
ನವದೆಹಲಿ, ಮೇ 7: ಮಂಗಳವಾರ ಮಧ್ಯರಾತ್ರಿ 1 ಗಂಟೆಯ ವೇಳೆ ಪಾಕಿಸ್ತಾನದೊಳಗೆ ನುಗ್ಗಿದ ಭಾರತ ‘ಆಪರೇಷನ್ ಸಿಂಧೂರ’ದ (Operation Sindoor) ಮೂಲಕ ಪಾಕಿಸ್ತಾನದಲ್ಲಿದ್ದ 9 ಉಗ್ರರ ನೆಲೆಗಳ ಮೇಲೆ ದಾಳಿ ನಡೆಸಿ, ಸಂಪೂರ್ಣ ಧ್ವಂಸ ಮಾಡಿದೆ. ಅರ್ಧ ಗಂಟೆ ನಡೆದ ಈ ದಾಳಿಯ ಬಳಿಕ ಭಾರತದ ಯುದ್ಧವಿಮಾನಗಳು ಸುರಕ್ಷಿತವಾಗಿ ಭಾರತದ ಗಡಿಯೊಳಗೆ ಬಂದಿವೆ. ಈ ದಾಳಿಯಿಂದ ಪಾಕಿಸ್ತಾನ (Pakistan) ತತ್ತರಿಸಿಹೋಗಿದೆ. ಪಾಕಿಸ್ತಾನದ ಮೇಲೆ ನಡೆದ ದಾಳಿಯ ಬಗ್ಗೆ ಮಾಹಿತಿ ನೀಡಲು ರಕ್ಷಣಾ ಸಚಿವರು ಅಥವಾ ವಾಯುಪಡೆ ಮತ್ತು ಸೇನಾಪಡೆಯ ಮುಖ್ಯಸ್ಥರು ಸುದ್ದಿಗೋಷ್ಠಿ ನಡೆಸುತ್ತಾರೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಆ ಜಾಗದಲ್ಲಿ ಇಬ್ಬರು ಮಹಿಳಾ ಅಧಿಕಾರಿಗಳು ಕುಳಿತು ಆಪರೇಷನ್ ಸಿಂಧೂರದ ಬಗ್ಗೆ ಇಂಚಿಂಚು ಮಾಹಿತಿ ಹಂಚಿಕೊಂಡಿದ್ದಾರೆ. ಹಾಗಾದರೆ, ಸುದ್ದಿಗೋಷ್ಠಿ ನಡೆಸಲು ಸೇನಾ ಪಡೆಯ ಕರ್ನಲ್ ಸೋಫಿಯಾ ಖುರೇಷಿ (Sofiya Qureshi) ಮತ್ತು ವಾಯುಪಡೆಯ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ (Vyomika Singh) ಅವರನ್ನು ಕೇಂದ್ರ ಸರ್ಕಾರ ಆಯ್ಕೆ ಮಾಡಿದ್ದು ಏಕೆ? ಮೋದಿಯ ಈ ನಿರ್ಧಾರದ ಹಿಂದೆಯೂ ಹಲವು ಸೂಕ್ಷ್ಮ ವಿಷಯಗಳಿವೆ ಎಂಬುದು ನಿಮಗೆ ಗೊತ್ತಾ?
