ಇತ್ತೀಚಿನ ಸುದ್ದಿಸುದ್ದಿ

ಬೆಂಗಳೂರು ಕೊಲೆ ಪ್ರಕರಣದಲ್ಲಿ ಆರೋಪಿಯನ್ನ ಕೈಬಿಟ್ಟ ಆರೋಪ: ರಾಮಮೂರ್ತಿನಗರ ಇನ್ಸ್​​​​ಪೆಕ್ಟರ್​ ಸೇರಿ ಆರು ಮಂದಿ ಅಮಾನತು

ಬೆಂಗಳೂರು: ಭ್ರಷ್ಟಾಚಾರ, ಕರ್ತವ್ಯ ಲೋಪ, ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನ ತೋರಿದ ಆರೋಪದ ಅಡಿ ರಾಮಮೂರ್ತಿನಗರ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್‌, ಪಿಎಸ್‌ಐ, ಇಬ್ಬರು ಎಎಸ್‌ಐ, ಹೆಡ್‌ಕಾನ್‌ಸ್ಟೆಬಲ್ ಹಾಗೂ ಕಾನ್‌ಸ್ಟೆಬಲ್‌ ಸೇರಿದಂತೆ ಆರು ಮಂದಿಯನ್ನು ಅಮಾನತು ಮಾಡಿ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್‌ ಕಮಿಷನರ್ ಎನ್‌.ಸತೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

ಇನ್‌ಸ್ಪೆಕ್ಟರ್‌ ಎಚ್‌.ಮುತ್ತುರಾಜ್‌, ಪಿಎಸ್ಐ ಉಮೇಶ್, ಎಎಸ್‌ಐಗಳಾದ ಫೈರೋಜ್‌ ಖಾನ್‌ ಹಾಗೂ ಮಹೇಶ್, ಹೆಡ್‌ ಕಾನ್‌ಸ್ಟೆಬಲ್‌ ಮಂಜುನಾಥ್‌, ಕಾನ್‌ಸ್ಟೆಬಲ್‌ ಬಸವರಾಜ್‌ ಅಳ್ಳೊಳ್ಳಿ ಅವರನ್ನು ಅಮಾನತು ಮಾಡಲಾಗಿದೆ.

ಆರು ಮಂದಿ ಕರ್ತವ್ಯ ಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು, ಇಲಾಖಾ ವಿಚಾರಣೆ ಕಾಯ್ದಿರಿಸಿ ಅಮಾನತು ಮಾಡಲಾಗಿದೆ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದರು.

ಕೊಲೆ ಆರೋ‍ಪಿ ಬಿಟ್ಟು ಕಳುಹಿಸಿದ್ದ ಇನ್‌ಸ್ಪೆಕ್ಟರ್‌: ‘ಕೊಲೆ ಪ್ರಕರಣವೊಂದರ ಆರೋಪಿ ಗೌರವ್‌ ಎಂಬಾತನನ್ನು ವಿಚಾರಣೆಗೆ ಒಳಪಡಿಸಿರಲಿಲ್ಲ. ಅಲ್ಲದೇ ಮೇಲಾಧಿಕಾರಿಗಳ ಗಮನಕ್ಕೂ ತಾರದೇ ದೋಷಾರೋಪ ಪಟ್ಟಿಯಿಂದ ಗೌರವ್‌ ಹೆಸರನ್ನು ಇನ್‌ಸ್ಪೆಕ್ಟರ್‌ ಮುತ್ತುರಾಜ್‌ ಕೈಬಿಟ್ಟಿದ್ದರು. ಬೀಟ್‌ ಸಿಬ್ಬಂದಿ ಹುಸೇನ್‌ ಸಾಬ್‌ ಗುಳೇದಗುಡ್ಡ ಹಾಗೂ ಅನಿಲ್‌ ಕುಮಾರ್‌ ಅವರ ಮೇಲೆ ಹಲ್ಲೆ ನಡೆಸಿದ್ದ ಆರೋಪಿಗಳಾದ ವಿಷ್ಣು ಹಾಗೂ ದೀಪು, ಕಿಶೋರ್‌ಕುಮಾರ್‌, ಸಂದೀಪ್‌ ಕುಮಾರ್ ವಿರುದ್ಧ ಪ್ರಕರಣ ದಾಖಲಿಸದೇ ಸಿಬ್ಬಂದಿಯ ಮೂಲಕ ಹಣ ಪಡೆದು ಬಿಡುಗಡೆ ಮಾಡಿದ್ದರು. ಇನ್ನು ಹೆಡ್‌ ಕಾನ್‌ಸ್ಟೆಬಲ್‌ ಈರಯ್ಯ ಹಿರೇಮಠ್‌ ಅವರು ಡ್ರಗ್ಸ್ ಪೆಡ್ಲರ್‌ ಟೋನಿ ಅಲಿಯಾಸ್‌ ಅಂಥೋನಿ ಎಂಬಾತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದಿದ್ದರು. ಆರೋಪಿ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳದೇ ಮುತ್ತುರಾಜ್‌ ಬಿಡುಗಡೆ ಮಾಡಿದ್ದರು’ ಎಂದು ಅಮಾನತು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

₹2.20 ಲಕ್ಷ ಪಡೆದು ಬಿಡುಗಡೆ: ‘ವಿಷ್ಣು, ದೀಪು, ಕಿಶೋರ್‌ ಕುಮಾರ್‌ ಹಾಗೂ ಸಂದೀಪ್‌ ಕುಮಾರ್ ಎಂಬವರು ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದ ಮಾಹಿತಿ ತಿಳಿದು ಪಿಎಸ್ಐ ಉಮೇಶ್ ಅವರು ಠಾಣೆಗೆ ಬಂದಿದ್ದರು. ಸಿಬ್ಬಂದಿ ದೂರು ನೀಡಿದ್ದರೂ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳದೇ ಬಿಡುಗಡೆ ಮಾಡಿದ್ದರು. ಕಾನ್‌ಸ್ಟೆಬಲ್‌ ಬಸವರಾಜ್‌ ಅಳ್ಳೊಳ್ಳಿ ಅವರು ಹಲ್ಲೆ ನಡೆಸಿದ್ದವರ ಸಂಬಂಧಿಕರಿಂದ ₹ 2.20 ಲಕ್ಷ ಪಡೆದುಕೊಂಡಿರುವುದು ಕಂಡುಬಂದಿದೆ’ ಎಂದು ಆದೇಶದಲ್ಲಿ ವಿವರಿಸಲಾಗಿದೆ.

‘ಆಗಸ್ಟ್‌ 28ರ ರಾತ್ರಿ ಹೆಡ್‌ಕಾನ್‌ಸ್ಟೆಬಲ್‌ ಈರಯ್ಯ ಹಿರೇಮಠ ಅವರು ಡ್ರಗ್ ಪೆಡ್ಲರ್ ಟೋನಿ ಎಂಬಾತನನ್ನು ವಶಕ್ಕೆ ಪಡೆದು ಆತನ ಬಳಿಯಿದ್ದ ನಾಲ್ಕು ಮಾದಕ ಮಾತ್ರೆ, ಒಂದು ಚಾಕು, ₹22 ಸಾವಿರ ನಗದು ಮತ್ತು ಮೊಬೈಲ್ ಫೋನ್ ಸಮೇತ ಆರೋಪಿಯನ್ನು ಠಾಣೆಗೆ ತಂದು ಹಾಜರು ಪಡಿಸಿದ್ದರು. ವರದಿ ನೀಡಿದ್ದರೂ ಎಎಸ್‌ಐಗಳಾದ ಫೈರೋಜ್‌ ಖಾನ್‌ ಹಾಗೂ ಮಹೇಶ್‌, ಹೆಡ್‌ ಕಾನ್‌ಸ್ಟೆಬಲ್‌ ಮಂಜುನಾಥ್‌ ಅವರು ಆರೋಪಿಯ ವಿರುದ್ಧ ಯಾವುದೇ ಕಾನೂನು ಕ್ರಮ ಜರುಗಿಸದೇ ಬಿಡುಗಡೆ ಮಾಡಿದ್ದರು. ಇದೇ ಪ್ರಕರಣದಲ್ಲಿ ಆರೋಪಿಯನ್ನು ಸರಿಯಾಗಿ ವಿಚಾರಣೆ ಮಾಡದೇ ಆತ ಮುಗ್ದ ಎಂದು ಇನ್‌ಸ್ಪೆಕ್ಟರ್‌ಗೆ ಹೇಳಿದ್ದರು. ಜತೆಗೆ, ಆರೋಪಿಯನ್ನು ಬಿಡುಗಡೆ ಮಾಡಿದ್ದ ಬಗ್ಗೆ ಠಾಣೆಯ ದಾಖಲಾತಿಗಳಲ್ಲಿ ನಮೂದಿಸಿರಲಿಲ್ಲ’ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಸಾಕ್ಷ್ಯ ನಾಶಪಡಿಸುವ ಸಾಧ್ಯತೆ: ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ ವಿರುದ್ಧ ಕೇಳಿ ಬಂದಿರುವ ಆರೋಪಗಳು ಗಂಭೀರ ಸ್ವರೂಪದ್ದಾಗಿದ್ದು, ಪೊಲೀಸ್ ಇಲಾಖೆಯ ಘನತೆಗೆ ಧಕ್ಕೆ ತಂದಿವೆ. ಇವರನ್ನು ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಸ್ಥಳದಲ್ಲಿ ಮುಂದುವರಿಸಿದಲ್ಲಿ ಸಾಕ್ಷಿದಾರರಿಗೆ ಬೆದರಿಕೆ ಒಡ್ಡುವ ಮತ್ತು ಸಾಕ್ಷ್ಯ ನಾಶಪಡಿಸುವ ಸಾಧ್ಯತೆ ಇರುತ್ತದೆ. ರಾಜ್ಯ ಪೊಲೀಸ್ (ಶಿಸ್ತು ನಡವಳಿಗಳು) ನಿಯಮಗಳ ಪ್ರಕಾರ ಇವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನ್ಯೂಸ್10ಕನ್ನಡ ರಿಪೋರ್ಟರ್ – ಸುನಿಲ್ ಗೌಡ 🖋️

Related Articles

Leave a Reply

Your email address will not be published. Required fields are marked *

Back to top button