆ ನಡೆದು ಹೋಗಿದೆ. ಮದುವೆ ಮನೆಯಲ್ಲಿ ಅರಿಶಿಣ ಶಾಸ್ತ್ರ ನಡೆಯುತ್ತಿದ್ದ ವೇಳೆ ಸುಮಾರು 13 ಮಂದಿ ಮಹಿಳೆಯರು ಆಕಸ್ಮಿಕವಾಗಿ ಬಾವಿಗೆ ಬಿದ್ದು ದುರಂತ ಸಾವನ್ನಪ್ಪಿದ್ದಾರೆ. ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ಕುಶಿನಗರ ಜಿಲ್ಲೆಯ ನೆಬುವಾ ನೌರಂಗಿಯಾ ಗ್ರಾಮದಲ್ಲಿ. ವಿಧಿಯಾಟಕ್ಕೆ ಮದುವೆ ಸಂಭ್ರಮದಲ್ಲಿದ್ದ ಮಹಿಳೆಯರು ಮಸಣ ಸೇರಿದ್ದಾರೆ. ಮದುವೆ ಮನೆಯಲ್ಲಿ ಇಂತಹದ್ದೊಂದು ಅವಘಡ ಸಂಭವಿಸುತ್ತದೆಂದು ಯಾರೂ ಸಹ ಊಹಿಸಿರಲಿಲ್ಲ. ಜವರಾಯನ ಅಟ್ಟಹಾಸಕ್ಕೆ 13 ಮಹಿಳೆಯರು ಬಲಿಯಾಗಿದ್ದು, ಮದುವೆ ಮನೆಯಲ್ಲಿ ಸೂತಕದ ವಾತಾವರಣ ನಿರ್ಮಾಣವಾಗಿದೆ.
ದುರಂತ ನಡೆದದ್ದು ಹೇಗೆ?
ಮದುವೆ ಮನೆಯಲ್ಲಿ ಸಾಮಾನ್ಯವಾಗಿ ನಡೆಯುವ ಶಾಸ್ತ್ರಗಳಲ್ಲಿ ಅರಿಶಿಣ/ಹಳದಿ ಶಾಸ್ತ್ರವೂ ಒಂದು. ಅಂತೆಯೇ ನೆಬುವಾ ನೌರಂಗಿಯಾ ಗ್ರಾಮದಲ್ಲೂ ಈ ಹಳದಿ ಶಾಸ್ತ್ರ ನಡೆಯುತ್ತಿತ್ತು. ಈ ಕಾರ್ಯಕ್ರಮದಲ್ಲಿ ಅನೇಕ ಯುವತಿಯರು, ಬಂಧು-ಬಳಗದವರು ಭಾಗವಹಿಸಿದ್ದರು. ಬಾವಿಯ ಕಟ್ಟೆಯ ಮೇಲೆ ಕುಳಿತು ಹಳದಿ ಶಾಸ್ತ್ರವನ್ನು ನೋಡುತ್ತಿದ್ದರು. ಇದ್ದಕ್ಕಿದ್ದಂತೆ ಬಾವಿಯ ಮೇಲಿದ್ದ ಕಬ್ಬಿಣದ ಗ್ರಿಲ್ ಮುರಿದಿದೆ. ಆಗ ಬಾವಿಯ ಮೇಲೆ ನಿಂತಿದ್ದ ಅಷ್ಟೂ ಮಹಿಳೆಯರು ಆಕಸ್ಮಿಕವಾಗಿ ಬಾವಿಗೆ ಧುಮುಕಿದ್ದಾರೆ. ಈ ಘಟನೆ ಬುಧವಾರ ರಾತ್ರಿ 8.30ರ ಸಮಯದಲ್ಲಿ ನಡೆದಿದೆ. ಮಹಿಳೆಯರು ಕುಳಿತಿದ್ದರಿಂದ ಹೊರೆ ಹೆಚ್ಚಾಗಿ ಬಾವಿಯ ಕಬ್ಬಿಣದ ಗ್ರಿಲ್ ಮುರಿದಿದೆ ಎಂದು ಪೊಲೀಸರು ಶಂಕಿಸಿದ್ದಾರೆ.
15 ಜನರ ರಕ್ಷಣೆ
ಈ ದುರಂತದಲ್ಲಿ ಪೊಲೀಸರು ಮತ್ತು ಗ್ರಾಮಸ್ಥರ ನೆರವಿನಿಂದಾಗಿ ಸುಮಾರು 15 ಮಂದಿ ಮಹಿಳೆಯರನ್ನು ರಕ್ಷಿಸಲಾಯಿತು. ಆದರೆ 13 ಜನರನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.
ಯೋಗಿ ಆದಿತ್ಯನಾಥ್ ವಿಷಾದ
ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಘಟನೆ ಕುರಿತಾಗಿ ವಿಷಾದ ವ್ಯಕ್ತಪಡಿಸಿದ್ದಾರೆ. ದುರಂತದಲ್ಲಿ ಸಾವನ್ನಪ್ಪಿದವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ. ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಳ್ಳುವಂತೆ ಹಾಗೂ ಗಾಯಗೊಂಡವರಿಗೆ ಸೂಕ್ತ ಚಿಕಿತ್ಸೆ ಕೊಡಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.