ಕ್ರೈಂ

ಭ್ರಷ್ಟಾಚಾರ: ತಮಿಳುನಾಡಿನ ಮಾಜಿ ಸಚಿವೆ ಇಂದಿರಾ ಕುಮಾರಿ, ಪತಿಗೆ 5 ವರ್ಷ ಜೈಲು

ಚೆನ್ನೈ: ಸರ್ಕಾರದ ₹ 15 ಲಕ್ಷ ಹಣ ದುರುಪಯೋಗಪಡಿಸಿಕೊಂಡ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಹಿನ್ನೆಲೆಯಲ್ಲಿ ತಮಿಳುನಾಡಿನ ಮಾಜಿ ಸಚಿವೆ ಆರ್ ಇಂದಿರಾ ಕುಮಾರಿ ಮತ್ತು ಆಕೆಯ ಪತಿ ಎ ಬಾಬು ಅವರಿಗೆ ಇಲ್ಲಿನ ವಿಶೇಷ ನ್ಯಾಯಾಲಯವು 5 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.

ಐಪಿಸಿ ಸೆಕ್ಷನ್ ಮತ್ತು ಭ್ರಷ್ಟಾಚಾರ ತಡೆ ಕಾಯಿದೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ತಪ್ಪಿತಸ್ಥರೆಂದು ಸಾಬೀತಾದ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎನ್ ಅಲಿಸಿಯಾ ಶಿಕ್ಷೆ ವಿಧಿಸಿದ್ದಾರೆ.

ಇದೇ ಪ್ರಕರಣದಲ್ಲಿ ನಿವೃತ್ತ ಐಎಎಸ್ ಅಧಿಕಾರಿ ಪಿ ಷಣ್ಮುಗಂ ಅವರಿಗೂ ಮೂರು ವರ್ಷಗಳ ಜೈಲು ಶಿಕ್ಷೆ, ₹ 10,000 ದಂಡ ವಿಧಿಸಲಾಗಿದೆ.

1991-96ರ ದಿವಂಗತ, ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ನೇತೃತ್ವದ ಸಂಪುಟದಲ್ಲಿ ಇಂದಿರಾ ಕುಮಾರಿ ಸಮಾಜ ಕಲ್ಯಾಣ ಖಾತೆಯ ಸಚಿವೆಯಾಗಿದ್ದರು.

ಶಿಕ್ಷೆ ಘೋಷಣೆಯಾದ ಸಂದರ್ಭ ನ್ಯಾಯಾಲಯದಲ್ಲಿ ಹಾಜರಿದ್ದ ಇಂದಿರಾ ಕುಮಾರಿ, ಉಸಿರಾಟದ ತೊಂದರೆ ಬಗ್ಗೆ ಹೇಳಿದ್ದು, ಕೂಡಲೇ ಅವರನ್ನು ಇಲ್ಲಿನ ರಾಯಪೇಟೆ ಆಸ್ಪತ್ರೆಗೆ ದಾಖಲಿಸಲಾಗಿದೆ.

ಪ್ರಕರಣದ ಮತ್ತೊಬ್ಬ ಆರೋಪಿ, ಐಎಎಸ್ ಅಧಿಕಾರಿ ಕಿರುಬಾಕರನ್ ವಿಚಾರಣೆ ಹಂತದಲ್ಲೇ ಮರಣ ಹೊಂದಿದ್ದರು.

ಪ್ರಾಸಿಕ್ಯೂಷನ್ ಪ್ರಕಾರ, ಶ್ರವಣದೋಷವುಳ್ಳ ಮಕ್ಕಳಿಗಾಗಿ ವಿಶೇಷ ಶಾಲೆಯನ್ನು ನಡೆಸುತ್ತಿರುವ ಮರ್ಸಿ ಮದರ್ ಇಂಡಿಯಾ ಚಾರಿಟಬಲ್ ಟ್ರಸ್ಟ್ ಮತ್ತು ಭರಣಿ ಸ್ವಾತಿ ಎಜುಕೇಶನಲ್ ಟ್ರಸ್ಟ್ ಎಂಬ ಎರಡು ಸಂಸ್ಥೆಗಳಿಗೆ ಸರ್ಕಾರದಿಂದ ಮಂಜೂರಾಗಿದ್ದ ₹15.45 ಹಣವನ್ನು ದುರುಪಯೋಗಪಡಿಸಿಕೊಂಡ ಆರೋಪ ಇವರ ಮೇಲಿತ್ತು.

Related Articles

Leave a Reply

Your email address will not be published. Required fields are marked *

Back to top button