Uncategorized

ಬೆಳಗಾವಿ ಬೆಂಬಿಡದ 'ದಾಖಲೆ' ಮಳೆ

 ನಗರವೂ ಸೇರಿದಂತೆ ಜಿಲ್ಲೆಯ ಹಲವೆಡೆ ಧಾರಾಕಾರ ಸುರಿಯುತ್ತಿರುವ ಮಳೆಯಿಂದಾಗಿ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.ಬುಧವಾರ ಬೆಳಗ್ಗೆ ವರೆಗೆ ಜಿಲ್ಲಾದ್ಯಂತ ವಾಡಿಕೆಗಿಂತಲೂ ಶೇ.384ರಷ್ಟು ಹೆಚ್ಚು ಮಳೆಯಾಗಿದೆ! ವಾಡಿಕೆ ಮಳೆ 4.9 ಎಂಎಂ ನಷ್ಟಿದ್ದರೆ, 23.7 ಎಂಎಂ ಮಳೆ ಸುರಿದಿದೆ. ಅದರಲ್ಲೂ, ಬೆಳಗಾವಿ ತಾಲೂಕಿನಲ್ಲಿ ವಾಡಿಕೆಗಿಂತ ಶೇ.705ರಷ್ಟು ಹೆಚ್ಚು ಪ್ರಮಾಣದಲ್ಲಿ, 58.8 ಎಂಎಂ ದಾಖಲೆಯ ಮಳೆಯಾಗಿದೆ. ಖಾನಾಪುರ ತಾಲೂಕಿನಲ್ಲೂ ಶೇ.529ರಷ್ಟು ಹೆಚ್ಚಾಗಿದ್ದು, ಒಟ್ಟು 103.2 ಎಂಎಂ ಮಳೆಯಾಗಿದೆ.2021ರ ಜೂನ್‌ 16 ಮತ್ತು 17ರಂದು ಕ್ರಮವಾಗಿ 28 ಮತ್ತು 46 ಎಂಎಂ ಪ್ರಮಾಣದಲ್ಲಿ ಮಳೆ ಸುರಿದಿರುವುದನ್ನು ಹೊರತು ಪಡಿಸಿ, ಕಳೆದ ನಾಲ್ಕು ವರ್ಷಗಳ ಪೈಕಿ ಜೂನ್‌ ತಿಂಗಳಲ್ಲಿ ಹೇಳಿಕೊಳ್ಳುವಷ್ಟು ಮಳೆಯಾಗಿರಲಿಲ್ಲ.

ಮೂರು ದಿನಗಳಿಂದ ಭಾರೀ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವುದರಿಂದ ಹಲವೆಡೆ ಸಾಕಷ್ಟು ಅವಾಂತರಗಳು ಉಂಟಾಗಿವೆ. ಕಂಗ್ರಾಳಿ ಕೆ.ಎಚ್‌.ಗ್ರಾಮದ ಮುಖ್ಯ ರಸ್ತೆ ಮುಳುಗಡೆಯಾಗಿದ್ದರಿಂದ ಹಾಗೂ ಬೆಳಗಾವಿ ನಗರ ಪ್ರವೇಶಿಸುವ ಯಡಿಯೂರಪ್ಪ ರಸ್ತೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಸಂಗ್ರವಾಗಿದ್ದರಿಂದ ವಾಹನ ಸವಾರರು ತೊಂದರೆ ಅನುಭವಿಸಿದರು.ಬೆಳಗಾವಿ ನಗರದಲ್ಲಿನ ಚರಂಡಿಗಳು ತುಂಬಿ ಇಡೀ ದಿನ ರಸ್ತೆ ಮೇಲೆ ಮಳೆ ನೀರು ಹರಿಯಿತು. ನಗರದಲ್ಲಿ ಹಾದು ಹೋಗುವ ಬಳ್ಳಾರಿ ನಾಲಾ ನೀರು ಯಳ್ಳೂರು, ಶಾಸ್ತ್ರಿನಗರ, ಹಳೆ ಪಿಬಿ ರಸ್ತೆ, ಖಾಸಬಾಗ, ಕಪಿಲೇಶ್ವರ ಕಾಲನಿಯ ಅಕ್ಕಪಕ್ಕದ ಬಡಾವಣೆಗಳಿಗೆ ನುಗ್ಗಿದ್ದರಿಂದ ಜನ ಪರದಾಡಿದರು. ರಾಷ್ಟ್ರೀಯ ಹೆದ್ದಾರಿ ಪಕ್ಕದ ಅಲಾರವಾಡದಿಂದ ಸಾಂಬ್ರಾ ವರೆಗಿನ ನೂರಾರು ಹೆಕ್ಟೇರ್‌ ಕೃಷಿ ಪ್ರದೇಶಕ್ಕೆ ನಾಲಾ ನೀರು ನುಗ್ಗಿದ್ದು, ಭತ್ತ, ಹೂಕೋಸು, ಬೀಟ್ರೂಟ್‌ ಸೇರಿದಂತೆ ಹಲವು ಬೆಳೆಗಳು ನೀರಿನಲ್ಲಿ ಮುಳುಗಿವೆ.

ಗಾಂಧಿನಗರ ಬ್ರಿಜ್‌ ಕೆಳಗೆ ಅಪಾರ ನೀರು ಸಂಗ್ರಹಗೊಂಡಿದ್ದರಿಂದ ಯರಗಟ್ಟಿ, ಧಾರವಾಡ ಹಾಗೂ ಸಾಂಬ್ರಾ ಕಡೆಗೆ ಹೋಗುವ ವಾಹನಗಳ ಸವಾರರ ಸಂಚಾರಕ್ಕೆ ಸಮಸ್ಯೆಯಾಯಿತು. ಇದರಿಂದ ಆಗಾಗ ಇಲ್ಲಿ ಟ್ರಾಫಿಕ್‌ ಜಾಮ್‌ ಆಗುತ್ತಿತ್ತು. ಇನ್ನೂ ಕೆಲವು ಮಾರ್ಗಗಳ ರಸ್ತೆಗಳಲ್ಲಿ ಅಪಾರ ಪ್ರಮಾಣದಲ್ಲಿ ನೀರು ನಿಂತಿದ್ದರಿಂದ ಸಂಚಾರಕ್ಕೆ ತೊಂದರೆಯಾಗಿತ್ತು. ನಿರಂತರ ಮಳೆಗೆ ವ್ಯಾಪಾರ ವಹಿವಾಟಿಗೆ ತೊಡಕಾಯಿತು. ನಗರಕ್ಕೆ ಬಂದಿದ್ದ ಜನರು ಆಶ್ರಯಕ್ಕಾಗಿ ಪರದಾಡಿದರು. ಹೀಗಾಗಿ ನಗರದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿತು.ಬೆಳಗಾವಿಯಲ್ಲಿ ಜೂನ್ 26 ರಂದೂ ಭಾರೀ ಮಳೆ ಆಗಲಿದ್ದು, ಆರೆಂಜ್ ಅಲರ್ಟ್ ಕೊಡಲಾಗಿದೆ. ಪಶ್ಚಿಮ ಘಟ್ಟದ ಜಿಲ್ಲೆಗಳಲ್ಲಿ ಇನ್ನೂ 2 ದಿನ ಮಳೆ ಮುಂದುವರಿಯುವ ಸಾಧ್ಯತೆ ಇದೆ.


Related Articles

Leave a Reply

Your email address will not be published. Required fields are marked *

Back to top button