ಬೆಂಗಳೂರಿನ 13,214 ಅಪಾರ್ಟ್‍ಮೆಂಟ್‍ಗಳು ಸೇಫ್ ಅಲ್ಲ..!
ಬೆಂಗಳೂರು,ಸೆ.22-ನಗರದ ದೇವರಚಿಕ್ಕನಹಳ್ಳಿ ಅಪಾರ್ಟ್‍ಮೆಂಟ್‍ನಲ್ಲಿ ನಡೆದ ಅಗ್ನಿ ಅವಘಡದಲ್ಲಿ ತಾಯಿ ಮಗಳು ಸಜೀವ ದಹನವಾಗಿರುವ ಘಟನೆ ಅಪಾರ್ಟ್‍ಮೆಂಟ್‍ಗಳು ಹಾಗೂ ಬಹುಮಹಡಿ ಕಟ್ಟಡಗಳಲ್ಲಿ ಸುರಕ್ಷತಾ ಕ್ರಮಗಳನ್ನು ಇದುವರೆಗೂ ಕೈಗೊಂಡಿಲ್ಲ ಎಂಬುದಕ್ಕೆ ತಾಜ ಉದಾಹರಣೆಯಾಗಿದೆ.
2010ರಲ್ಲಿ ಕಾರ್ಲಟನ್ ಟವರ್ ದುರಂತ ನಡೆದು 11 ವರ್ಷ ಕಳೆದರೂ ಅಪಾರ್ಟ್‍ಮೆಂಟ್‍ಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಂಡಿಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.ನಾಲ್ಕು ಮಹಡಿಯಲ್ಲಿ 72 ಫ್ಲಾಟ್‍ಗಳನ್ನು ಹೊಂದಿರುವ ಅಪಾರ್ಟ್‍ಮೆಂಟ್‍ನ 3ನೇ ಮಹಡಿಯಲ್ಲಿ ಕಾಣಿಸಿಕೊಂಡ ಬೆಂಕಿ ನಂದಿಸಲು ಸಮರ್ಪಕ ವ್ಯವಸ್ಥೆಯನ್ನು ಕಲ್ಪಿಸಿರಲಿಲ್ಲ.
ಬೆಂಕಿ ಬಿದ್ದಾಗ ನೀರು ಹಾಯಿಸಲು ವ್ಯವಸ್ಥೆ ಮಾಡಿರಲಿಲ್ಲ. ಇದರ ಜೊತೆಗೆ ಫೈರ್ ಅಲಾರಾಮ್ ವ್ಯವಸ್ಥೆಯೂ ಇರಲಿಲ್ಲ.ಡೆವಲಪರ್‍ಗಳು ಸಾರ್ವಜನಿಕರಿಗೆ ಫ್ಲಾಟ್‍ಗಳನ್ನು ನೀಡುವ ಮುನ್ನ ಸಂಬಂಧಪಟ್ಟ ಇಲಾಖೆಗಳಿಂದ ಸ್ವಾಧೀನ ಪತ್ರ ಹಾಗೂ ಅಗ್ನಿಶಾಮಕ ದಳದಿಂದ ಸುರಕ್ಷತಾ ಪ್ರಮಾಣ ಪತ್ರ ಪಡೆದಿರಬೇಕು. ಆದರೆ ಬಹುತೇಕ ಡೆವಲಪರ್‍ಗಳು ಸ್ವಾಧೀನಪತ್ರ ಇಲ್ಲದೆ ಜನರಿಗೆ ಫ್ಲಾಟ್‍ಗಳನ್ನು ಹಸ್ತಾಂತರಿಸುತ್ತಿದ್ದಾರೆ.
ಅಗ್ನಿಶಾಮಕ ದಳದಿಂದ ಪರಿಶೀಲನೆ ನಡೆಯುತ್ತಿಲ್ಲ. ಇದರಿಂದಾಗಿ ಅಪಾರ್ಟ್‍ಮೆಂಟ್‍ಗಳಲ್ಲಿ ನಿಯಮ ಉಲ್ಲಂಘನೆಗೆ ಕಡಿವಾಣ ಇಲ್ಲದಂತಾಗಿರುವುದರಿಂದ ಇಂತಹ ದುರಂತಗಳು ಸಂಭವಿಸುತ್ತಿವೆ.
# 13,214 ಕಟ್ಟಡಗಳಲ್ಲಿ ಸುರಕ್ಷತಾ ಕ್ರಮವಿಲ್ಲ:
2015ರ ಮಾಹಿತಿ ಪ್ರಕಾರ ಬಿಬಿಎಂಪಿ ವ್ಯಾಪ್ತಿಯಲ್ಲಿರುವ 13,214 ಕಟ್ಟಡಗಳಲ್ಲಿ ಬೆಂಕಿ ಸುರಕ್ಷತೆ ವ್ಯವಸ್ಥೆ ಇಲ್ಲದಿರುವುದು ದೃಢಪಟ್ಟಿದೆ.2015ರಲ್ಲಿ ನಡೆದ ಆಡಿಟಿಂಗ್ ಅನ್ವಯ ರಾಜ್ಯದ 14 ಸಾವಿರಕ್ಕೂ ಹೆಚ್ಚು ಕಟ್ಟಡಗಳಲ್ಲಿ ಬೆಂಕಿ ಸುರಕ್ಷತಾ ನಿಯಮಗಳನ್ನು ಉಲ್ಲಂಘನೆ ಮಾಡಿರುವುದು ಬಯಲಿಗೆ ಬಂದಿದೆ.
14 ಸಾವಿರ ಕಟ್ಟಡಗಳಲ್ಲಿ ಬೆಂಗಳೂರಿನಲ್ಲೇ 13 ಸಾವಿರಕ್ಕೂ ಹೆಚ್ಚು ಕಟ್ಟಡಗಳಿದ್ದು ಇವುಗಳಲ್ಲಿ 13,214 ಅಪಾರ್ಟ್‍ಮೆಂಟ್‍ಗಳಲ್ಲಿ ಯಾವುದೇ ಸುರಕ್ಷತಾ ಕ್ರಮಗಳನ್ನು ವ್ಯವಸ್ಥೆ ಮಾಡಿಕೊಳ್ಳದಿರುವುದು ಆತಂಕ ಮೂಡಿಸಿದೆ.
ಇತ್ತೀಚೆಗೆ ನಗರದಲ್ಲಿ ನೂರಾರು ಹೊಸ ಕಟ್ಟಡಗಳನ್ನು ನಿರ್ಮಿಸಿರುವುದರಿಂದ ಮತ್ತೊಮ್ಮೆ ಸರ್ವೇ ಮಾಡಿದರೆ ಸುರಕ್ಷತಾ ಕ್ರಮ ಕೈಗೊಳ್ಳದಿರುವ ಇನ್ನು ಹಲವಾರು ಕಟ್ಟಡಗಳನ್ನು ಪತ್ತೆಹಚ್ಚಲಾಗಿದೆ. ಅಪಾಯದ ಅಂಚಿನಲ್ಲಿರುವ 12 ಬಹುಮಹಡಿ ಕಟ್ಟಡಗಳನ್ನು ಅಗ್ನಿಶಾಮಕ ದಳದವರು ಅತಿ ಅಪಾಯಕಾರಿ ಕಟ್ಟಡಗಳೆಂದು ಗುರುತಿಸಿದ್ದಾರೆ. ಈ ಕಟ್ಟಡಗಳ ಪೈಕಿ ಪ್ರತ್ಯೇಕ ವರದಿ ಸಿದ್ದಪಡಿಸಿ ಇಲಾಖೆಯ ಉನ್ನತ ಅಧಿಕಾರಿಗಳಿಗೆ ಸಲ್ಲಿಸಿತ್ತು.
ನಿಯಮ ಉಲ್ಲಂಘಿಸಿರುವ 70 ಕಟ್ಟಡಗಳ ಮಾಲೀಕರಿಗೆ ಈಗಾಗಲೇ ನೋಟಿಸ್ ಜಾರಿ ಮಾಡಲಾಗಿದೆ. ನೆಲಮಹಡಿ ಸೇರಿ 4 ಹಂತಸ್ತಿನ ಕಟ್ಟಡ ಹಾಗೂ 15 ಮೀಟರ್‍ಗಿಂತ ಎತ್ತರದ ಕಟ್ಟಡಗಳಲ್ಲಿ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂಬುದನ್ನು ಪರಿಶೀಲಿಸುವ ಹೊಣೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ ಮೇಲಿದೆ.
# ನಿಯಮಗಳೇನು:
ರಸ್ತೆಗೂ ಬಹುಮಹಡಿ ಕಟ್ಟಡಕ್ಕೂ 12 ಮೀಟರ್ ಅಂತರವಿರಬೇಕು. ಕಟ್ಟಡದ ಸುತ್ತ ಅಗ್ನಿಶಾಮಕ ವಾಹನ ಸಂಚರಿಸುವಷ್ಟು ಜಾಗವಿರಬೇಕು. ಛಾವಣಿ ಮತ್ತು ನೆಲಹಂತಸ್ತಿನಲ್ಲಿ ನೀರಿನ ಟ್ಯಾಂಕ್‍ಗಳು ಇರಬೇಕು. ನೆಲಹಂತಸ್ತು ಕಡ್ಡಾಯವಾಗಿ ವಾಹನ ನಿಲುಗಡೆಗೆ ಮಾತ್ರ ಬಳಕೆಯಾಗಬೇಕು.
