ಇತ್ತೀಚಿನ ಸುದ್ದಿರಾಜ್ಯಸುದ್ದಿ

ಭ್ರಷ್ಟಾಚಾರ ನಿಗ್ರಹ ದಳದ ಎಲ್ಲ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆ

ಬೆಂಗಳೂರು: ಭ್ರಷ್ಟಾಚಾರ ಪ್ರಕರಣಗಳ ತನಿಖೆಗಾಗಿ ಲೋಕಾಯುಕ್ತಕ್ಕಿದ್ದ ಅಧಿಕಾರವನ್ನು ಮೊಟಕುಗೊಳಿಸಿ ರಾಜ್ಯ ಸರಕಾರವು 2016 ರಲ್ಲಿ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ರಚಿಸಿ ಹೊರಡಿಸಿದ್ದ ಆದೇಶವನ್ನು ರದ್ದುಪಡಿಸಿ ಹೈಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ.

ಷ್ಟಾಚಾರ ಪ್ರಕರಣಗಳ ಬಗ್ಗೆ ಸ್ವತಂತ್ರವಾಗಿ ಎಸಿಬಿ ತನಿಖೆ ನಡೆಸುವುದಕ್ಕೆ ನ್ಯಾಯಾಲಯ ಕಡಿವಾಣ ಹಾಕಿದ್ದು, ಲೋಕಾಯುಕ್ತ ಸಂಸ್ಥೆ ಅಡಿಯಲ್ಲಿಯೇ ಎಸಿಬಿ ಕಾರ್ಯನಿರ್ವಹಿಸಬೇಕೆಂದು ಆದೇಶದಲ್ಲಿ ತಿಳಿಸಿದೆ. ಪ್ರತಿಪಕ್ಷ ನಯಕ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ಲೊಕಾಯುಕ್ತಕ್ಕಿದ್ದ ಅಧಿಕಾರವನ್ನು ಕಿತ್ತುಕೊಂಡು ಹೊಸದಾಗಿ ಎಸಿಬಿ ರಚಿಸಿತ್ತು.

ಸಿದ್ದರಾಮಯ್ಯನವರ ಈ ನಡೆ ಬಹಳ ವಿವಾದಕ್ಕೂ ಕಾರಣವಾಗಿತ್ತು. ಎಸಿಬಿ ರಚನೆಯನ್ನು ಪ್ರಶ್ನಿಸಿ ಬೆಂಗಳೂರು ವಕೀಲರ ಸಂಘ, ಸಮಾಜ ಪರಿವರ್ತನ ಸಮುದಾಯ ಸೇರಿದಂತೆ ಹಲವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿ ತೀರ್ಪು ನೀಡಿರುವ ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಹಾಗು ನ್ಯಾಯಮೂರ್ತಿ ಹೇಮಲೇಖ ಅವರಿದ್ದ ವಿಭಾಗೀಯ ಪೀಠವು ಭ್ರಷ್ಟಾಚಾರ ನಿಗ್ರಹ ದಳದ ಸ್ಥಾಪನೆಯನ್ನು ಅಸಿಂಧುಗೊಳಿಸಿದೆ.

ಭ್ರಷ್ಟಾಚಾರ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗಾವಣೆ: ಭ್ರಷ್ಟಾಚಾರ ನಿಗ್ರಹ ದಳಕ್ಕೆ ರಾಜ್ಯ ಸರ್ಕಾರ ನೀಡಿದ್ದ ಪೊಲೀಸ್ ಠಾಣೆ ಸ್ಥಾನಮಾನವನ್ನೂ ಹೈಕೋರ್ಟ್ ರದ್ದುಪಡಿಸಿದೆ. ಎಸಿಬಿಯಲ್ಲಿದ್ದ ಎಲ್ಲಾ ಭ್ರಷ್ಟಾಚಾರ ಪ್ರಕರಣಗಳನ್ನು ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಬೆಕೆಂದು ಹೈಕೋರ್ಟ್ ತೀರ್ಪಿನಲ್ಲಿ ತಿಳಿಸಿದೆ. ನ್ಯಾಯಾಲಯದ ಈ ಆದೇಶದಿಂದ ಹಲ್ಲಿಲ್ಲದ ಹಾವಿನಂತಾಗಿದ್ದ ಲೋಕಾಯುಕ್ತಕ್ಕೆ ಒಂದಿಷ್ಟು ಶಕ್ತಿ ಬಂದಂತಾಗಿದೆ.