ಪಾಕಿಸ್ತಾನದ ಮೇಲೆ ವಾಯುದಾಳಿ ನಡೆಸಿದ ಭಾರತ ಲಷ್ಕರ್-ಎ-ತೈಬಾ, ಜೈಶ್-ಎ-ಮೊಹಮ್ಮದ್ ಮತ್ತು ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಗುಂಪುಗಳ ಪ್ರಮುಖ ಶಿಬಿರಗಳನ್ನು ನಾಶಪಡಿಸಿದೆ. ಪಹಲ್ಗಾಮ್ ದಾಳಿಯ ವೇಳೆ “ನನ್ನನ್ನೂ ಕೊಂದುಬಿಡು” ಎಂದು ಹೇಳಿದ್ದ ಮೃತ ವ್ಯಕ್ತಿಯ ಪತ್ನಿಯ ಬಳಿ “ಹೋಗಿ ಮೋದಿಗೆ ಹೇಳು” ಎಂದಿದ್ದ ಉಗ್ರರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ತಕ್ಕ ತಿರುಗೇಟು ನೀಡಿದೆ. ಈ ಕಾರ್ಯಾಚರಣೆಗೆ “ಆಪರೇಷನ್ ಸಿಂಧೂರ” ಎಂದು ಹೆಸರಿಡುವ ಮೂಲಕ ಪಹಲ್ಗಾಮ್ ದಾಳಿಯಲ್ಲಿ ಮೃತರಾದ ಹಿಂದೂಗಳ ಪತ್ನಿಯರ ಪರವಾಗಿ ಸರ್ಕಾರ ಸೇಡು ತೀರಿಸಿಕೊಂಡಿದೆ. “ನಿಮ್ಮ ಕಣ್ಣೀರಿಗೆ ಕಾರಣರಾದವರನ್ನು ನಾವು ಬಿಡುವುದಿಲ್ಲ, ಅವರು ಎಲ್ಲೇ ಅಡಗಿದ್ದರೂ ಹುಡುಕಿ ಹುಡುಕಿ ಕೊಲ್ಲುತ್ತೇವೆ” ಎಂದು ಮೃತರ ಕುಟುಂಬಸ್ಥರಿಗೆ ಕೇಂದ್ರ ಸರ್ಕಾರ ಭರವಸೆ ನೀಡಿತ್ತು. ಅದರ ಮೊದಲ ಹಂತವಾಗಿ ಪಾಕಿಸ್ತಾನದ ಉಗ್ರರ ನೆಲೆಗಳ ಮೇಲೆ ಭಾರತ ದಾಳಿ ನಡೆಸಿದೆ.
ಇದೆಲ್ಲ ಒಂದೆಡೆಯಾದರೆ, ಇಂದು “ಆಪರೇಷನ್ ಸಿಂಧೂರ”ದ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಬೇಕಿದ್ದ ಸೇನಾ ಮುಖ್ಯಸ್ಥರ ಬದಲಾಗಿ ವಾಯುಪಡೆಯಿಂದ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಮತ್ತು ಭಾರತೀಯ ಸೇನೆಯ ಕರ್ನಲ್ ಸೋಫಿಯಾ ಖುರೇಷಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ. ಇದು ಬಹಳ ಮಹತ್ವದ ನಿರ್ಧಾರವಾಗಿದೆ. ಭಾರತದ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿ ಮಹಿಳಾ ಅಧಿಕಾರಿಗಳು ಬೇರೆ ದೇಶದ ಮೇಲಿನ ದಾಳಿಯ ಬಗ್ಗೆ ದೇಶದ ಜನತೆಗೆ ಮಾಹಿತಿ ನೀಡಿದ್ದಾರೆ. ಈ ನಿರ್ಧಾರ ಕೂಡ ನರೇಂದ್ರ ಮೋದಿಯವರದ್ದೇ ಎನ್ನಲಾಗಿದೆ. “ನಾರಿಶಕ್ತಿ” ಬಗ್ಗೆ ಮಾತನಾಡುವ ಪ್ರಧಾನಿ ನರೇಂದ್ರ ಮೋದಿ ಭಾರತದ ಹಿಂದೂ ಮಹಿಳೆಯರ ಕುಂಕುಮ ಅಳಿಸಿದ ಉಗ್ರರಿಗೆ ತಕ್ಕ ಉತ್ತರ ನೀಡಲು “ಆಪರೇಷನ್ ಸಿಂಧೂರ” ಎಂಬ ಹೆಸರಿನಲ್ಲೇ ಪಾಕಿಸ್ತಾನದ ಮೇಲೆ ದಾಳಿ ನಡೆಸಿದ್ದಾರೆ. ಹಾಗೇ, ಪಹಲ್ಗಾಮ್ ದಾಳಿಯಲ್ಲಿ ಮೃತರಾದವರ ಪತ್ನಿಯರಲ್ಲಿ ಧೈರ್ಯ ಮತ್ತು ಆತ್ಮವಿಶ್ವಾಸ ಮೂಡಿಸಲು ಮಹಿಳಾ ಅಧಿಕಾರಿಗಳಿಂದಲೇ ಸುದ್ದಿಗೋಷ್ಠಿ ನಡೆಸಿದ್ದಾರೆ. ಹಾಗೇ, ನೀವು ಯಾರನ್ನು ಅಸಮರ್ಥರೆಂದು ಕಂಡು ಹೀನಾಯವಾಗಿ ನಡೆದುಕೊಂಡಿರೋ ಅದೇ ಮಹಿಳೆಯರು ನಿಮ್ಮ ವಿರುದ್ಧ ಯುದ್ಧ ಸಾರಿದ್ದಾರೆ ಎಂಬ ಸಂದೇಶವನ್ನು ಉಗ್ರರಿಗೆ ನೀಡಲಾಗಿದೆ. ಈ ಮೂಲಕ ಭಾರತದಲ್ಲಿ ಮಹಿಳೆಯರಿಗೆ ಇರುವ ಸ್ಥಾನವನ್ನು ಅವರು ಜಗತ್ತಿಗೆ ಸಾರಿದ್ದಾರೆ.
ಇನ್ನೂ ಮುಖ್ಯವಾಗಿ ನಾವು ಗಮನಿಸಬೇಕಾದ ಅಂಶವೆಂದರೆ, ಇಂದು ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿದ್ದ ಇಬ್ಬರು ಮಹಿಳೆಯರೂ ಬೇರೆ ಬೇರೆ ಧರ್ಮದವರು. ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆದ ಪಹಲ್ಗಾಮ್ ಹತ್ಯಾಕಾಂಡಕ್ಕೆ ಭಾರತ ಹೇಗೆ ಸೇಡು ತೀರಿಸಿಕೊಂಡಿತು ಎಂಬುದರ ಬಗ್ಗೆ ಮುಸ್ಲಿಂ ಮತ್ತು ಸಿಖ್ ಧರ್ಮದ ಮಹಿಳಾ ಅಧಿಕಾರಿಗಳಿಬ್ಬರು ದೇಶದ ಜನತೆಗೆ ಮತ್ತು ಜಗತ್ತಿಗೆ ಮಾಹಿತಿ ನೀಡಿದ್ದಾರೆ. ಹಾಗೇ, ಈ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಮ ಮಿಶ್ರಿ ಉಗ್ರರ ದಾಳಿಗೆ ತತ್ತರಿಸಿದ ಜಮ್ಮು ಮತ್ತು ಕಾಶ್ಮೀರದವರು ಎಂಬುದು ಕೂಡ ಬಹಳ ಮುಖ್ಯವಾದ ವಿಷಯ. ಈ ಮೂಲಕ ಭಾರತ ಎಲ್ಲ ಧರ್ಮ, ಜನಾಂಗ, ಲಿಂಗದವರನ್ನೂ ಒಟ್ಟಿಗೇ ಕೊಂಡೊಯ್ಯುತ್ತದೆ ಎಂಬ ಸಂದೇಶವನ್ನು ಭಾರತ ರವಾನಿಸಿದೆ.ಇನ್ನು, ಸೋಫಿಯಾ ಮತ್ತು ವ್ಯೋಮಿಕಾ ಇಂದು ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆಯ ಮಹಾಪೂರವೇ ಹರಿದುಬಂದಿದೆ. ಇದೇ ನಿಜವಾದ ನಾರಿಶಕ್ತಿ. ಸಮವಸ್ತ್ರದಲ್ಲಿ ಕುಳಿತು ಧೈರ್ಯದಿಂದ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡುತ್ತಿರುವ ಈ ಮಹಿಳೆಯರನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ. ಇದೇ ನಮ್ಮ ಭಾರತ ಎಂದು ಹಲವರು ಮೆಚ್ಚುಗೆ ಸೂಚಿಸಿದ್ದಾರೆ.
