ಇತ್ತೀಚಿನ ಸುದ್ದಿರಾಜ್ಯಸುದ್ದಿ

ಬೆಂಗಳೂರು ಸಬ್‌ಅರ್ಬನ್ ರೈಲು ಯೋಜನೆ: ಜೂ.20ಕ್ಕೆ ಪ್ರಧಾನಿ ಶಂಕುಸ್ಥಾಪನೆ- ಸಿಎಂ ಬೊಮ್ಮಾಯಿ

ಬೆಂಗಳೂರು ಸಬ್ ಅರ್ಬನ್ ಕಾಮಗಾರಿ ಚಾಲನೆಗೆ ಕೊನೆಗೂ ಮುಹೂರ್ತ ಕೂಡಿಬಂದಿದೆ. ಇದೇ ತಿಂಗಳ 20ರಂದು ಪ್ರಧಾಣಿ ನರೇಂದ್ರ ಮೋದಿ ಅವರು ಸಬ್ ಅರ್ಬನ್ ರೈಲು ಕಾಮಗಾರಿಗೆ ಅಡಿಗಲ್ಲು ಹಾಕಲಿದ್ದಾರೆ.

ನಗರದಲ್ಲಿ ವಾಹನಗಳ ಸಂಚಾರ ದಟ್ಟಣೆ ಕಡಿಮೆ ಮಾಡುವುದು ಮತ್ತು ಹೊರವಲಯದ ಪ್ರದೇಶಗಳಿಗೆ ಮುಂಬೈ ಚೆನ್ನೈ ಮಾದರಿಯಲ್ಲಿ ರೈಲು ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಸಬ್‌ ಅರ್ಬನ್ ರೈಲು ಯೋಜನೆ ರೂಪಿಸಲಾಗಿದೆ. ಯೋಜನೆ ಸಂಬಂಧ ಈಗಾಗಲೇ ಟೆಂಡರ್ ಕರೆಯಲಾಗಿದೆ. ಮಾರ್ಚ್ ಅಂತ್ಯದೊಳಗೆ ಕಾಮಗಾರಿಗೆ ಚಾಲನೆ ನೀಡುವುದು ಉದ್ದೇಶವಾಗಿತ್ತು. ಆದರೆ, ಕಾರಂಣಾಂತರಗಳಿಂದ ವಿಳಂಬವಾಗಿದೆ. ಉಪನಗರ ರೈಲು ಯೋಜನೆ ಕಾರಿಡಾರ್-2 ಚಿಕ್ಕಬಾಣಾವರ- ಬೈಯಪ್ಪನಹಳ್ಳಿ ಮಾರ್ಗದ ಕಾಮಗಾರಿಗೆ ವರ್ಕ್‌ ಆರ್ಡರ್ ಸಹ ನೀಡಲಾಗಿದೆ.

