ಬೆಲೆ ಏರಿಕೆಯ ನಾಗಾಲೋಟಕ್ಕೆ ನಲುಗಿದ ಹೋಟೆಲ್ ಉದ್ಯಮ..!
ಬೆಂಗಳೂರು: ಅಗತ್ಯ ವಸ್ತುಗಳ ಬೆಲೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಲೇ ಇದೆ. ತರಕಾರಿ ಬೆಲೆ, ಪೆಟ್ರೋಲ್, ಡೀಸೆಲ್ ಬೆಲೆ ಹೀಗೆ ದಿನ ಬಳಕೆಯ ವಸ್ತುಗಳ ಬೆಲೆ ಏರಿಕೆಯಿಂದ ಕಂಗಾಲಾಗಿರುವ ಜನರಿಗೆ ಮತ್ತೊಂದು ಶಾಕಿಂಗ್ ನ್ಯೂಸ್ ಸಿಕ್ಕಿದೆ.
ಹೋಟೆಲ್, ರೆಸ್ಟೋರೆಂಟ್ ಹಾಗೂ ಉದ್ದಿಮೆಗಳಲ್ಲಿ ಬಳಸುವ ವಾಣಿಜ್ಯ ಉದ್ದೇಶದ ಎಲ್‌ಪಿಜಿ ಸಿಲಿಂಡರ್ ದರ ಇಂದು ಮತ್ತೆ 103.50 ರೂಪಾಯಿ ಹೆಚ್ಚಳವಾಗಿದೆ. ಸದ್ಯ ಒಂದು ಕಮರ್ಷಿಯಲ್ ಸಿಲಿಂಡರ್ ಬೆಲೆ 2,200 ರೂಪಾಯಿಯಾಗಿದೆ. ಕಳೆದ ನಾಲ್ಕು ತಿಂಗಳಲ್ಲಿ ಕಮರ್ಷಿಯಲ್ ಸಿಲಿಂಡರ್ ಬೆಲೆ 487ರೂಪಾಯಿ ಹೆಚ್ಚಾಗಿದೆ.
ಕೊರೊನಾ ಲಾಕ್ಡೌನ್ನಿಂದ ತೀರಾ ಸಂಕಷ್ಟದಲ್ಲಿರುವ ಹೋಟೆಲ್ ಉದ್ಯಮಕ್ಕೆ ಸರ್ಕಾರ ದಿನದಿಂದ ದಿನಕ್ಕೆ ಬೆಲೆ ಏರಿಕೆಯ ಚಾಟಿ ಬೀಸುತ್ತಲೇ ಇದೆ. ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದರ ಜೊತೆಗೆ ಕಮರ್ಷಿಯಲ್ ಸಿಲಿಂಡರ್ ಬೆಲೆ ಕೂಡ ಗಗನಕ್ಕೇರುತ್ತಿರುವುದು ಹೋಟೆಲ್ ಉದ್ಯಮವನ್ನು ಮತ್ತಷ್ಟು ಸಂಕಷ್ಟಕ್ಕೀಡು ಮಾಡಿದಂತಾಗಿದೆ.
ಅಗತ್ಯ ವಸ್ತುಗಳ ಬೆಲೆ ಏರಿಕೆಯ ಕಾರಣ ರಾಜ್ಯದ ಎಲ್ಲಾ ಹೋಟೆಲ್ಗಳಲ್ಲಿ ಇತ್ತೀಚೆಗಷ್ಟೇ ಊಟ ತಿಂಡಿ ಪಾನೀಯಗಳ ಬೆಲೆ ಏರಿಸಲಾಗಿತ್ತು. ಇದೀಗ ಮತ್ತೆ ಕಮರ್ಷಿಯಲ್ ಸಿಲಿಂಡರ್ ಬೆಲೆ ಏರಿಕೆಯಾಗಿದೆ. ಹೀಗಾಗಿ ಬೆಲೆ ಏರಿಕೆಯ ಬಿಸಿ ಮತ್ತೆ ಗ್ರಾಹಕರ ಮೇಲೂ ತಟ್ಟಲಿದೆ. ಒಟ್ಟಾರೆ ಸರ್ಕಾರದ ಬೆಲೆ ಏರಿಕೆಯ ನಾಗಾಲೋಟಕ್ಕೆ ಹೋಟೆಲ್ ಉದ್ಯಮ ಸೇರಿದಂತೆ ಜನಸಾಮಾನ್ಯರು ನಲುಗಿ ಹೋಗುತ್ತಿದ್ದಾರೆ.