ಯಾವುದೇ ಅಪಾರ್ಟ್‍ಮೆಂಟ್‍ನಲ್ಲಿಒಬ್ಬ ಅಗ್ನಿ ಸುರಕ್ಷತಾ ಅಕಾರಿಯನ್ನು ನೇಮಿಸಿಕೊಳ್ಳಬೇಕು. ನೀರು ಕೊಳವೆ, ಎಲೆಕ್ಟ್ರಿಕ್ ಅಲಾರಾಂ ಮತ್ತು ಅಗ್ನಿಶಮನ ಸಲಕರಣೆಗಳನ್ನು ಅಳವಡಿಸಿರಬೇಕು. ಅಪಾರ್ಟ್‍ಮೆಂಟ್‍ನಲ್ಲಿ ಕನಿಷ್ಠ ಎರಡು ಕಡೆ ಮೆಟ್ಟಿಲು ಹಾಗೂ ಲಿಫ್ಟ್ ಇರುವುದು ಕಡ್ಡಾಯ. ಅಗ್ನಿ ಸುರಕ್ಷತೆ ಬಗ್ಗೆ ಅಲ್ಲಿನ ನಿವಾಸಿಗಳಿಗೆ ಪ್ರಾತ್ಯಕ್ಷಿಕೆ ನೀಡಬೇಕು. ನಿರ್ಗಮನದ ದ್ವಾರಗಳು ಕತ್ತಲಲ್ಲೂ ಗೋಚರವಾಗುವಂತಹ ವ್ಯವಸ್ಥೆ ಕಲ್ಪಿಸಿರಬೇಕು.
# ಬಿಬಿಎಂಪಿ ನಿರ್ಲಕ್ಷ್ಯ:
ಅಪಾರ್ಟ್‍ಮೆಂಟ್‍ಗಳಲ್ಲಿ ಕೈಗೊಳ್ಳಬೇಕಾದ ನಿಯಮಗಳು ಕೇವಲ ಕಾಗದಕ್ಕೆ ಮಾತ್ರ ಸೀಮಿತವಾಗಿವೆ. ನಗರದಲ್ಲಿರುವ ಬಹುತೇಕ ಕಟ್ಟಡಗಳನ್ನು ನಿಯಮ ಬಾಹಿರವಾಗಿ ನಿರ್ಮಿಸಲಾಗಿದೆ. ಬಿಬಿಎಂಪಿಯ ನಗರ ಯೋಜನೆ ಇಲಾಖೆ ಅಧಿಕಾರಿಗಳು ನಕ್ಷೆ,ಓಸಿ ಮಂಜೂರಾತಿ ನೀಡುವ ಮುನ್ನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆಯೇ ಎಂಬುದನ್ನು ಪರಿಶೀಲನೆ ನಡೆಸಬೇಕು. ಆದರೆ ಅಧಿಕಾರಿಗಳು ಲಂಚ ಪಡೆದು ಬಿಲ್ಡರ್‍ಗಳು, ಮನಸೋಇಚ್ಛೆ ಅಕ್ರಮ ಕಟ್ಟಡಗಳನ್ನು ನಿರ್ಮಿಸಲು ಪರೋಕ್ಷವಾಗಿ ಸಹಕಾರ ನೀಡುತ್ತಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ.
# ಇನ್ನು ಮುಂದಾದರೂ ಎಚ್ಚೆತ್ತುಕೊಳ್ಳಿ:
ನಿನ್ನೆ ನಡೆದ ದುರಂತದಲ್ಲಿ ತಾಯಿ ಮತ್ತು ಮಗಳು ಬೆಂಕಿಯ ಕೆನ್ನಾಲಿಗೆಯಲ್ಲಿ ಬೆಂದು ಹೋಗಿರುವ ಘಟನೆಗಳನ್ನು ಅಪಾರ್ಟ್‍ಮೆಂಟ್ ಕೊಂಡುಕೊಳ್ಳುವವರಿಗೆ ಮಾರ್ಗಸೂಚಿಯಾಗಲಿ. ಸಾರ್ವಜನಿಕರು ಅಪಾರ್ಟ್‍ಮೆಂಟ್‍ಗಳನ್ನು ಖರೀದಿಸುವ ಮುನ್ನ ಬಿಲ್ಡರ್‍ಗಳು ಕಾನೂನು ಬದ್ದವಾಗಿ ವಸತಿ ಸಮುಚ್ಚಾಯಗಳನ್ನು ನಿರ್ಮಿಸಿದ್ದಾರೆ ಎಂಬುದನ್ನು ಖಾತ್ರಿಪಡಿಸಿಕೊಂಡ ನಂತರವಷ್ಟೇ ಅಪಾರ್ಟ್‍ಮೆಂಟ್ ಖರೀದಿಸುವುದರಿಂದ ಭವಿಷ್ಯದಲ್ಲಿ ಆಗುವ ತೊಂದರೆಯಿಂದ ಬಚಾವ್ ಆಗಬಹುದಾಗಿದೆ.