ಈ ಸಂಬಂಧ ಸೊಮವಾರ ಮಾಹಿತಿ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು, “ಈ ತಿಂಗಳ 20 ರಂದು ನಮ್ಮ ಪ್ರಧಾನಮಂತ್ರಿಗಳು ಬೆಂಗಳೂರಿಗೆ ಆಗಮಿಸಿ, 15000 ಕೋಟಿ ರೂ.ಗಳ ಸಬ್ ಅರ್ಬನ್ ರೈಲಿಗೆ ಅಡಿಗಲ್ಲು ಹಾಕಲಿದ್ದಾರೆ ಈ ಮೂಲಕ ಬೆಂಗಳೂರಿನ ಬಹಳ ದಿನಗಳ ಕನಸು ನನಸಾಗಲಿದೆ,” ಎಂದು ಹೇಳಿದರು. ಅವರು ಇಂದು ಬಿಬಿಎಂಪಿ ವತಿಯಿಂದ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೂತನವಾಗಿ ನಿರ್ಮಿಸಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕಟ್ಟಡ ಉದ್ಘಾಟಿಸಿ ಮಾತನಾಡುತ್ತಿದ್ದರು. ಬೃಹತ್ ಬೆಂಗಳೂರನ್ನು ಅಂತರರಾಷ್ಟ್ರೀಯ ಮಟ್ಟದ ಎಲ್ಲಾ ಸೌಲಭ್ಯಗಳಿರುವ ನಗರವಾಗಿ ಅಭಿವೃದ್ಧಿಗೊಳಿಸಲಾಗುವುದು. ಬೆಂಗಳೂರಿನ ಅಭಿವೃದ್ಧಿಗೆ ದಕ್ಷ ಮಂತ್ರಿಗಳ, ಶಾಸಕರ ದೊಡ್ಡ ತಂಡ ನಮ್ಮೊಂದಿಗಿದೆ. ಆಧುನಿಕವಾಗಿರುವ ಬೆಸ್ಟ್ ಬೆಂಗಳೂರನ್ನು ನಿರ್ಮಿಸಲಾಗುವುದು. ಶಿಕ್ಷಣ ಕ್ಷೇತ್ರಕ್ಕೆ ಈ ಬಾರಿಯ ಆಯವ್ಯಯದಲ್ಲಿ ದೊಡ್ಡ ಮೊತ್ತದ ಅನುದಾನವನ್ನು ಮೀಸಲಿರಿಸಿದೆ. 7000 ಶಾಲಾ ಕೊಠಡಿಗಳನ್ನು ಈ ವರ್ಷ ನಿರ್ಮಿಸಲಾಗುತ್ತಿದೆ. ಎಂದು ಹೇಳಿದರು.

ಚರಂಡಿಗಳಿಗೆ 1600 ಕೋಟಿ ರೂ.ಗಳ ಅನುದಾನ

ಬೆಂಗಳೂರಿಗೆ 6000 ಕೋಟಿ ರೂ.ಗಳ ನಗರೋತ್ಥಾನ ಯೋಜನೆಯ ಜೊತೆಜೊತೆಗೆ ಮಳೆ ಬಂದಾಗ ಸಮಸ್ಯೆಯಾಗುವ ಚರಂಡಿಗಳಿಗೆ 1600 ಕೋಟಿ ರೂ.ಗಳ ಅನುದಾನ ನೀಡಿದೆ. ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. ಅದಲ್ಲದೆ, ವಿವಿಧ ಕಾರ್ಯಕ್ರಮಗಳಡಿಯಲ್ಲಿ ಸುಮಾರು 1000 ಕೋಟಿ ರೂ.ಗಳ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿದೆ. ಪೆರಿಫೆರಲ್ ರಿಂಗ್ ರೋಡ್ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ. ಜನರಿಗೆ ಅಗತ್ಯವಿರುವ ಯೋಜನೆಗಳ ಆದೇಶಗಳನ್ನು ಕೆಲವೇ ದಿನಗಳಲ್ಲಿ ನೀಡಲಾಗುವುದು. ದೊಡ್ಡ ಪ್ರಮಾಣದಲ್ಲಿ ವಿದೇಶೀ ಹೂಡಿಕೆದಾರರು ಇಲ್ಲಿ ಹೂಡಿಕೆ ಮಾಡಲು ಉತ್ಸುಕರಾಗಿದ್ದಾರೆ. ಇಂದು 52 ಸಾವಿರ ಕೋಟಿ ರೂ.ಗಳ ಯೋಜನೆಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಇದು ನಮ್ಮ ಕರ್ನಾಟಕ ಮತ್ತು ಬೆಂಗಳೂರಿನ ಶಕ್ತಿ ಎಂದರು.

ಬೆಂಗಳೂರಿನ ಅಭಿವೃದ್ಧಿ ನಮ್ಮ ಕರ್ತವ್ಯ

ಬೆಂಗಳೂರಿನ ಅಭಿವೃದ್ಧಿ ನಮ್ಮ ಕರ್ತವ್ಯ. ಜನರ ಆಶೀರ್ವಾದದಿಂದ ಜನಸೇವೆ ಮಾಡುವ ಅವಕಾಶ ನಮಗೆ ದೊರೆತಿದೆ. ನಿರಂತರವಾಗಿ 40 ವರ್ಷಗಳ ಅಧಿಕಾರವನ್ನು ನಂಬದೇ ಜನರ ಸೇವೆಯೇ ಅಧಿಕಾರ ಎಂದು ನಂಬಿ ಕೆಲಸ ಆಡುತ್ತಿರುವ ವಿ.ಸೋಮಣ್ಣ ಅವರು ಎಲ್ಲರಿಗೂ ಮಾದರಿಯಾಗಿದ್ದಾರೆ. ಬಸ್ ನಿಲ್ದಾಣದಲ್ಲಿ ಬಹುಪಯೋಗಿ ಕಟ್ಟಡವನ್ನು ನಿರ್ಮಿಸಲಾಗಿದೆ. ಇದು ಜನರ ಬಗ್ಗೆ ಕಳಕಳಿ ಇರುವ ವ್ಯಕ್ತಿಗೆ ಮಾತ್ರ ಸಾಧ್ಯ ಎಂದರು. ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಂಡು ಪರಿಹಾರವನ್ನು ನೀಡುವ ಕೆಲಸವಾಗಬೇಕು. 9000 ಮನೆಗಳಿಗೆ ನೇರವಾಗಿ ನೀರು ಕೊಡುವ ಕೆಲಸ ಸಚಿವ ಸೋಮಣ್ಣ ಮಾಡಿದ್ದಾರೆ ಎಂದರು.

ಸಮಸ್ಯೆಗಳಿಗೆ ಪರಿಹಾರ ನೀಡುವ ರಾಜಕಾರಣಿಯ ಆಯ್ಕೆ ಅಗತ್ಯ:

ಖಾಲಿ ಜಾಗವನ್ನು ಕಬಳಿಸುವ ರಾಜಕಾರಣಿಗಳು ಇದ್ದಾರೆ. ಆದರೆ ಸೋಮಣ್ಣನವರು ಜನರ ಅನುಕೂಲದ ಬಗ್ಗೆ ಚಿಂತಿಸುತ್ತಾರೆ. ಸಮಸ್ಯೆಗಳ ಬಗ್ಗೆ ಮಾತನಾಡುವವರು ಬೇಕೋ ಅಥವಾ ಸಮಸ್ಯೆಗಳಿಗೆ ಪರಿಹಾರ ನೀಡುವ ರಾಜಕಾರಣಿ ಬೇಕೋ ಎನ್ನುವ ಆಯ್ಕೆ ನಿಮ್ಮದು. ಸಾರ್ವಜನಿಕ ಆಸ್ತಿಯನ್ನು ಕಬಳಿಸುವವರು ಬೇಕೋ, ಆಸ್ತಿಯನ್ನು ರಕ್ಷಿಸುವವರು ಬೇಕೋ ಎಂದು ನೀವು ತೀರ್ಮಾನಿಸಬೇಕು. ಬೆಂಗಳೂರಿನಲ್ಲಿ 50 ಸಾವಿರಕ್ಕಿಂತಲೂ ಹೆಚ್ಚಿನ ಮನೆಗಳನ್ನು ನಿರ್ಮಿಸಿದ್ದಾರೆ, ಕೊಳಚೆ ಮಂಡಳಿ ವತಿಯಿಂದ ರಾಜ್ಯದಲ್ಲಿ 1 ಲಕ್ಷ ಮನೆಗಳ ನಿರ್ಮಾಣ, ಬಸವ ವಸತಿ ಯೋಜನೆಯಡಿ 5 ಲಕ್ಷ ಮನೆಗಳನ್ನು ಹಾಗೂ ಪಿಎಂ ಆವಾಸ್ ಯೋಜನೆಯಡಿ 2.50 ಲಕ್ಷ ಮನೆಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಬಡವರಿಗೆ ತಲೆಯ ಮೇಲೊಂದು ಸೂರಿ ಅಗತ್ಯವಿದೆ.ಅದು ಅವರ ಸ್ವಾಭಿಮಾನದ, ಗೌರವದ ಸಂಕೇತವೂ ಹೌದು ಎಂದರು.

