ಮಕ್ಕಳಿಗೆ ಲಸಿಕೆ ನೀಡುವ ಅಭಿಯಾನ.!
ದೇಶದಲ್ಲಿ ಜನವರಿ 3 ರಿಂದ 15-17ವರ್ಷದವರಿಗೂ ಕೊವಿಡ್ 19 ಲಸಿಕೆ ನೀಡಲಾಗುತ್ತಿದೆ. ಈ ಮೂಲಕ ಕೊರೊನಾ ಲಸಿಕೆ ಅಭಿಯಾನವನ್ನು(Covid 19 Vaccination Drive) ಇನ್ನೊಂದು ಹಂತಕ್ಕೆ ವಿಸ್ತರಿಸಲಾಗಿದೆ. ಹಾಗೇ, ಹೊಸ ಹಂತದ ಕೊರೊನಾ ಲಸಿಕೆ ಅಭಿಯಾನ ಶುರುವಾದ ಒಂದು ವಾರದ ಒಳಗೆ, 15-17ವರ್ಷದವರು 2 ಕೋಟಿಗೂ ಅಧಿಕ ಫಲಾನುಭವಿಗಳು ಲಸಿಕೆ ಪಡೆದಿದ್ದಾರೆ. ಈ ಬಗ್ಗೆ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ. ಮಕ್ಕಳ ವ್ಯಾಕ್ಸಿನೇಶನ್ ಅಭಿಯಾನ ವೇಗವಾಗಿ ಮುಂದುವರಿಯುತ್ತಿದೆ. ನನ್ನ ಕಿರಿಯ ಸ್ನೇಹಿತರೇ, ಅದ್ಭುತವಾಗಿ ಸಾಥ್ ಕೊಡುತ್ತಿದ್ದೀರಿ ಎಂದು ಶ್ಲಾಘಿಸಿದ್ದಾರೆ. ಅಷ್ಟೇ ಅಲ್ಲ, ಕೊವಿಡ್ 19 ಹೊಸ ಹಂತದ ಅಭಿಯಾನ ಶುರುವಾದ ವಾರದಲ್ಲಿ 2 ಕೋಟಿಗೂ ಅಧಿಕ ಮಕ್ಕಳು ಲಸಿಕೆ ಪಡೆದಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಕೊವಿನ್ ಆ್ಯಪ್ನಲ್ಲಿ ತೋರಿಸಲಾದ ಮಾಹಿತಿಯಂತೆ, ಜನವರಿ 1ರಿಂದ 7ರವರೆಗೆ, 15-17ವಯಸ್ಸಿನವರು ಒಟ್ಟು 20,226,790 ಮಂದಿ ಲಸಿಕೆ ಪಡೆದಿದ್ದಾರೆ. ದೇಶದಲ್ಲಿ ಶುಕ್ರವಾರ ಒಟ್ಟಾರೆ ಕೊರೊನಾ ಲಸಿಕೆ ಅಭಿಯಾನ 150 ಕೋಟಿ ಗಡಿದಾಟಿದೆ. ಅದನ್ನು ಪ್ರಧಾನಿ ನರೇಂದ್ರ ಮೋದಿ ಕೂಡ ಶ್ಲಾಘಿಸಿದ್ದರು. ನಿನ್ನೆ ಕೋಲ್ಕತ್ತದಲ್ಲಿ ಚಿತ್ತರಂಜನ್ ರಾಷ್ಟ್ರೀಯ ಕ್ಯಾನ್ಸರ್ ಇನ್ಸ್ಟಿಟ್ಯೂಟ್ ಉದ್ಘಾಟನೆ ಮಾಡಿ ಮಾತನಾಡಿದ ಪ್ರಧಾನಿ ಮೋದಿ, ಇಂದು ದೇಶ ಕೊರೊನಾ ಲಸಿಕೆ ಅಭಿಯಾನದಲ್ಲಿ ಐತಿಹಾಸಿಕ ಮೈಲುಗಲ್ಲು ಸ್ಥಾಪಿಸಿತು. ಈ ಹೊತ್ತಲ್ಲಿ ಕೊರೊನಾ ಲಸಿಕೆ ತಯಾರಕರು, ಕೇಂದ್ರ ಆರೋಗ್ಯ ಸಚಿವಾಲಯ, ವಿಜ್ಞಾನಿಗಳಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದ್ದರು.
ಭಾರತದಲ್ಲಿ ಕೊವಿಡ್ 19 ಲಸಿಕೆ ಅಭಿಯಾನ 2021ರ ಜನವರಿಯಿಂದ ಶುರುವಾಗಿದೆ. ಇನ್ನೂ ಒಂದು ವರ್ಷ ಪೂರ್ತಿಯಾಗುವುದರ ಒಳಗೇ ದೇಶದಲ್ಲಿ ಕೊರೊನಾ ಲಸಿಕೆ 150 ಕೋಟಿ ಡೋಸ್ ನೀಡಲಾಗಿದೆ. ಹಾಗೇ, ಡಿಸೆಂಬರ್ 26ರಂದು ದೇಶವನ್ನುದ್ದೇಶಿಸಿ ಮಾತನಾಡಿದ್ದ ಪ್ರಧಾನಿ ಮೋದಿ, ಜನವರಿ ಮೂರರಿಂದ 15-18ವರ್ಷದವರಿಗೆ ಕೊರೊನಾ ಲಸಿಕೆ ನೀಡಲಾಗುತ್ತದೆ ಮತ್ತು ಜನವರಿ 10ರಿಂದ ಕೊರೊನಾ ಹೋರಾಟದಲ್ಲಿ ಮುಂಚೂಣಿಯಲ್ಲಿರುವವರಿಗೆ ಮತ್ತು 60 ವರ್ಷ ಮೇಲ್ಪಟ್ಟು ಇತರ ಕಾಯಿಲೆಗಳಿಂದ ಬಳಲುತ್ತಿರುವವರಿಗೆ ಕೊರೊನಾ ಲಸಿಕೆ ಬೂಸ್ಟರ್ ಡೋಸ್ ನೀಡಲಾಗುವುದು ಎಂದು ಘೋಷಿಸಿದ್ದರು. ಅದರಂತೆ ಈಗ 15-18 ವರ್ಷದವರಿಗೆ ಕೊರೊನಾ ಲಸಿಕೆ ಅಭಿಯಾನ ಪ್ರಾರಂಭವಾಗಿದೆ.