ಇತ್ತೀಚಿನ ಸುದ್ದಿ

ಭಾರಿ ಮಳೆ – ನಾಳೆ ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ

ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ ಪ್ರಾಥಮಿಕ, ಪ್ರೌಢಶಾಲೆ, ಪದವಿ ಪೂರ್ವ ಕಾಲೇಜು, ಪದವಿ ಶಿಕ್ಷಣ, ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾಸಂಸ್ಥೆಗಳಿಗೆ (ಜುಲೈ 25) ರಜೆ ಘೋಷಿಸಲಾಗಿದೆ. ನೀರು ಇರುವ ತಗ್ಗು ಪ್ರದೇಶ, ನದಿ ತೀರ ಸಮುದ್ರ ತೀರಕ್ಕೆ ಮಕ್ಕಳು ಹೋಗದಂತೆ ಪಾಲಕರು ಜಾಗ್ರತೆ ವಹಿಸುವುದು ಹಾಗೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಈ ಮೂಲಕ ಸೂಚನೆ ನೀಡಲಾಗಿದೆ.

ಜಿಲ್ಲಾ ಮಟ್ಟದ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು, ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿರತಕ್ಕದ್ದು ಹಾಗೂ ವಿಪತ್ತು ನಿರ್ವಹಣೆಯನ್ನು ಚಾಚು ತಪ್ಪದೇ ಕಡ್ಡಾಯವಾಗಿ ನಿರ್ವಹಿಸುವುದು. ಜಿಲ್ಲಾಡಳಿತದಿಂದ ವಿವಿಧ ಪ್ರದೇಶಗಳಿಗೆ ನೇಮಿಸಲಾಗಿರುವ ನೋಡಲ್ ಅಧಿಕಾರಿಗಳು ಸದಾ ಜಾಗೃತರಾಗಿದ್ದು, ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದಿಸುವುದು ಮತ್ತು ಜಿಲ್ಲಾಧಿಕಾರಿ ಕಚೇರಿಯ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರುವುದು. ಪ್ರವಾಸಿಗರು ನದಿ ತೀರಕ್ಕೆ, ಸಮುದ್ರ ತೀರಕ್ಕೆ ತೆರಳದಂತೆ ಸೂಚಿಸಲಾಗಿದೆ. ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಪ್ರತೀ ತಾಲೂಕುಗಳಲ್ಲಿ ಕಾಳಜಿ ಕೇಂದ್ರವನ್ನು ತೆರೆದು ಸನ್ನದ್ಧ ಸ್ಥಿತಿಯಲ್ಲಿರಿಸಿಕೊಳ್ಳುವುದು. ಯಾವುದೇ ಸಮಸ್ಯೆಗಳಿಗೆ 1077 / 0824-2412591 ದೂರವಾಣಿಯನ್ನು ಸಂಪರ್ಕಿಸುವಂತೆ ಸೂಚಿಸಲಾಗಿದೆ.

ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರಿ ಮಳೆ: ಪಶ್ಚಿಮ ಘಟ್ಟದಲ್ಲಿ ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆಯ ಜೀವನದಿ ನೇತ್ರಾವತಿ ತುಂಬಿಕೊಂಡಿದ್ದು, ಬಂಟ್ವಾಳ ತಾಲೂಕಿನಲ್ಲಿ ನದಿಯಿಂದಾಗಿ ಹಲವೆಡೆ ನೆರೆ ನೀರು ನುಗ್ಗಿದೆ. ನಂದಾವರ ಆಸುಪಾಸಿನಲ್ಲಿ ಮನೆಗಳಿಗೆ ನೆರೆ ನೀರು ನುಗ್ಗಿದೆ. ಆಲಡ್ಕ ಪ್ರದೇಶದಲ್ಲಿ ಏಳು ಮನೆಗಳಿಗೆ ನೆರೆ ನೀರು ನುಗ್ಗಿ, ನಿವಾಸಿಗಳನ್ನು ಸ್ಥಳಾಂತರ ಮಾಡಲಾಗಿದೆ.

ಫಲ್ಗುಣಿ ನದಿಯಲ್ಲಿ ಒಳ ಹರಿವು ಹೆಚ್ಚಿದ್ದು, ನದಿ ಪಾತ್ರದ ಜನ ವಸತಿ ಪ್ರದೇಶಕ್ಕೆ‌ ನದಿ ನೀರು ನುಗ್ಗಿದೆ. ಅದ್ಯಪಾಡಿಯ ಮುಗೇರ ಕುದ್ರು ಗ್ರಾಮ ಸಂಪೂರ್ಣ‌ ಜಲಾವೃತವಾಗಿದ್ದು, ಮುಗೇರ ಕುದ್ರು ಸಂಪರ್ಕಿಸುವ ರಸ್ತೆ ಮುಳುಗಡೆಯಾಗಿದೆ. ಮುಗೇರ ಕುದ್ರು ಗ್ರಾಮದಲ್ಲಿ ನೆರೆ‌ ನೀರು ಆವರಿಸಿದ್ದು, 30 ಕುಟುಂಬಗಳು ಸಂಕಷ್ಟದಲ್ಲಿದೆ. ಮುಗೇರ‌ ಕುದ್ರು ಗ್ರಾಮ ದ್ವೀಪದಂತಾಗಿದ್ದು, ಗ್ರಾಮದಲ್ಲಿ ಜನರು ದೋಣಿಯಲ್ಲೇ ಸಂಚರಿಸುತ್ತಿದ್ದಾರೆ.