ಬೆಂಗಳೂರಿನ ಯೋಜನಾಬದ್ಧ ಅಭಿವೃದ್ಧಿ:

ನವ ಕರ್ನಾಟಕದಿಂದ ನವ ಭಾರತ ನಿರ್ಮಾಣ ಮಾಡುವ ಸಂಕಲ್ಪವನ್ನು ನಾವು ಮಾಡಿದ್ದೇವೆ. ಬೃಹತ್ ಬೆಂಗಳೂರು ಅಂತರರಾಷ್ಟ್ರೀಯ ನಗರವಾಗಬೇಕು. ಅದಕ್ಕಾಗಿ 6000 ಕೋಟಿ ರೂ.ಗಳ ವೆಚ್ಚದಲ್ಲಿ ನಗರೋತ್ಥಾನ, 1500 ಕೋಟಿ ರೂ.ಗಳ ವೆಚ್ಚದಲ್ಲಿ ರಾಜ ಕಾಲುವೆ ನಿರ್ಮಾಣ, ಮೆಟ್ರೋ, ಸಬ್ ಅರ್ಬನ್ ರೈಲು, 12 ಕಾರಿಡಾರ್‍ಗಳ ಅಭಿವೃದ್ಧಿ, ಅಮೃತ್ ಯೋಜನೆಗಳಡಿ 75 ಕೆರೆ ಮತ್ತು ಉದ್ಯಾನಗಳ ಅಭಿವೃದ್ಧಿ ಸೇರಿದಂತೆ ಹಲವಾರು ಯೋಜನೆಗಳನ್ನು ಬೆಂಗಳೂರಿಗೆ ನೀಡಲಾಗಿದೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಆರ್ ಅಂಡ್ ಡಿ ಕೇಂದ್ರಗಳಿವೆ. 500 ಫಾರ್ಚೂನ್ ಕಂಪನಿಗಳ ಪೈಕಿ 400 ಇಲ್ಲಿವೆ. ದಾವೋಸ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ 60 ಸಾವಿರ ಕೋಟಿ ರೂ.ಗಳಿಗಿಂತ ಹೆಚ್ಚು ಕೈಗಾರಿಕೆಗಳಿಗೆ ಅನುಮೋದನೆ ನೀಡಲಾಗಿದೆ. ದೊಡ್ಡ ಪ್ರಮಾಣದಲ್ಲಿ ಬೆಂಗಳೂರು ಮತ್ತು ಸುತ್ತಮುತ್ತಲಿನ ಅಭಿವೃದ್ಧಿ ಆಗಲಿದೆ. ಆರು ಹೊಸ ಯೋಜನಾಬದ್ಧವಾಗಿ ಎಲ್ಲಾ ಸೌಲಭ್ಯಗಳಿರುವ ನಗರಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಹೊಸ ಕಲ್ಪನೆ ಇಟ್ಟುಕೊಂಡು ಬೆಂಗಳೂರು ಹಾಗೂ ರಾಜ್ಯದ ಅಭಿವೃದ್ಧಿ ಮಾಡಲಾಗುತ್ತಿದೆ. ಕರ್ನಾಟಕದ ಭವ್ಯ ಭವಿಷ್ಯ ಬರೆಯುವ ಶಕ್ತಿ, ನಿಮ್ಮ ಭಾಗ್ಯದ ಬಾಗಿಲನ್ನು ತೆರೆಯುವ ಶಕ್ತಿ ನಿಮ್ಮ ಆಶೀರ್ವಾದದಲ್ಲಿದೆ ಎಂದರು.

Read more at: https://kannada.onel

Related Articles

Leave a Reply

Your email address will not be published. Required fields are marked *

Back to top button