ಬೆಂಗಳೂರಿನ ರಸ್ತೆಯುದ್ದಕ್ಕೂ ‘ಯಪ್ಪಾ ಬಿದ್ದೆ.. ಎದ್ದೆ.. ಬಚಾವಾದೆ’
ಬೆಂಗಳೂರಿನಲ್ಲಿ ಅಕಾಲಿಕ ಮಳೆಯಿಂದಾಗಿ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ರಸ್ತೆಗಳು ಜಲಾವೃತಗೊಂಡಿದ್ದು ಸವಾರರು ರಸ್ತೆ ದಾಟಲು ಹೆಣಗಾಡುತ್ತಿದ್ದಾರೆ. ಮಳೆ ನೀರಿನ ಕಾಟ ಒಂದೆಡೆಯಾದರೆ ಮತ್ತೊಂದೆಡೆ ರಸ್ತೆ ಗುಂಡಿಗಳ ಕಾಟಕ್ಕೇ ಸವಾರರು ಸುಸ್ತಾಗಿ ಹೋಗಿದ್ದಾರೆ. ಮಳೆ ಬಾರದ ಸಮಯದಲ್ಲೇ ಗುಂಡಿಗಳಲ್ಲಿ ಬಿದ್ದು ಅದೆಷ್ಟೋ ಸವಾರರು ಪ್ರಾಣ ಕಳೆದುಕೊಂಡಿದ್ದಾರೆ.
ಹೀಗಿರುವಾಗ ಮಳೆ ಬಂದಾಗ ಸವಾರರ ಪರಿಸ್ಥಿತಿ ಹೇಳ ತೀರದ್ದಾಗಿದೆ. ರಸ್ತೆಯುದ್ದಕ್ಕೂ ‘ಯಪ್ಪಾ ಬಿದ್ದೆ.. ಎದ್ದೆ.. ಬಚಾವಾದೆ’ ಎಂದು ಗೊಣಗುತ್ತಾ ಸಾಗಬೇಕಾದ ಪರಿಸ್ಥಿತಿ ಎದುರಾಗಿದೆ. ಮನೆ ತಲುಪೋವರೆಗೂ ವಾಹನ ಸವಾರರು ಪ್ರಾಣ ಅಂಗೈಯಲ್ಲಿಡಿದುಕೊಂಡೇ ಸಾಗಬೇಕಿದೆ. ಮಾತ್ರವಲ್ಲದೇ ಹವಾಮಾನ ಇಲಾಖೆ ನಗರದಾದ್ಯಂತ ಮುಂದಿನ ಮೂರು ದಿನಗಳ ಕಾಲ ಭಾರೀ ಮಳೆಯಿಂದ ಆರೆಂಜ್ ಅಲರ್ಟ್ ಘೋಷಿಸಿದೆ.
ಇನ್ನೂ ನಮ್ಮ ಅಧಿಕಾರಿಗಳು ‘ಕಷ್ಟ ಬಂದಾಗ ವೆಂಕಟರಮಣ’ ಎನ್ನುವವರೇ ಹೆಚ್ಚು. ಮಳೆ ಬಾರದೇ ಇದ್ದಾಗಲೇ ಗುಂಡಿ ಬಗ್ಗೆ ತಲೆಕೆಡಿಸಿಕೊಳ್ಳದ ಅಧಿಕಾರಿಗಳು ಮಳೆ ಬಂದಾಗ ತಲೆ ಕೆಡಿಸಿಕೊಳ್ಳುತ್ತಾರಾ? ಚಾನ್ಸೇ ಇಲ್ಲ ಬಿಡಿ ಎನ್ನುತ್ತಾರೆ ಬೆಂಗಳೂರು ಮಂದಿ. ಅದಾಗ್ಯೂ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಬೆಂಗಳೂರು ಹೆದ್ದಾರಿಗಳ ಮೇಲೆ ಈಜುಕೊಳ ನಿರ್ಮಾಣವಾದಂತೆ ನೀರು ನಿಂತುಕೊಂಡಿದೆ. ಹೀಗಿರುವಾಗ ಗುಂಡಿ ಬಗ್ಗೆ ಯಾರು ತಲೆ ಕೆಡಿಸಿಕೊಳ್ತಾರೆ ಅನ್ನೋದು ಬೆಂಗಳೂರಿಗರ ಲೆಕ್ಕಾಚಾರ. ಗಡ್ಡಕ್ಕೆ ಬೆಂಕಿ ಹೊತ್ತಿದಾಗ ಬಾವಿ ತೋಡಿದ್ರು ಅಂದಹಾಗೆ ಇಂದು ಬೆಂಗಳೂರಿನ ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ರೌಂಡ್ಸ್ ಮಾಡಿದ ಸಿಎಂ ಬಸವರಾಜ ಬೊಮ್ಮಾಯಿ, ಮೊದಲು ರಸ್ತೆಗಳಲ್ಲಿರುವ ಗುಂಡಿಗಳನ್ನು ಮುಚ್ಚುವಂತೆ ಆದೇಶ ಹೊರಡಿಸಬೇಕು ಎಂದಿದ್ದಾರೆ.
ಈ ತಿಂಗಳ ಅಂತ್ಯಕ್ಕೆ ರಾಜ್ಯಕ್ಕೆ ಮುಂಗಾರು ಆರಂಭವಾಗಲಿದ್ದು, ಅದರೊಳಗೆ ಬೆಂಗಳೂರಿನಲ್ಲಿರುವ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಆಗಬೇಕೆಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಖಡಕ್ ಆದೇಶ ಕೊಟ್ಟಿದ್ದಾರೆ. ಇತ್ತ ಆಯುಕ್ತರ ಆದೇಶದ ಮೇರೆಗೆ ಮೊದಲು ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಒಟ್ಟು ಗುಂಡಿಗಳನ್ನು ಲೆಕ್ಕ ಹಾಕುವ ಕೆಲಸ ಪಾಲಿಕೆ ಮಾಡಿದ್ದು, ಲೆಕ್ಕದಲ್ಲಿ ಬೆಚ್ಚಿ ಬೀಳಿಸುವ ವಿಚಾರ ಕೇಳಿ ಬಂದಿದೆ. ಇಡೀ ಬೆಂಗಳೂರಿನ ಬಿಬಿಎಂಪಿ ವ್ಯಾಪ್ತಿಯಲ್ಲಿ 9207 ರಸ್ತೆ ಗುಂಡಿಗಳು ಪತ್ತೆಯಾಗಿದ್ದು, ನಗರದ 8 ವಲಯಗಳಲ್ಲೂ ಸಾವಿರಾರು ಗುಂಡಿಗಳು ಬಲಿಗೆ ಬಾಯಿ ತೆರೆದು ಕುಳಿತಿದೆ ಎಂಬ ಮಾಹಿತಿ ಸಿಕ್ಕಿದೆ. ಪೂರ್ವ ವಲಯ – 2066, ದಕ್ಷಿಣ ವಲಯ – 1414, ಪಶ್ಚಿಮ ವಲಯ – 1232, ರಾಜರಾಜೇಶ್ವರಿನಗರ ವಲಯ – 1068, ಬೊಮ್ಮನಹಳ್ಳಿ ವಲಯ – 1076, ದಾಸರಹಳ್ಳಿ ವಲಯ – 867, ಯಲಹಂಕ ವಲಯ – 755, ಮಹದೇವಪುರ ವಲಯ – 729 ರಸ್ತೆ ಗುಂಡಿಗಳು ಬಾಯಿ ತೆರೆದಿದೆ ಎಂಬ ಮಾಹಿತಿ ಬಂದಿದೆ.