ಭಾರತದಲ್ಲಿ ಚೀನಾದ ವಸ್ತುಗಳ ಆಮದಿನಲ್ಲಿ ಶೇ.15.40ರಷ್ಟು ಇಳಿಕೆ
ಭಾರತದಲ್ಲಿ ಚೀನಾ ವಸ್ತುಗಳನ್ನು ಬಹಿಷ್ಕರಿಸುವಂತೆ ಕೂಗು ಆಗಾಗ ಕೇಳಿ ಬರುತ್ತಲೇ ಇರುತ್ತದೆ. ಚೀನಾದ ವಸ್ತುಗಳ ಬದಲಿಗೆ ಸ್ವದೇಶಿ ವಸ್ತುಗಳಿಗೆ ಆದ್ಯತೆ ನೀಡುವಂತೆ ಕರೆ ನೀಡಲಾಗುತ್ತಿದೆ. ಇದರ ಮಧ್ಯೆ ಚೀನಾದಿಂದ ಆಮದು ಆಗುತ್ತಿದ್ದ ವಸ್ತುಗಳ ಪ್ರಮಾಣದಲ್ಲಿ ಗಣನೀಯ ಇಳಿಕೆ ಕಂಡು ಬಂದಿದೆ.
ಕಳೆದ 2020-21ನೇ ಸಾಲಿನಲ್ಲಿ ಚೀನಾದಿಂದ ಆಮದು ಆಗುತ್ತಿದ್ದ ವಸ್ತುಗಳ ಪಾಲಿನಲ್ಲಿ ಶೇ.16.50ರಷ್ಟು ಇಳಿಕೆಯಾಗಿದೆ. ಅದೇ ರೀತಿ 2021-22ನೇ ಸಾಲಿನಲ್ಲಿ ಚೀನಾದಿಂದ ಆಮದು ಆಗುತ್ತಿದ್ದ ವಸ್ತುಗಳ ಪಾಲಿನಲ್ಲಿ ಶೇ.15.40ರಷ್ಟು ಇಳಿಮುಖವಾಗಿದೆ ಎಂದು ಗೊತ್ತಾಗಿದೆ.
ಚೀನಾದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವ ಪ್ರಮುಖ ವಸ್ತುಗಳನ್ನು ಟೆಲಿಕಾಂ ಮತ್ತು ವಿದ್ಯುತ್ನಂತಹ ಕ್ಷೇತ್ರಗಳ ಬೇಡಿಕೆಯನ್ನು ಪೂರೈಸಲು ಬಳಸಲಾಗುತ್ತದೆ ಎಂದು ಹೇಳಲಾಗುತ್ತಿದೆ.
ಕೆಲವು ಉದಾಹರಣೆ ನೀಡುವುದಾದರೆ, ಆಕ್ಟಿವ್ ಫಾರ್ಮಾಸ್ಯುಟಿಕಲ್ ಇನ್ಗ್ರೆಡಿಯಂಟ್ಸ್ (API ಗಳು) ಮತ್ತು ಔಷಧ ಸೂತ್ರೀಕರಣಗಳಂತಹ ಆಮದುಗಳು ಸಿದ್ಧಪಡಿಸಿದ ಸರಕುಗಳನ್ನು ಉತ್ಪಾದಿಸಲು ಭಾರತೀಯ ಫಾರ್ಮಾ ಉದ್ಯಮದ ಕಚ್ಚಾ ವಸ್ತುವನ್ನು ಒದಗಿಸುತ್ತವೆ.
ಕೋವಿಡ್-19 ವೇಳೆಯಲ್ಲಿ ಡಿಮ್ಯಾಂಡಪ್ಪೋ ಡಿಮ್ಯಾಂಡ್
ಕೋವಿಡ್-19 ಸಾಂಕ್ರಾಮಿಕ ಪಿಡುಗಿನ ಸಂದರ್ಭದಲ್ಲಿ ಮಾಹಿತಿ ಮತ್ತು ಸಂವಹನ ತಂತ್ರಜ್ಞಾನ ಉತ್ಪನ್ನಗಳು ಮತ್ತು ವೈದ್ಯಕೀಯ ಮತ್ತು ವೈಜ್ಞಾನಿಕ ಉಪಕರಣಗಳ ಆಮದುಗಳ ಹೆಚ್ಚಳಕ್ಕೆ ಕಾರಣವಾಯಿತು. ಅಲ್ಲಿಂದ ಮುಂದೆ ಈ ಉತ್ಪನ್ನಗಳ ಬೇಡಿಕೆಯು ಹೆಚ್ಚಾಗುವುದಕ್ಕೆ ಶುರುವಾಯಿತು. ‘ಇದಲ್ಲದೆ, ಜಾಗತಿಕವಾಗಿ ಹೆಚ್ಚುತ್ತಿರುವ ಸರಕುಗಳ ಬೆಲೆಯು ಆಮದು ಮೌಲ್ಯವನ್ನು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿದೆ,’ ಎಂದು ತಿಳಿದು ಬಂದಿದೆ.
ಚೀನಾಗೆ ಭಾರತದಿಂದ ಹೆಚ್ಚಿನ ಪ್ರಮಾಣದಲ್ಲಿ ಸರಕುಗಳನ್ನು ರಫ್ತು ಮಾಡಲಾಗುತ್ತಿದೆ. ಭಾರತದ ರಫ್ತು ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. ಕಳೆದ 2020-21ನೇ ಸಾಲಿನಲ್ಲಿ ಭಾರತದಿಂದ ಚೀನಾಗೆ ಆಗುತ್ತಿದ್ದ ರಫ್ತು ಪ್ರಮಾಣವು ಶೇ.21.18 ಶತಕೋಟಿ ಡಾಲರ್ ನಿಂದ 21.25 ಶತಕೋಟಿ ಡಾಲರ್ ಗೆ ಏರಿಕೆಯಾಗಿದೆ. ಅದೇ ರೀತಿ ಚೀನಾದಿಂದ ಆಮದು ಆಗುತ್ತಿದ್ದ ವಸ್ತುಗಳ ಪ್ರಮಾಣವು 2020-21ನೇ ಸಾಲಿನಲ್ಲಿ 94.16 ಶತಕೋಟಿ ಡಾಲರ್ ನಿಂದ 65.21 ಶತಕೋಟಿ ಡಾಲರ್ ಗೆ ಇಳಿಕೆಯಾಗಿದೆ.
ಚೀನಾಗೆ ರಫ್ತು ಆಗುವ ಸರಕುಗಳ ಪ್ರಮಾಣ ಏರಿಕೆ
ಚೀನಾದಿಂದ ಭಾರತಕ್ಕೆ ಆಮದು ಮಾಡಿಕೊಳ್ಳುವುದರ ಪ್ರಮಾಣ ಒಂದು ಕಡೆ ಇಳಿಮುಖವಾದರೆ, ಇನ್ನೊಂದು ಕಡೆಯಿಂದ ಚೀನಾಗೆ ಭಾರತದಿಂದ ರಫ್ತು ಆಗುತ್ತಿದ್ದ ಸರಕುಗಳ ಪ್ರಮಾಣದಲ್ಲಿ ಗಣನೀಯ ಏರಿಕೆ ಕಂಡು ಬಂದಿದೆ. 2021-22ನೇ ಸಾಲಿನಲ್ಲಿ ಚೀನಾಗೆ ಅತಿಹೆಚ್ಚು ಸರಕುಗಳನ್ನು ರಫ್ತು ಮಾಡುವ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತವು ಮೂರನೇ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಯುಎಸ್ ಮೊದಲ ಸ್ಥಾನದಲ್ಲಿದ್ದರೆ, ಯುಎಇ ಎರಡನೇ ಸ್ಥಾನದಲ್ಲಿದೆ. ಕಳೆದ 2014-15ನೇ ಸಾಲಿನಲ್ಲಿ ಭಾರತದಿಂದ ಚೀನಾಗೆ ಆಗುತ್ತಿದ್ದ ರಫ್ತು ಪ್ರಮಾಣ 11.90 ಶತಕೋಟಿ ಡಾಲರ್ ಆಗಿದ್ದು, ಅದು 2021-22ನೇ ಸಾಲಿನಲ್ಲಿ 21.2 ಶತಕೋಟಿ ಡಾಲರ್ ಆಗಿದೆ.
ಚೀನಾದ ಮೊಬೈಲ್ ಫೋನ್ಗಳ ಬೇಡಿಕೆಯಲ್ಲಿ ಇಳಿಮುಖ
ಭಾರತದಲ್ಲಿ ಸಾಧ್ಯವಾದಷ್ಟು ಚೀನಾದ ಮೊಬೈಲ್ ಫೋನ್ಗಳ ಬಳಕೆಯನ್ನು ಬಿಡುವಂತೆ ಅಭಿಯಾನವನ್ನು ನಡೆಸಲಾಗುತ್ತಿತ್ತು. ಅದು ಕೊಂಚ ಮಟ್ಟಿಗೆ ಕೆಲಸ ಮಾಡಿದಂತೆ ಕಾಣುತ್ತಿದೆ. ದೇಶದಲ್ಲಿ ಚೀನಾದ ಮೊಬೈಲ್ ಫೋನ್ಗಳಿಗೆ ಡಿಮ್ಯಾಂಡ್ ತಗ್ಗಿದೆ. ಆದ್ದರಿಂದ ಚೀನಾದಿಂದ ಆಮದು ಆಗುತ್ತಿದ್ದ ವಸ್ತುಗಳ ಪ್ರಮಾಣದಲ್ಲಿ ಇಳಿಕೆಯಾಗಿದೆ. 2020-21ನೇ ಸಾಲಿನಲ್ಲಿ 1.4 ಶತಕೋಟಿ ಡಾಲರ್ ಆಗಿದ್ದ ಮೊಬೈಲ್ ಆಮದು ಪ್ರಮಾಣವು 2021-2022ನೇ ಸಾಲಿನಲ್ಲಿ 626 ದಶಲಕ್ಷ ಡಾಲರ್ ಆಗಿದೆ. ಅಂದರೆ ಶೇ.55ರಷ್ಟು ಆಮದು ಪ್ರಮಾಣವು ಇಳಿಕೆಯಾಗಿದೆ.
‘ಆಮದು ಮಾಡಿಕೊಂಡ ಉತ್ಪನ್ನಗಳ ಗುಣಮಟ್ಟದ ನಿರ್ವಹಣೆಗಾಗಿ ಹಲವಾರು ಉತ್ಪನ್ನಗಳಿಗೆ ತಾಂತ್ರಿಕ ನಿಯಮಾವಳಿಗಳನ್ನು ರೂಪಿಸಲಾಗಿದೆ. ಇದು ಚೀನಾ ಸೇರಿದಂತೆ ಯಾವುದೇ ದೇಶದಿಂದ ಸಬ್-ಸ್ಟಾಂಡರ್ಡ್ ಉತ್ಪನ್ನಗಳ ಆಮದನ್ನು ಪರಿಶೀಲಿಸುತ್ತದೆ,’ ಎಂದು ತಿಳಿದು ಬಂದಿದೆ.