ಬೆಂಗಳೂರು: ಸ್ಟಾರ್ ನಟರ ಜೊತೆ ನಟಿಸಿದ್ದಾತ ಡ್ರಗ್ಸ್ ಪ್ರಕರಣದಲ್ಲಿ ಬಂಧಿ
ಕಮಲ್ ಹಾಸನ್, ಸೂರ್ಯಾ, ಪುನೀತ್ ರಾಜ್‌ಕುಮಾರ್ ಅಂಥಹಾ ಹಲವು ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸಿದ್ದ ನೈಜೀರಿಯನ್ ವ್ಯಕ್ತಿಯೊಬ್ಬನನ್ನು ಡ್ರಗ್ಸ್ ಪ್ರಕರಣದಲ್ಲಿ ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
ನೈಜೀರಿಯಾ ಮೂಲದ ಚೆಕುಮ್ವೆ ಮೆಲ್ವಿನ್ ಅನ್ನು ಕೆಜಿ ಹಳ್ಳಿ ಪೊಲೀಸರು ಬಂಧಿಸಿದ್ದು, ಆತನಿಂದ ಎಂಟು ಲಕ್ಷ ಮೌಲ್ಯದ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಮೆಡಿಕಲ್ ವೀಸಾದಲ್ಲಿ ಭಾರತಕ್ಕೆ ಬಂದಿದ್ದ ಚೆಕುಮ್ವೆ ಮೆಲ್ವಿನ್ ತೆಲುಗು, ತಮಿಳು, ಕನ್ನಡ, ಮಲಯಾಳಂ ಹಿಂದಿಯ ಹಲವು ಸಿನಿಮಾಗಳಲ್ಲಿ ನಟಿಸಿದ್ದ. ‘ವಿಶ್ವರೂಪಂ’, ‘ಸಿಂಘಂ’, ಹಿಂದಿಯ ‘ ದಿಲ್ ವಾಲೇ’ ಕನ್ನಡದ ‘ಅಣ್ಣಾ ಬಾಂಡ್’, ‘ಪರಮಾತ್ಮ’, ‘ಜಂಬೂಸವಾರಿ’ ಇನ್ನೂ ಕೆಲವು ಸಿನಿಮಾಗಳಲ್ಲಿ ಚೆಕುಮ್ವೆ ಮೆಲ್ವಿನ್ ನಟಿಸಿದ್ದ.
ನ್ಯೂಯಾರ್ಕ್ ಫಿಲಂ ಅಕಾಡೆಮಿಯಲ್ಲಿ ನಟನಾ ತರಭೇತಿ ಪಡೆದಿರುವುದಾಗಿ ಹೇಳಿಕೊಂಡಿರುವ ಚೆಕುಮ್ವೆ ಮೆಲ್ವಿನ್ ನೈಜಿರಿಯಾದಲ್ಲಿ ಸಹ ಹಲವು ಸಿನಿಮಾಗಳಲ್ಲಿ ನಟಿಸಿದ್ದಾನೆ.
ಸಿನಿಮಾ ನಟನೆ ಜೊತೆಗೆ ಮಾದಕ ವಸ್ತು ಮಾರಾಟವನ್ನೂ ಮಾಡುತ್ತಿದ್ದ ಚೆಕುಮ್ವೆ ಮೆಲ್ವಿನ್‌ಗೆ ಬಿಸಿನೆಸ್ ಮಾಡುವವರು ಮತ್ತು ಕಾಲೇಜು ಯುವಕರೇ ಟಾರ್ಗೇಟ್. ಎಂಡಿಎಂಎ, ಆಯಶಿಶ್ ಆಯಿಲ್ ಮಾರಾಟ ಮಾಡುತ್ತಿದ್ದ. ಸಿರಫ್ ಮಾದರಿಯ ಬಾಟಲ್‌ನಲ್ಲಿ ಈತ ಡ್ರಗ್ ಮಾರುತ್ತಿದ್ದ. ಬಂಧಿತನಿಂದ ಎಂಟು ಲಕ್ಷ ಮೌಲ್ಯದ ಮಾದಕವಸ್ತು ವಶಕ್ಕೆ ಪಡೆದಿದ್ದಾರೆ ಕೆಜಿ ಹಳ್ಳಿ ಪೊಲೀಸರು.