ರಾಜ್ಯ ಸರಕಾರವು 2016ರ ಮಾರ್ಚ್‌ 14ರಂದು ಎಸಿಬಿ ರಚಿಸಲು ಮಾಡಿರುವ ಕಾರ್ಯಾದೇಶವನ್ನು ಸರಿಯಾಗಿ ಸಮರ್ಥಿಸಿಲ್ಲ ಹಾಗೆಯೇ ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಅಪರಾಧ ದಾಖಲು ಮತ್ತು ತನಿಖೆಗೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ಇದ್ದ ಅಧಿಕಾರವನ್ನು ವಾಪಾಸು ಪಡೆದು 2016ರ ಮಾರ್ಚ್‌ 19ರಂದು ಹೊರಡಿಸಿದ್ದ ಅಧಿಸೂಚನೆಯನ್ನು ಸಮರ್ಥಿಸಿ ಕೊಳ್ಳುವಲ್ಲಿ ವಿಫಲವಾಗಿದೆ ಎಂದು ಆದೇಶದಲ್ಲಿ ತಿಳಿಸಿರುವ ಹೈಕೋರ್ಟ್ ಎಸಿಬಿ ರಚನೆಯ ಮತ್ತು ಲೋಕಾಯುಕ್ತಕ್ಕೆ ನೀಡಲಾಗಿದ್ದ ಅಧಿಕಾರ ಹಿಂತೆಗೆದುಕೊಂಡ ಅಧಿಸೂಚನೆಗಳನ್ನು ರದ್ದುಪಡಿಸಲಾಗಿದೆ ಎಂದು ತಿಳಿಸಿದೆ.

ಎಸಿಬಿ ಮುಂದೆ ಈಗಾಗಲೇ ಬಾಕಿ ಇರುವ ಭ್ರಷ್ಟಾಚಾರ ಪ್ರಕರಣಗಳ ತನಿಖೆ, ವಿಚಾರಣೆ, ಶಿಸ್ತುಕ್ರಮ ಪ್ರಕ್ರಿಯೆಗಳು ಲೋಕಾಯುಕ್ತಕ್ಕೆ ವರ್ಗಾವಣೆಯಾಗಲಿವೆ. ಎಸಿಬಿ ಮುಂದಿರುವ ಎಲ್ಲಾ ಪ್ರಕರಣಗಳು ಲೋಕಾಯುಕ್ತಕ್ಕೆ ವರ್ಗವಣೆಯಾಗಿರುವುದರಿಂದ ಆರೋಪಿಗಳು ಕಾನೂನಿನಿಂದ ತಪ್ಪಿಸಿಕೊಳ್ಳಲಾಗದು ಎಂದು ಹೈಕೋರ್ಟ್ ತೀರ್ಪಿನಲ್ಲಿ ಪ್ರಸ್ಥಾಪಿಸಿದೆ.

ಲೋಕಾಯುಕ್ತ ಕ್ಕೆ 1991ರ ಫೆಬ್ರವರಿ 6ರಂದು, 2002ರ ಫೆಬ್ರವರಿ 8, 2002ರ ಮೇ 8, 2002ರ ಡಿಸೆಂಬರ್‌ 5ರಂದು ಭ್ರಷ್ಟಾಚಾರ ನಿಯಂತ್ರಣ ಕಾಯಿದೆ ಅಡಿ ಲೋಕಾಯುಕ್ತ ಪೊಲೀಸರಿಗೆ ತನಿಖೆ ನಡೆಸುವ ಸಂಬಂಧ ಹೊರಡಿಸಿದ್ದ ಆದೇಶಗಳನ್ನು ಪುನರ್‌ ಸ್ಥಾಪಿಸಲಾಗಿದೆ” ಎಂದು ನ್ಯಾಯಾಲಯ ಆದೇಶದಲ್ಲಿ ಸ್ಪಷ್ಟಪಡಿಸಿದೆ.

ಲೋಕಾಯುಕ್ತಕ್ಕೆ ಪೊಲೀಸ್ ಠಾಣೆ ಸ್ಥಾನಮಾನವನ್ನು ನ್ಯಾಯಾಲಯ ಮರುಸ್ಥಾಪಿಸಿದ್ದು, ಎಸಿಬಿಯು ಲೋಕಾಯುಕ್ತ ಸಂಸ್ಥೆಯ ವ್ಯಾಪ್ತಿಯಲ್ಲಿಯೇ ಕಾರ್ಯನಿರ್ವಹಿಸಬೇಕು ಎಂದು ನಿರ್ದೇಶನ ನೀಡಿದೆ. ಲೋಕಾಯುಕ್ತರು ಮತ್ತು ಉಪ ಲೋಕಾಯುಕ್ತರನ್ನು ಅರ್ಹತೆ ಮೇಲೆ ನೇಮಕ ಮಾಡಬೇಕು ಜಾತಿ ಆಧರಿಸಿ ನೇಮಕಕ್ಕೆ ಪರಿಗಣಿಸಬಾರದೆಂದೂ ನ್ಯಾಯಾಲಯ ಆದೇಶದಲ್ಲಿ ಉಲ್ಲೇಖಿಸಿದೆ.

ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಕರ್ನಾಟಕ ಲೋಕಾಯುಕ್ತ ಕಾಯಿದೆಗೆ ಸೂಕ್ತ ತಿದ್ದುಪಡಿ ತರುವ ಅಗತ್ಯತೆ ಇದೆ. ಲೋಕಾಯುಕ್ತ ಕಾಯಿದೆ ಸೆಕ್ಷನ್‌ 12(4)ಕ್ಕೆ ತುರ್ತಾಗಿ ತಿದ್ದುಪಡಿ ಮಾಡಬೇಕಾಗಿದೆ. ಉತ್ತಮ ಹಿನ್ನೆಲೆ ಹೊಂದಿರುವ ಪೊಲೀಸ್‌ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸ್‌ ದಳಕ್ಕೆ ನೇಮಕ ಮಾಡುವ ಮೂಲಕ ಅದನ್ನು ಸದೃಢಗೊಳಿಸಬೇಕು.

ಭ್ರಷ್ಟಾಚಾರ ನಿಗ್ರಹ ದಳಕ್ಕೆ ನಿಯೋಜಿಸಿರುವ ಅಧಿಕಾರಿಗಳನ್ನು ಲೋಕಾಯುಕ್ತ ಪೊಲೀಸ್‌ ದಳಕ್ಕೆ ವರ್ಗಾಯಿಸಬೇಕು. ಎಸಿಬಿಯಲ್ಲಿ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಯು ಲೋಕಾಯುಕ್ತದ ಆಡಳಿತಕ್ಕೆ ಒಳಪಡಲಿದ್ದಾರೆ. ಲೋಕಾಯುಕ್ತ ಮತ್ತು ಉಪಲೋಕಾಯುಕ್ತರ ಅನುಮತಿ ಪಡೆಯದೇ ಕನಿಷ್ಠ ಮೂರು ವರ್ಷ ಸೇವಾವಧಿ ಪೂರ್ಣಗೊಳಿಸದ ಅಧಿಕಾರಿ ಅಥವಾ ಸಿಬ್ಬಂದಿಯನ್ನು ಲೋಕಾಯುಕ್ತದಿಂದ ವರ್ಗಾವಣೆ ಮಾಡಬಾರದು ಎಂದು ಹೈಕೋರ್ಟ್ ತಿಳಿಸಿದೆ.

Related Articles

Leave a Reply

Your email address will not be published. Required fields are marked *

Back to top button