ಮತ್ತೆ ಗೃಹ ಬಂಧನದಲ್ಲಿ ಇರಿಸಿದ್ದಾರೆ: ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಆರೋಪ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಗೆ ಭೇಟಿ ನೀಡಲು ಸಿದ್ಧತೆ ನಡೆಸಿದ್ದ ತನ್ನನ್ನು ಮತ್ತೆ ಗೃಹಬಂಧನದಲ್ಲಿರಿಸಲಾಗಿದೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಅಧ್ಯಕ್ಷೆ ಮೆಹಬೂಬಾ ಮುಫ್ತಿ ಬುಧವಾರ ಆರೋಪಿಸಿದ್ದಾರೆ.
ಪುಲ್ವಾಮಾ ಜಿಲ್ಲೆಯ ಟ್ರಾಲ್ ಪಟ್ಟಣದಲ್ಲಿ ಸೇನಾ ಯೋಧರು ಕುಟುಂಬದವರಿಗೆ ಥಳಿಸಿದ್ದು, ಮಹಿಳೆಯೊಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಮೆಹಬೂಬಾ ಅವರು ಮಂಗಳವಾರ ಆರೋಪಿಸಿದ್ದರು. ಬುಧವಾರ ಆ ಕುಟುಂಬದವರನ್ನು ಭೇಟಿ ಮಾಡುವುದಾಗಿ ಹೇಳಿದ್ದರು.
‘ಸೇನೆಯಿಂದ ದಾಳಿಗೊಳಗಾದ ಕುಟುಂಬದ ಭೇಟಿಗಾಗಿ ಟ್ರಾಲ್‌ಗೆ ಹೊರಟಿದ್ದ ನನ್ನನ್ನು ಮತ್ತೆ ಮನೆಯಲ್ಲಿ ಕೂಡಿಹಾಕಲಾಗಿದೆ. ಜಮ್ಮು ಮತ್ತು ಕಾಶ್ಮೀರಕ್ಕೆ ಭೇಟಿ ನೀಡುವ ಗಣ್ಯರಿಗೆ ಕೇಂದ್ರ ಸರ್ಕಾರ, ಸ್ಯಾನಿಟೈಸ್ ಮಾಡಿ ಶುಚಿಯಾಗಿಟ್ಟಿರುವ ಪಿಕ್ನಿಕ್ ತಾಣಗಳ ಬದಲಿಗೆ, ಇಂಥ ದೃಶ್ಯಗಳನ್ನು ತೋರಿಸಬೇಕು’ ಎಂದು ಮುಫ್ತಿ ಟ್ವೀಟ್ ಮಾಡಿದ್ದಾರೆ.
ಶ್ರೀನಗರದ ಗುಪ್ಕರ್ ರಸ್ತೆಯಲ್ಲಿರುವ ತಮ್ಮ ನಿವಾಸದ ಮುಖ್ಯದ್ವಾರದ ಎದುರು ಭದ್ರತಾ ಪಡೆಗಳ ವಾಹನಗಳನ್ನು ನಿಲ್ಲಿಸಿ ಬಂದ್ ಮಾಡಿರುವ ಚಿತ್ರವನ್ನು ಮುಫ್ತಿ ಅವರು ಟ್ವೀಟ್ ಜೊತೆ ಪೋಸ್ಟ್ ಮಾಡಿದ್ದಾರೆ.