ದೇಶ
Trending

ಮಳೆಗೆ ಹಿಮಾಚಲ ಪ್ರದೇಶ ತತ್ತರ

ಹಿಮಾಚಲ ಪ್ರದೇಶದಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಭೂಕುಸಿತಗಳು, ಹಠಾತ್ ಪ್ರವಾಹ ಉಂಟಾಗಿದೆ. ಮಂಡಿ ಜಿಲ್ಲೆಯ ಸುಂದರನಗರ ಉಪವಿಭಾಗದ ಜಂಗಮ್ ಬಾಗ್‌ನಲ್ಲಿ ಮಂಗಳವಾರ ಸಂಜೆ 6.30 ರ ಸುಮಾರಿಗೆ ಭೂಕುಸಿತ ಸಂಭವಿಸಿದ್ದು, ಅನಾಹುತ ಸೃಷ್ಟಿಸಿದೆ. ಭೂ ಕುಸಿತದಿಂದ ಎರಡು ಮನೆಗಳು ಕುಸಿದಿವೆ. ಈ ದುರಂತದಲ್ಲಿ ಆರು ಮಂದಿ ಸಾವನ್ನಪ್ಪಿದ್ದಾರೆ. ಅವಶೇಷಗಳ ಅಡಿಯಲ್ಲಿ ಇನ್ನು ಕೆಲವರು ಹೂತು ಹೋಗಿರುವ ಸಾಧ್ಯತೆ ಇರುವ ಹಿನ್ನೆಲೆ ಅವರನ್ನು ಹೊರ ತೆಗೆಯುವ ಪ್ರಯತ್ನ ಸಾಗಿದೆ.

ಅನೇಕರು ಅವಶೇಷಗಳ ಅಡಿ ಸಿಲುಕಿರುವ ಸಾಧ್ಯತೆ: ಭೂ ಕುಸಿತದ ಮಾಹಿತಿ ಲಭ್ಯವಾಗುತ್ತಿದ್ದಂತೆ ಸ್ಥಳೀಯ ಆಡಳಿತ ಸ್ಥಳಕ್ಕೆ ಧಾವಿಸಿ, ನಿರಂತರ ರಕ್ಷಣಾ ಕಾರ್ಯ ನಡೆಸಿತು. ಸುಂದರನಗರ ಶಾಸಕ ರಾಕೇಶ್ ಜಮ್ವಾಲ್, ಜಿಲ್ಲಾಧಿಕಾರಿ ಮಂಡಿ ಅಪೂರ್ವ್ ದೇವಗನ್ ಮತ್ತು ಎಸ್ಪಿ ಮಂಡಿ ಸಾಕ್ಷಿ ವರ್ಮಾ ಅವರು ಪರಿಹಾರ ಮತ್ತು ರಕ್ಷಣಾ ತಂಡದೊಂದಿಗೆ ಸ್ಥಳಕ್ಕೆ ಆಗಮಿಸಿದರು. ಎನ್​ಡಿಆರ್​ಎಫ್​, ಎಸ್​ಡಿಆರ್​ಎಫ್​, ಮಂಡಿ ಜಿಲ್ಲಾ ಪೊಲೀಸ್ ಮತ್ತು ಗೃಹರಕ್ಷಕ ದಳದ ತಂಡಗಳು ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಸಿಕೊಂಡಿವೆ.

ಈ ಸಂದರ್ಭದಲ್ಲಿ ಭೂ ಕುಸಿತದಿಂದ ಪ್ರಾಣ ರಕ್ಷಣೆಗೆ ಜನರು ಓಡಿದ ಪರಿಣಾಮ ಕಾಲ್ತುಳಿತ ಸಂಭವಿಸಿದೆ. ಅವಶೇಷಗಳಡಿ ಸಿಲುಕಿದ ಇಬ್ಬರು ಮಹಿಳೆ ಮತ್ತು ಬಾಲಕಿಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅವರನ್ನು ಉಳಿಸಲು ಸಾಧ್ಯವಾಗಲಿಲ್ಲ. ಈ ಅವಶೇಷಗಳ ಅಡಿ ಇನ್ನು ಎಷ್ಟು ಜನ ಸಿಲುಕಿದ್ದಾರೆ ಎಂಬ ಮಾಹಿತಿ ಇಲ್ಲ. ಸ್ಥಳದಲ್ಲಿ ಮೂರು ಜೆಸಿಬಿ ಯಂತ್ರಗಳು ಅವಶೇಷವನ್ನು ತೆಗೆದುಹಾಕುವ ಕಾರ್ಯದಲ್ಲಿ ನಿರತವಾಗಿದೆ.

ಎರಡು ಮನೆಗಳು ಕುಸಿತ: ಘಟನೆ ಕುರಿತು ಮಾತನಾಡಿರುವ ಮಂಡಿ ಜಿಲ್ಲಾಧಿಕಾರಿ ಅಪೂರ್ವ್​​ ದೇವಗನ್​, ಸುಂದರನಗರದಲ್ಲಿ ಸಂಭವಿಸಿದ ಈ ಭಾರಿ ಭೂಕುಸಿತದಲ್ಲಿ 6 ಮಂದಿ ಸಾವನ್ನಪ್ಪಿದ್ದಾರೆ. ಕಿರಾತ್, ಶಾಂತಿ ದೇವಿ, ಸುರೇಂದ್ರ ಕೌರ್, ಗುರುಪ್ರೀತ್ ಸಿಂಗ್ ಮತ್ತು ಪ್ರಕಾಶ್ ಶರ್ಮಾ ಎಂದು ಗುರುತಿಸಲಾಗಿದೆ. ಭೂ ಕುಸಿತದಲ್ಲಿ ಸುರೇಂದ್ರ ಕೌರ್ ಮತ್ತು ಶಾಂತಿ ದೇವಿ ಅವರ ಮನೆ ಸಂಪೂರ್ಣ ಕುಸಿದು, ನಾಮಾವಶೇಷವಾಗಿದೆ. ಈ ಮನೆಗಳ ಪಕ್ಕದ್ದಲ್ಲಿದ್ದ ಮತ್ತೊಂದು ಮನೆ ಕೂಡ ಕುಸಿತದ ಭೀತಿಯಲ್ಲಿದೆ ಎಂದರು.

ಜೀವಂತ ಸಮಾಧಿಯಾದ ತಾಯಿ – ಮಗ: ಈ ಕಾರ್ಯಾಚರಣೆ ವೇಳೆ ರಕ್ಷಣಾ ತಂಡವು ಮನೆಯ ಅವಶೇಷಗಳಲ್ಲಿ ಸುರಿಂದರ್ ಕೌರ್ ಮತ್ತು ಗುರುಪ್ರೀತ್ ಅವರ ಶವಗಳನ್ನು ಪತ್ತೆ ಮಾಡಲಾಗಿದೆ. ಎಲ್ಲಾ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಭೂ ಕುಸಿತದ ಸಮಯದಲ್ಲಿ ಸ್ಕೂಟರ್​ ಸವಾರ ಕೂಡ ಹೂತು ಹೋಗಿರುವ ಸಾಧ್ಯತೆ ಇದ್ದು, ವಾಹನದ ಮುಂಭಾಗ ಮಾತ್ರ ಪತ್ತೆಯಾಗಿದೆ. ಗುಡ್ಡ ಕುಸಿತ ಪರಿಣಾಮ ಹಲವು ಜನರು ಸಿಲುಕಿದ್ದು, ಅವರ ಪತ್ತೆಗೆ ನಿರಂತರ ಹುಡುಕಾಟ ಸಾಗಿದೆ.

Related Articles

Leave a Reply

Your email address will not be published. Required fields are marked *

Back to top button