ಬೆಂಗ್ಳೂರಲ್ಲಿ ಥಂಡಿ ಜತೆಗೆ ಹೆಚ್ಚಾಗ್ತಿದೆ ಶೀತ, ಜ್ವರ..!
ಬೆಂಗಳೂರು: ನಗರದಲ್ಲಿ ಕಳೆದ ಐದಾರು ದಿನಗಳಿಂದ ಚಳಿಯ ವಾತಾವರಣ ಇರುವುದರಿಂದ ವೈರಲ್ ಕಾಯಿಲೆಗಳಿಂದ ಬಳಲುವವರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ವಿಶೇಷವಾಗಿ ಚಳಿ ಮತ್ತು ಮಂಜಿನ ವಾತಾವರಣದ ಹಿನ್ನೆಲೆಯಲ್ಲಿ ಅಸ್ತಮಾ, ಉಬ್ಬಸ ಸೇರಿದಂತೆ ಶ್ವಾಸಕೋಶ ಸಂಬಂಧಿ ರೋಗಿಗಳ ಸಂಖ್ಯೆಯೂ ಹೆಚ್ಚುವ ಸಾಧ್ಯತೆಯಿದೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಜನರಲ್ಲಿ ಜ್ವರ ಕೆಮ್ಮು, ಕಫ, ಶೀತ, ಉಸಿರಾಟದ ತೊಂದರೆ ಮುಂತಾದ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದೆ. ಬಹುತೇಕ ಆಸ್ಪತ್ರೆಗಳ ಹೊರ ರೋಗಿ ವಿಭಾಗಕ್ಕೆ ಔಷಧಿಗಾಗಿ ಭೇಟಿ ನೀಡುತ್ತಿರುವವರ ಸಂಖ್ಯೆ ಎರಡು ಪಟ್ಟು ಹೆಚ್ಚಾಗಿದೆ. ಈ ವಾತಾವರಣದಲ್ಲಿ ಅನಿವಾರ್ಯ ಇದ್ದರೆ ಮಾತ್ರ ಮನೆಯಿಂದ ಹೊರಗೆ ಬರಬೇಕು. ಹೊರ ಬಂದಾಗ ಮಾಸ್ಕ್ ಧಾರಣೆ, ಸಾಮಾಜಿಕ ಅಂತರ, ಕೈ ಶುದ್ಧತೆ ಕಾಪಾಡಿಕೊಳ್ಳಬೇಕು. ಹೊರಗಿನ ಕರಿದ ಪದಾರ್ಥಗಳ ಸೇವನೆ ಸಲ್ಲದು. ಬಿಸಿಯಾಗಿರುವ ಆಹಾರವನ್ನು ಮಾತ್ರ ಸೇವಿಸಬೇಕು. ತಣ್ಣನೆಯ ಆಹಾರ ಸೇವಿಸಬಾರದು ಎಂದು ಅವರು ಹೇಳುತ್ತಾರೆ.
ಚಳಿಯ ಹವೆ ಇದ್ದಾಗ ಶ್ವಾಸಕೋಶ(Lungs) ಮತ್ತು ಹೃದಯ ಸಂಬಂಧಿ ಸಮಸ್ಯೆಗಳು(Heart Problems) ಹೆಚ್ಚಾಗಿ ವರದಿಯಾಗುತ್ತದೆ. ಖಿನ್ನತೆಯ ಪ್ರಕರಣ ಹೆಚ್ಚಾಗುತ್ತದೆ. ಆದ್ದರಿಂದ ಅಸ್ತಮಾ, ಉಬ್ಬಸದ ರೋಗಿಗಳು ಸಾಕಷ್ಟುಜಾಗೃತೆ ವಹಿಸಬೇಕು. ಸದಾ ಬೆಚ್ಚಗಿನ ಉಡುಗೆ ಧರಿಸುವುದು, ಮನೆಯಲ್ಲಿ ಬೆಚ್ಚಗಿನ ವಾತಾವರಣದಲ್ಲೇ ಇರುವುದಕ್ಕೆ ಆದ್ಯತೆ ನೀಡಬೇಕು. ಕಿವಿಯನ್ನು ಮುಚ್ಚುವ ಮೂಲಕ ದೇಹವನ್ನು ಬೆಚ್ಚಗಿಡಬಹುದು ಎಂದು ಅವರು ಸಲಹೆ ನೀಡುತ್ತಾರೆ.
ಚಿಕುನ್ ಗುನ್ಯಾ ಮತ್ತು ಡೆಂಘೀ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಿದೆ. ಆದರೆ ಸೊಳ್ಳೆಯಿಂದ ಬರುವ ಈ ಕಾಯಿಲೆಗಳು ಮಳೆ ನಿಂತ ಬಳಿಕ ಹೆಚ್ಚಾಗುತ್ತದೆ. ಆದ್ದರಿಂದ ಮನೆಯ ಸುತ್ತಮುತ್ತ, ಕೆಲಸ ಮಾಡುವ ಪರಿಸರದಲ್ಲಿ ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು.