ಸೌರಶಕ್ತಿ ಸ್ಥಾವರ ಅಳವಡಿಕೆ ವಿಚಾರದಲ್ಲಿ ಯಾವುದೇ ರಾಜಕಾರಣ ಇಲ್ಲ. ದರ್ಶನ್ ಪುಟ್ಟಣ್ಣಯ್ಯ.

ಸೌರಶಕ್ತಿ ಸ್ಥಾವರ ಅಳವಡಿಕೆ ವಿಚಾರದಲ್ಲಿ ಯಾವುದೇ ರಾಜಕಾರಣ ಇಲ್ಲ. ದರ್ಶನ್ ಪುಟ್ಟಣ್ಣಯ್ಯ.
ಪಾಂಡವಪುರ: ತಾಲ್ಲೂಕಿನ ಕನಗನಹಳ್ಳಿ ಗ್ರಾಮದಲ್ಲಿ ಸೌರಶಕ್ತಿ ಸ್ಥಾವರ ಅಳವಡಿಕೆ ವಿಚಾರದಲ್ಲಿ ಯಾವುದೇ ರಾಜಕಾರಣ ಇಲ್ಲ,ರೈತರ ಅನುಕೂಲಕ್ಕಾಗಿ ಸ್ಥಳೀಯವಾಗಿ ವಿದ್ಯುತ್ ಉತ್ಪಾದಿಸಲು ಈ ಯೋಜನೆ ಅನುಷ್ಠಾನ ಗೊಳಿಸಲಾಗುತ್ತಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸುವುದು ಸರಿಯಲ್ಲ ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.
ತಾಲೂಕಿನ ಟಿ.ಎಸ್.ಛತ್ರ ಗ್ರಾಮದಲ್ಲಿ ಎಸ್‌ಇಪಿ ಅನುದಾನದಲ್ಲಿ 50 ಲಕ್ಷ ವೆಚ್ಚದ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಚಾಲನೆ ನೀಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಟಿ.ಎಸ್.ಛತ್ರ ಗ್ರಾಮದಲ್ಲಿ ಎಸ್‌ಇಪಿ ಅನುದಾನದಲ್ಲಿ 50 ಲಕ್ಷ ವೆಚ್ಚದ ಪರಿಶಿಷ್ಟ ಕಾಲೋನಿಗಳಿಗೆ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ಸಲ್ಲಿಸಲಾಗಿದೆ ಗುಣಮಟ್ಟದ ರಸ್ತೆಗಳನ್ನು ಮಾಡಲು ಗುತ್ತಿಗೆದಾರನಿಗೆ ತಿಳಿಸಲಾಗಿದೆ ಎಂದರು.
ರೈತರ ಕೃಷಿಗೆ ಅನುಕೂಲ ವಾಗಲೆಂದು ಕೇಂದ್ರ ಸರ್ಕಾರದ ಪಿಎಂ ಕುಸುಮ್ ಯೋಜನೆಯಡಿ ರಾಜ್ಯ ಸರ್ಕಾರದ ಅನುದಾನದೊಂದಿಗೆ ತಾಲೂಕಿನ ಕನಗನಹಳ್ಳಿಯಲ್ಲಿ ಸೋಲಾರ್ ಪ್ಲಾಂಟ್ ಅಳವಡಿಸಲಾಗುತ್ತಿದೆ, ಪಿಎಂ ಕುಸುಮ್ ಯೋಜನೆಯ ಅಧಿಕಾರಿಗಳು ಯೋಜನೆಗೆ ಅಗತ್ಯವಿರುವ ಜಾಗವನ್ನು ಗುರುತಿಸಿದ್ದಾರೆ,ಇದಕ್ಕೆ ಸ್ಥಳೀಯರು ಕೂಡ ಒಮ್ಮತ ಸೂಚಿಸಿ ನಿಗದಿಯಾಗಿರುವ ಸ್ಥಳದಲ್ಲೇ ಯೋಜನೆ ಅನುಷ್ಠಾನಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದಾರೆ.
ಇ ಪ್ರೊಕ್ಯೂರ್ ಮೆಂಟ್ ಮೂಲಕ ಗುತ್ತಿಗೆದಾರರು ಕಾಮಗಾರಿ ಪಡೆದುಕೊಂಡಿದ್ದಾರೆ, ಟೆಂಡರ್‌ಗೂ ಮೊದಲೇ ಗುತ್ತಿಗೆದಾರರು ಯಾವ ರಾಜ್ಯದವರು ಎಂದು ನಮಗೇನು ಗೊತ್ತು, ಇದಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎಂದು ಮಾಜಿ ಶಾಸಕರ ಹೆಸರೇಳದೆ ಉತ್ತರಿಸಿದರು.
ರೈತರ ಪಂಪ್‌ಸೆಟ್‌ಗಳಿಗೆ ರಾತ್ರಿ ವೇಳೆ ವಿದ್ಯುತ್ ಪೂರೈಕೆಯಾಗುವುದ್ದರಿಂದ ರೈತರು ಸಾಕಷ್ಟು ಸಮಸ್ಯೆ ಅನುಭವಿಸುತ್ತಿದ್ದಾರೆ, ಮೇಲುಕೋಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಳೆಯಾಧಾರಿತ ಪ್ರದೇಶಗಳಲ್ಲಿ ತರಕಾರಿ, ಹೂವು ಬೆಳೆಯುವ ರೈತರ ಅನುಕೂಲಕ್ಕಾಗಿ ಚಿನಕುರಳಿ, ಮೇಲುಕೋಟೆ, ಮತ್ತು ದುದ್ದ ಸೇರಿದಂತೆ ಮೂರು ಹೋಬಳಿಗಳಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ, ನೀರಾವರಿ ಪ್ರದೇಶಗಳಿಗೆ ಈ ಯೋಜನೆಯ ಅಗತ್ಯತೆ ಇಲ್ಲ, ಚಿನಕುರಳಿ ಭಾಗಕ್ಕೆ 5 ಮೆಗಾವ್ಯಾಟ್ ವಿದ್ಯತ್ ಅವಶ್ಯಕತೆಯಿದ್ದು, ಯೋಜನೆಯಿಂದ ಈ ಸಮಸ್ಯೆಗೆ ಪರಿಹಾರ ಸಿಗುತ್ತದೆ ಎಂದರು.
ಕಾಮಗಾರಿ ಭೂಮಿ ಪೂಜೆ ವೇಳೆ ಶಿಷ್ಟಾಚಾರ ಉಲ್ಲಂಘನೆಯಾಗಿಲ್ಲ. ಕಾರ್ಯಕ್ರಮಕ್ಕೆ ಇಒ. ತಹಸೀಲ್ದಾರ್, ಪಿಡಿಒ, ಸೆಸ್ಕ್ ಮತ್ತು ಕುಸುಮ್ ಯೋಜನೆ ಅಧಿಕಾರಿಗಳನ್ನು ಒಳಗೊಂಡಂತೆ ಎಲ್ಲರೂ ಬಂದಿದ್ದರು. ಕಾರ್ಯಕ್ರಮದ ಬಗ್ಗೆ ಗ್ರಾಮ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯರಿಗೆ ಪಿಡಿಒ ಮಾಹಿತಿ ನೀಡಿರುತ್ತಾರೆ ಎಂದು ಭಾವಿಸಿದ್ದೆ, ಅವರು ಮಾಹಿತಿ ಕೊಟ್ಟಿದ್ದಾರೋ ಇಲ್ಲವೋ ನನಗೆ ಗೊತ್ತಿಲ್ಲ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.
ಕ್ಯಾತನಹಳ್ಳಿಯಲ್ಲಿ ವಿದ್ಯುತ್ ಉಪ ಕೇಂದ್ರ ನಿರ್ಮಿಸಲು ಶಂಭುಲಿಂಗೇಶ್ವರ ಎಜುಕೇಷನ್ ಟ್ರಸ್ಟ್ ಸಮೀಪ ಜಾಗ ಗುರುತಿಸಲಾಗಿದೆ, ಇದಕ್ಕೆ ಸಲ್ಲಿಕೆಯಾಗಿದ್ದ ಪ್ರಸ್ತಾವನೆಯಂತೆ ಸರ್ಕಾರ ಅಗತ್ಯವಿರುವ ಹಣ ಬಿಡುಗಡೆ ಮಾಡಿದೆ ಹಾಗೂ ಜಿಲ್ಲಾಧಿಕಾರಿಗಳು ಜಾಗಕ್ಕೆ ಸಂಬಂಧಿಸಿದಂತೆ ಅಗತ್ಯವಿರುವ ದಾಖಲೆಗಳನ್ನು ಸಿದ್ಧಪಡಿಸಿ ಮಂಜೂರು I ಮಾಡಿಕೊಟ್ಟಿದ್ದಾರೆ, ಯಾರಿಗಾದರೂ ಈ ಬಗ್ಗೆ ಅನುಮಾನವಿದ್ದರೆ ಇದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಅವರಿಗೆ ನೀಡಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿಡಿಒ ಮಹೇಶ್‌ಕುಮಾರ್, ಬಿಲ್ ಕಲೆಕ್ಟರ್ ರಾಜು, ಗುತ್ತಿಗೆದಾರ ಬಸವೇಗೌಡ, ಗ್ರಾಮಸ್ಥರಾದ ಅಶ್ವಥ್, ಜವರಪ್ಪ, ಸಿದ್ದು, ಹಿರೇಮರಳಿ ಶಿವಕುಮಾರ್ ಇತರರು ಇದ್ದರು.
ಚಿನಕುರಳಿಗೆ ಸೋಲಾರ್ ಪ್ಲಾಂಟ್ ಬೇಕಾಗಿಲ್ಲ : ಸಿ ಎಸ್ ಪುಟ್ಟರಾಜು
ಕನಗನಹಳ್ಳಿ ಗ್ರಾಮದ ಸರ್ಕಾರಿ ಗೋಮಾಳದ 14 ಎಕರೆ ಜಾಗವನ್ನು ಆಂಧ್ರ ಮೂಲದ ವ್ಯಕ್ತಿಗೆ 30 ವರ್ಷಕ್ಕೆ ಗುತ್ತಿಗೆ ನೀಡಿ ಕೇವಲ 4.5 ಮೆಗಾವ್ಯಾಟ್ ವಿದ್ಯುತ್ ಉತ್ಪಾದನ ಮಾಡುವುದರ ಜತೆಗೆ ಉತ್ಪಾದನೆ ಯಾಗುವ ವಿದ್ಯುತ್‌ನನ್ನು ಚಿನಕುರಳಿ ಸಬ್‌ಸ್ಟೇಷನ್‌ಗೆ ತರಲು ಪ್ರತ್ಯೇಕ ಲೈನ್ ಅಳವಡಿಸಲು ಹಲವು ರೈತರ ಜಮೀನು ಮತ್ತು ತೋಟದ ಬೆಳೆ ನಾಶವಾಗಿ ರೈತರಿಗೆ ಅನಾನೂಕೂಲವಾಗಲಿದೆ ಎಂದು ಮಾಜಿ ಶಾಸಕ ಸಿ.ಎಸ್.ಪುಟ್ಟರಾಜು ಆರೋಪಿಸಿದರು.
ಶಾಸಕರು ರೈತರಿಗೆ ಅನಾನೂಕೂಲ ಉಂಟುಮಾಡಿ ಆಂಧ್ರಮೂಲದ ವ್ಯಕ್ತಿಗೆ ದುಡ್ಡು ಮಾಡಿಕೊಡಲು ಮುಂದಾಗಿದ್ದಾರೆ, ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ಚಿನಕುರಳಿ ಪವರ್ ಸ್ಟೇಷನ್‌ಗೆ ಪ್ರತ್ಯೇಕ ಎಕ್ಸ್‌ಪ್ರೆಸ್ ವಿದ್ಯುತ್ ಲೈನ್ ಅಳವಡಿಕೆ ಕಾಮಗಾರಿಯನ್ನು ಮಾಡಿದ್ದೇನೆ. ಇದರ ಮೂಲಕ ಈ ಭಾಗದ ರೈತರಿಗೆ ಹಗಲು ವೇಳೆಯಲ್ಲಿ ಉತ್ತಮ ವಿದ್ಯುತ್ ನೀಡಲು ಶಾಸಕರು ಶ್ರಮಸಬೇಕು, ರೈತಾಪಿ ವರ್ಗಕ್ಕೆ ಮಾರಕವಾಗಿರುವ ಸೋಲಾರ್ ಪವರ್ ಪ್ಲಾಂಟ್ ಯೋಜನೆ ಅನುಷ್ಠಾನ ಮಾಡಬಾರದು ಎಂದು ಮಾಧ್ಯಮದ ಮೂಲಕ ಒತ್ತಾಯಿಸಿದರು.
ನಾನು ಶಾಸಕನಾಗಿ ಆಯ್ಕೆ ಯಾಗುವವರೆಗೂ ಕ್ಷೇತ್ರದಲ್ಲಿ ಇದದ್ದು ಕೇವಲ ಒಂದೇ ಒಂದು ವಿದ್ಯುತ್ ಸಬ್ ಸ್ಟೇಷನ್, ಶಾಸಕನಾದ ಬಳಿಕ ಹೋಬಳಿಗೆ ಮೂರು ವಿದ್ಯುತ್ ಸಬ್ ಸ್ಟೇಷನ್ ಮಂಜೂರು ಮಾಡಿಸಿ ಸಮರ್ಪಕವಾಗಿ ವಿದ್ಯುತ್ ಪೂರೈಕೆ ಮಾಡುವ ಕೆಲಸ ಮಾಡಿದ್ದೇನೆ. ನಮಗೆ ಸೋಲಾರ್ ಪ್ಲಾಂಟ್‌ನ ಅವಶ್ಯಕತೆ ಇಲ್ಲ, ಶಾಸಕರು ಬೇಕಾದರೆ ಬೇರಡೆಗೆ ವರ್ಗಾಹಿಸಲಿ, ನನ್ನ ಅವಧಿಯಲ್ಲಿ ಕ್ಯಾತನಹಳ್ಳಿಗೆ ವಿದ್ಯುತ್ ಸಬ್ ಸ್ಟೇಷನ್ ಮಂಜೂರು ಮಾಡಿಸಿದ್ದೇನೆ, ಆದರೆ ಇಲ್ಲಿಯವರೆಗೂ ಅದಕ್ಕೆ ಜಾಗ ಮಂಜೂರು ಮಾಡಿಸಿಕೊಡಲು ಆಗಿಲ್ಲ,ಮೊದಲು ಕ್ಯಾತನಹಳ್ಳಿ ವಿದ್ಯುತ್ ಸಬ್ ಸ್ಟೇಷನ್‌ಗೆ ಸ್ಥಳ ಮಂಜೂರು ಮಾಡಿಸಿಕೊಡುವ ಕೆಲಸ ಮಾಡಲಿ ಎಂದು ಸಲಹೆ ನೀಡಿದರು.
ತಾಲೂಕಿನವರಾದ ಐಎಎಸ್ ಅಧಿಕಾರಿಯಾಗಿದ್ದ ಎಸ್.ಆರ್.ಉಮಾಶಂಕರ್ ಅವರು ಗೃಹ ಇಲಾಖೆಯಲ್ಲಿ ಕೆಲಸ ಮಾಡುವ ಸಂದರ್ಭದಲ್ಲಿ ಚಿನಕುರಳಿ ಗ್ರಾಮದ ಉಪ ಠಾಣೆಯನ್ನು ಮೇಲ್ದರ್ಜೆಗೇರಿಸಿ ಪೊಲೀಸ್ ಠಾಣೆ ಮಂಜೂರು ಮಾಡಿಸಿದ್ದರು. ಆದರೆ, ಈಗಿನ ಶಾಸಕರು ಅದನ್ನು ರದ್ದುಪಡಿಸಿ ಕ್ಯಾತನಹಳ್ಳಿ ಗ್ರಾಮಕ್ಕೆ ಸ್ಥಳಾಂತರಿಸಿದ್ದಾರೆ. ಶಾಸಕರು ಮನಸ್ಸು ಮಾಡಿದ್ದರೆ ಈಗಿನ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ಯಾತನಹಳ್ಳಿ ಗ್ರಾಮಕ್ಕೂ ಸಬ್ ಸ್ಟೇಷನ್ ಮಂಜೂರು ಮಾಡಿಸಿಕೊಳ್ಳಬಹುದಾಗಿತ್ತು. ಅದನ್ನು ಬಿಟ್ಟು ಚಿನಕುರಳಿಗೆ ಮಂಜೂರಾಗಿದ್ದ ಠಾಣೆಯನ್ನು ಸ್ಥಳಾಂತರ ಮಾಡಿಸಿ ತಮ್ಮೂರಿಗೆ ತೆಗೆದುಕೊಂಡು ಹೋದರು. ಇದೀಗ ಸ್ಥಳೀಯರು ವಿರೋಧ ನಡೆಸಿದರು ಸೋಲಾರ್ ಪವರ್ ಪ್ಲಾಂಟ್ ನಿರ್ಮಾಣಕ್ಕೆ ಭೂಮಿ ಪೂಜೆಸಲ್ಲಿಸಿದ್ದಾರೆ ಎಂದು ದೂರಿದರು.

ವರದಿ ಕೃಷ್ಣ ಇ. (ಪಾಂಡವಪುರ)



