ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru Rain) ಸೇರಿದಂತೆ ರಾಜ್ಯದ ಕರಾವಳಿ, ಒಳನಾಡು ಮತ್ತು ಮೈಸೂರು ಭಾಗದಲ್ಲಿ ಮುಂದಿನ ಮೂರು ದಿನ ಮಳೆಯಾಗುವ (Karnataka Rains) ಸಾಧ್ಯತೆಗಳಿವೆ. ಕಳೆದ ಮೂರು ದಿನಗಳಿಂದ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಯಿಂದಾಗಿ ವಾಹನ ಸವಾರರು ಹೈರಾಣದರು. ಬೆಂಗಳೂರಿನ ಬಹುತೇಕ ಭಾಗಗಳಲ್ಲಿ ಮಳೆರಾಯ ಅಬ್ಬರಿಸಿದ್ದಾನೆ. ಇತ್ತ ಉತ್ತರ ಕರ್ನಾಟಕ (North Karnataka) ಭಾಗದಲ್ಲಿ ಒಣ ಹವೆ ಮುಂದುವರಿಯಲ್ಲಿದ್ದು, ಅಲ್ಲಲ್ಲಿ ತುಂತುರು ಮಳೆಯಾಗುವ ಸಾಧ್ಯತೆಗಳು ಸಹ ಕಡಿಮೆ. ಬಂಗಾಳಕೊಲ್ಲಿಯ ಮಧ್ಯಭಾಗದಲ್ಲಿ ವಾಯುಭಾರ ಕುಸಿತ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮಳಯುಂಟಾಗುತ್ತಿದೆ. ಇನ್ನುಳಿದಂತೆ ರಾಜ್ಯದಲ್ಲಿ ಚಳಿಗಾಲ (Winter) ಆರಂಭವಾಗುತ್ತಿದ್ದು, ಬೆಳಗಿನ ಜಾವ ಮತ್ತು ಸಂಜೆ ಶೀತಗಾಳಿಯ ಅನುಭವವಾಗುತ್ತಿದೆ.
ರಾತ್ರಿಯೇ ಬೆಂಗಳೂರಿನಲ್ಲಿ (Bengaluru Rain) ಧಾರಾಕಾರ ಮಳೆಯಾಗಿದ್ದು, ಹಬ್ಬದ ಸಂಭ್ರಮದಲ್ಲಿ ಹೊರಗೆ ಬಂದಿದ್ದ ಜನ ಮಳೆಯಲ್ಲಿ ಸಿಲುಕಿದರು. ಒಂದು ಗಂಟೆಗೂ ಅಧಿಕ ಕಾಲ ಸುರಿದ ಮಳೆಗೆ ವಾಹನ ಸವಾರರು ಫ್ಲೈ ಓವರ್ ಕೆಳಗೆ ಆಶ್ರಯ ಪಡೆದಿದ್ರು. ಚಿಕ್ಕಮಗಳೂರು, ಹಾಸನ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ನವೆಂಬರ್ 6ರ ತನಕ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆ ಸಾಧ್ಯತೆ ಇದ್ದು, ಮೀನುಗಾರರಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಲಾಗಿದೆ.
ಬೆಂಗಳೂರಿನಲ್ಲಿ ಅಧಿಕ ಮಳೆ
ಗುರುವಾರ ರಾತ್ರಿ ಒಂದು ಗಂಟೆಗೂ ಅಧಿಕ ಕಾಲ ಬೆಂಗಳೂರಿನಲ್ಲಿ ಮಳೆಯಾಗಿದ್ದು. ರಸ್ತೆಗಳ ಮೇಲೆ ನೀರು ಹೊಳೆಯಂತೆ ಹರಿದು ಬರುವ ದೃಶ್ಯ ಕಂಡು ಬಂದಿತ್ತು. ಇದೇ ಪರಿಸ್ಥಿತಿ ಶುಕ್ರವಾರವೂ ಮುಂದುವರಿದಿತ್ತು. ಮೆಜೆಸ್ಟಿಕ್, ಶಾಂತಿನಗರ, ವಿಧಾನಸೌಧ, ರಾಜಾಜಿ ನಗರ, ಮತ್ತಿಕೆರೆ, ಯಶವಂತಪುರ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಇನ್ನು ಮಳೆಗೆ ರಸ್ತೆಗಳು ಕೊಚ್ಚಿ ಹೋಗಿವೆ. ಪೈಪ್ ಲೈನ್ ಕಾಮಗಾರಿ ನಡೆಸಿದ್ದ ರಸ್ತೆಗಳಲ್ಲಿ ಮಾರುದ್ದು ಗುಂಡಿಗಳು ಉಂಟಾಗಿದ್ದು, ಎರಡು ಕಾರ್ ಗಳು ಸಿಲುಕಿದ್ದವು, ಕೊನೆಗೆ ಕ್ರೇನ್ ಮೂಲಕ ಮೇಲೆತ್ತಲಾಯ್ತು.