ಬ್ರಿಟನ್ ರಾಣಿ ಎಲಿಜಬೆತ್ ತಲೆ ಬೋಳಾಗಿತ್ತು…?
ಕಳೆದ 95 ವರ್ಷಗಳಿಂದ ಬ್ರಿಟನ್ ಮಹಾರಾಣಿಯಾಗಿ ಮೆರೆಯುತ್ತಿರುವವರು ಕ್ವೀನ್ ಎಲಿಜಬೆತ್-2 ಅವರು. ಅವರು ಬ್ರಿಟನ್ ಜನರ ರಾಜಮಾತೆ, ಆರಾಧ್ಯ ದೇವತೆ ಕೂಡ. ಸರಕಾರಕ್ಕಿಂತ ಹೆಚ್ಚು ಗೌರವವನ್ನು ಬ್ರಿಟನ್ ಪ್ರಜೆಗಳು ರಾಣಿಗೆ ಕೊಡುತ್ತಾರೆ. ಅಂತಹ ರಾಣಿಯನ್ನು ಜರ್ಮನಿಯ ವಸ್ತು ಸಂಗ್ರಹಾಲಯವೊಂದು ಕೆಟ್ಟದಾಗಿ ಬಿಂಬಿಸಿರುವುದು ವಿಶ್ವಾದ್ಯಂತ ದೊಡ್ಡ ಸುದ್ದಿಯಾಗಿದೆ.
ಆಗಿದ್ದು ಇಷ್ಟೇ, ಜರ್ಮನಿಯ ಹ್ಯಾಮ್‌ಬರ್ಗ್ ನಲ್ಲಿ ಪೆನೊಪ್ಟಿಕಮ್ ಎಂಬ ವಸ್ತು ಸಂಗ್ರಹಾಲಯವಿದೆ. ಇದು ಗಣ್ಯ ವ್ಯಕ್ತಿಗಳ ಮೇಣದ ಪ್ರತಿಮೆಗೆ ಜನಪ್ರಿಯ. ಇತ್ತೀಚೆಗೆ ಮ್ಯೂಸಿಯಂನ ಸ್ವಚ್ಛತೆ ಕಾರ್ಯ ಹಾಗೂ ಸಣ್ಣಪುಟ್ಟ ರಿಪೇರಿ ಕಾರ್ಯ ನಡೆದಿತ್ತು. ಈ ವೇಳೆ ಮೇಣದ ಪ್ರತಿಮೆಗಳನ್ನು ಶುದ್ಧಗೊಳಿಸುವುದು ಕೂಡ ಸಾಗಿತ್ತು. ಆ ವೇಳೆ ಪಿಂಕ್ ಟೋಪಿ ಧರಿಸಿರುವ ರಾಣಿ ಎಲಿಜಬೆತ್ ಅವರ ಪ್ರತಿಮೆ ಸ್ವಚ್ಛತೆಗೆ ಕಾರ್ಮಿಕರು ಮುಂದಾಗಿದ್ದರು. ಟೋಪಿ ತೆಗೆದಿದ್ದೇ ತಡ ರಾಣಿಯ ತಲೆ ಬೋಳಾಗಿತ್ತು. ಸಾಮಾನ್ಯವಾಗಿ ಗಣ್ಯವ್ಯಕ್ತಿಗಳ ಯಥಾವತ್ತು ರೂಪವನ್ನು ಮೇಣದ ಪ್ರತಿಮೆಗಳಲ್ಲಿ ಸೃಷ್ಟಿಸಲಾಗುತ್ತದೆ.
ಆದರೆ ಮ್ಯೂಸಿಯಂನವರು ಹಣದ ಉಳಿತಾಯಕ್ಕಾಗಿ ಜನರಿಗೆ ಕಾಣಿಸದ ಟೋಪಿಯ ಕೆಳಭಾಗದಲ್ಲಿ ಕೂದಲನ್ನೇ ಜೋಡಿಸಿಲ್ಲ. ಈ ಬಗ್ಗೆ ಸ್ಪಷ್ಟನೆ ಕೂಡ ನೀಡಿರುವ ಮ್ಯೂಸಿಯಂ ಮಾಲಕಿ ಡಾ. ಸುಸ್ಸೇನ್ ಫೇರ್ಬರ್ ಅವರು, ಮೇಣದ ಪ್ರತಿಮೆ ನೈಜವಾಗಿ ಕಾಣಿಸಲೆಂದು ನಿಜವಾದ ಕೂದಲುಗಳನ್ನೇ ಜೋಡಿಸಿದ್ದೇವೆ. ಈ ಕೂದಲು ಖರೀದಿ ಬಹಳ ಕಷ್ಟವಾಗಿತ್ತು ಮತ್ತು ದುಬಾರಿ ಆಗಿತ್ತು. ಹಾಗಾಗಿ ಜನರಿಗೆ ಸಾಮಾನ್ಯವಾಗಿ ಕಾಣಿಸದ ಟೋಪಿ ಕೆಳಗೇಕೆ ಕೂದಲು ಎಂದು ಚಿಂತಿಸಿ, ಕೂದಲನ್ನು ಜೋಡಿಸಲಿಲ್ಲ ಎಂದಿದ್ದಾರೆ.
ಕೂದಲಿಲ್ಲದ ರಾಣಿಯ ಬೋಳು ತಲೆಯ ಫೋಟೊ ಭಾರಿ ವೈರಲ್ ಆಗಿದೆ. ಕೆಲವು ಬ್ರಿಟನ್ ಜನರು ಕಿಡಿಕಾರಿದ್ದು, ಇದು ತಮ್ಮ ರಾಣಿಗೆ ಆದಂತಹ ಅವಮಾನ ಎಂದು ಕೂಡ ಸಾಮಾಜಿಕ ಜಾಲತಾಣದಲ್ಲಿ ಆರೋಪಿಸಿದ್ದಾರೆ.