ಸುಳ್ಯ ತಾಲೂಕಿನ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ: ಸುಳ್ಯ ತಾಲೂಕಿನ ಹರಿಹರ ಪಲ್ಲತಡ್ಕದ ಬಳಿಯ ಗುಂಡಡ್ಕ ಸೇತುವೆ ಮುಳುಗಡೆ ಹಾಗೂ ರಸ್ತೆಗೆ ಬಂಡೆ ಬಿದ್ದು, ಜರೆ ಜರಿದು ರಸ್ತೆ ಸಂಚಾರವು ಸ್ಥಗಿತಗೊಂಡಿದೆ. ಧಾರಾಕಾರ ಮಳೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಕಡಬ ಮತ್ತು ಸುಳ್ಯ ತಾಲೂಕಿನ ಎಲ್ಲ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.

ಇಲ್ಲಿನ ದೇವರ ಗದ್ದೆ ಎಂಬಲ್ಲಿ ರಸ್ತೆಗೆ ಮಣ್ಣು ಕುಸಿದಿದೆ. ದೇವರಗದ್ದೆ ಎಂಬಲ್ಲಿ ಬಂಡೆ ಬಿದ್ದಿದ್ದು, ವಿದ್ಯುತ್ ಕಂಬಗಳು ಮುರಿದು ಬಿದ್ದ ಘಟನೆ ಇಂದು ಸಂಜೆ ವರದಿಯಾಗಿದೆ. ಕಳೆದೆರಡು ದಿನಗಳಿಂದ ಕಡಬ, ಸುಳ್ಯ ತಾಲೂಕಿನ ಹಲವು ಭಾಗದಲ್ಲಿ ಭೀಕರ ಮಳೆಯಾಗುತ್ತಿದ್ದು, ಗುಂಡಡ್ಕ ಸೇತುವೆ ಬಹುತೇಕ ಕಾಲ ಮುಳುಗಿತ್ತು. ಇಂದು ಸಂಜೆ ಮತ್ತೆ ನೀರಿನ ಮಟ್ಟ ಏರಿದೆ. ಈ ಎಲ್ಲ ಘಟನೆಗಳಿಂದ ಹರಿಹರ ಪಲ್ಲತಡ್ಕ – ಐನೆಕಿದು – ಮಲೆಯಾಳ ರಸ್ತೆ ಸಂಚಾರವು ಸ್ಥಗಿತವಾಗಿದೆ.

ಕುಮಾರಾಧಾರಾ ನದಿ ಸೇರಿದಂತೆ ಜಿಲ್ಲೆಯ ಬಹುತೇಕ ಎಲ್ಲಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ. ನಾಳೆಯ ಮಳೆಯ ಮುನ್ನೆಚ್ಚರಿಕೆ ಕ್ರಮವಾಗಿ ಸುಳ್ಯ ಮತ್ತು ಕಡಬ ತಾಲೂಕುಗಳ ತಹಶೀಲ್ದಾರ್​​ ಆಯಾ ತಾಲೂಕುಗಳ ಎಲ್ಲಾ ಅಂಗನವಾಡಿ, ಪ್ರೌಢಶಾಲೆ, ಕಾಲೇಜುಗಳಿಗೆ ರಜೆ ಘೋಷಣೆ ಮಾಡಿ ಆದೇಶ ನೀಡಿದ್ದಾರೆ.

ಕೊಡಗು ಜಿಲ್ಲೆಯಲ್ಲೂ ಶಾಲೆಗೆ ರಜೆ: ವ್ಯಾಪಕ ಮಳೆ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಕೊಡಗು ಜಿಲ್ಲೆಯಲ್ಲೂ ಕೂಡ (ಜುಲೈ 25) ಶಾಲೆ, ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಧಿಕಾರಿ ವೆಂಕಟ್ ರಾಜ್ ಆದೇಶ ಹೊರಡಿಸಿದ್ದಾರೆ. ಪರೀಕ್ಷೆ ಹಿನ್ನೆಲೆ ಪದವಿ ಹಾಗೂ ಸ್ನಾತಕೋತ್ತರ ಪದವಿ ಕಾಲೇಜುಗಳನ್ನು ಹೊರತುಪಡಿಸಿ ಅಂಗನವಾಡಿ, ಶಾಲೆ, ಪಿಯು ಕಾಲೇಜುಗಳಿಗೆ ಘೋಷಣೆ ಮಾಡಲಾಗಿದೆ. ಸಂಪಾಜೆ ವ್ಯಾಪ್ತಿಯಲ್ಲಿ ಧಾರಾಕಾರ ಮಳೆ ಸುರಿಯುತ್ತಿದ್ದು, ಕೊಯನಾಡು ಸಮೀಪದ ಕಿಂಡಿ ಅಣೆಕಟ್ಟಿನ ಸೇತುವೆ ಬಳಿ ನೀರಿನ ಹರಿವು ಹೆಚ್ಚಾಗಿದೆ. ಕಿಂಡಿ ಅಣೆಕಟ್ಟಿನಲ್ಲಿ‌ ಮಳೆಯ ನೀರು ಸರಾಗವಾಗಿ‌ ಹರಿಯುತ್ತಿದೆ.

Related Articles

Leave a Reply

Your email address will not be published. Required fields are marked *

Back to top button