ಬೆಳ್ಳಂಬೆಳಗ್ಗೆ ಬಾಗಲಕೋಟೆ, ವಿಜಯಪುರ, ದಾವಣಗೆರೆ ಸೇರಿ ರಾಜ್ಯದ 7 ಜಿಲ್ಲೆಗಳಲ್ಲಿ ಅಧಿಕಾರಿಗಳ ಮನೆ ಮೇಲೆ ಲೋಕಾಯುಕ್ತ ದಾಳಿ

ಪಂಚಾಯತ್ ರಾಜ್ ಇಲಾಖೆಯ ಬೀಳಗಿ ಕಚೇರಿಯಲ್ಲಿ ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿರುವ ಮಲ್ಲೇಶ್ ದುರ್ಗದ ಎಂಬುವವರ ಮನೆ ಮೇಲೆ ಲೋಕಾಯುಕ್ತ ದಾಳಿ ನಡೆದಿದೆ. ಗುರುವಾರ ಬೆಳ್ಳಂಬೆಳಿಗ್ಗೆ ಬಾಗಲಕೋಟೆಯ ಹಳೆವೀರಾಪುರ ರಸ್ತೆಯಲ್ಲಿರುವ ಮನೆ ಮೇಲೆ ದಾಳಿ ಮಾಡಿರುವ ಲೋಕಾಯುಕ್ತ ಡಿವೈಎಸ್ಪಿ ಸಿದ್ದೇಶ್ ನೇತೃತ್ವದ ಅಧಿಕಾರಿಗಳ ತಂಡ ಆದಾಯಕ್ಕಿಂತ ಅಧಿಕ ಆಸ್ತಿಗಳಿಸಿರುವ ದೂರು ಹಿನ್ನೆಲೆಯಲ್ಲಿ ಪರಿಶೀಲನೆ ಕೈಗೊಂಡಿದೆ.
ಆದಾಯ ಮೀರಿ ಆಸ್ತಿ ಹೊಂದಿರೋ ಆರೋಪದ ಮೇಲೆ ಕರ್ನಾಟಕ ಗೃಹ ಮಂಡಳಿ ಎಫ್ ಡಿ ಎ ನಿವಾಸ ಹಾಗೂ ಫಾರ್ಮ್ ಹೌಸ್ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಕೆಎಚ್‌ಬಿ- ಎಫ್ ಡಿ ಎ , ಶಿವಾನಂದ ಕೆಂಬಾವಿ ಅವರ ಮನೆ ಹಾಗೂ ಫಾರ್ಮ್ ಹೌಸ್ ಮೇಲೆ ದಾಳಿಯಾಗಿದೆ. ವಿಜಯಪುರ ನಗರದ ಸುಕೂನ್ ಕಾಲೋನಿಯಲ್ಲಿರೋ ನಿವಾಸ ಹಾಗೂ ತಿಡಗುಂದಿ ಗ್ರಾಮದ ಬಳಿಯ ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿ ದಾಖಲೆಗಳ ಪರಿಶೀಲನೆ ನಡೆಸುತ್ತಿದ್ದಾರೆ.ಲೋಕಾಯುಕ್ತ ಎಸ್ಪಿ ಡಿ ಮಲ್ಲೇಶ ನೇತೃತ್ವದಲ್ಲಿ ಡಿವೈಎಸ್ಪಿ ಸುರೇಶ್ ರೆಡ್ಡಿ, ಸಿಪಿಐ ಆನಂದ ಟಕ್ಕಣ್ಣನವರ, ಹಾಗೂ ಸಿಬ್ಬಂದಿಗಳು ದಾಳಿ ನಡೆಸಿದ್ದಾರೆ.