ನಜೀಮ್ ಕಸ್ಸಾರ್ ಎಂಬ ಎಕ್ಸ್ ಬಳಕೆದಾರರು ಮೋದಿಯ ಈ ನಿರ್ಧಾರದ ಬಗ್ಗೆ ವಿಮರ್ಶೆ ಮಾಡಿದ್ದು, “ಪಾಕಿಸ್ತಾನದ ಸೇನಾ ಮುಖ್ಯಸ್ಥ ಆಸಿಮ್ ಮುನೀರ್ ಹಿಂದೂಗಳು ಮತ್ತು ಮುಸ್ಲಿಮರು ಒಟ್ಟಿಗೇ ಬಾಳಲು ಸಾಧ್ಯವೇ ಇಲ್ಲ ಎಂದು ಹೇಳಿದ್ದರು. ಇದೀಗ ಕರ್ನಲ್ ಸೋಫಿಯಾ ಖುರೇಷಿ, ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಒಟ್ಟಾಗಿ ಪಾಕಿಸ್ತಾನಕ್ಕೆ ಮುಟ್ಟಿ ನೋಡಿಕೊಳ್ಳುವಂತೆ ಎಚ್ಚರಿಕೆ ನೀಡಿದ್ದಾರೆ. ಪಾಕಿಸ್ತಾನ ಭಯೋತ್ಪಾದನೆಗೆ ಬೆಂಬಲ ನೀಡುವುದನ್ನು ನಿಲ್ಲಿಸದಿದ್ದರೆ ಭಾರತ ಏನು ಬೇಕಾದರೂ ಮಾಡಲು ಸಿದ್ಧ ಎಂಬುದನ್ನು ತಿಳಿಸಿದ್ದಾರೆ. ಪಾಕಿಸ್ತಾನದ ಆಲೋಚನೆ ಸರಿಯಿಲ್ಲ ಎಂಬುದನ್ನು ಭಾರತ ಮತ್ತೊಮ್ಮೆ ಸಾಬೀತು ಮಾಡಿದೆ” ಎಂದು ಪೋಸ್ಟ್ ಮಾಡಿದ್ದಾರೆ.ಭಾರತೀಯ ಸೇನೆ, ನೌಕಾಪಡೆ ಮತ್ತು ವಾಯುಪಡೆಗಳನ್ನು ಒಳಗೊಂಡ ಈ ಬಹು-ಪಡೆ ಕಾರ್ಯಾಚರಣೆಯು ಪಾಕಿಸ್ತಾನ ಮತ್ತು ಪಾಕ್ ಆಕ್ರಮಿತ ಕಾಶ್ಮೀರದೊಳಗಿನ ಭಯೋತ್ಪಾದಕ ಶಿಬಿರಗಳನ್ನು ಗುರಿಯಾಗಿಸಿಕೊಂಡಿತು. ಬಹುರಾಷ್ಟ್ರೀಯ ಮಿಲಿಟರಿ ವ್ಯಾಯಾಮದಲ್ಲಿ ಭಾರತೀಯ ಸೇನಾ ತುಕಡಿಯನ್ನು ಮುನ್ನಡೆಸಿದ ಮೊದಲ ಮಹಿಳೆಯಾಗಿ ಈಗಾಗಲೇ ಹಾದಿಯನ್ನು ಮುರಿದ ಕರ್ನಲ್ ಸೋಫಿಯಾ ಖುರೇಷಿ ಮತ್ತು ವ್ಯಾಪಕ ಕಾರ್ಯಾಚರಣೆಯ ಅನುಭವ ಹೊಂದಿರುವ ಹೆಲಿಕಾಪ್ಟರ್ ಪೈಲಟ್ ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಭಾರತದ ಸಶಸ್ತ್ರ ಪಡೆಗಳ ಶಕ್ತಿ ಮತ್ತು ಸಾಮರ್ಥ್ಯವನ್ನು ಸಾಕಾರಗೊಳಿಸಿದರು. ಇವರಿಬ್ಬರೂ ಆಪರೇಷನ್ ಸಿಂಧೂರದಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ.