ಬೆಂಗಳೂರಲ್ಲಿ ಅಪಾಯದ ಹಂತದಲ್ಲಿವೆ 194 ಕಟ್ಟಡಗಳು
ಬೆಂಗಳೂರು, ಸೆ.28- ನಗರದಲ್ಲಿ 194 ಕಟ್ಟಡಗಳು ಅಪಾಯದ ಹಂತದಲ್ಲಿವೆ. ಈಗಲೋ ಆಗಲೋ ಬೀಳುವ ಸ್ಥಿತಿಯಲ್ಲಿರುವ ಈ ಕಟ್ಟಡಗಳ ಬಗ್ಗೆ ಎಚ್ಚರ ವಹಿಸದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ. ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳ ಬಗ್ಗೆ ಬಿಬಿಎಂಪಿ ಅಧಿಕಾರಿಗಳು ಸರ್ವೆ ಮಾಡಿ ಈಗಾಗಲೇ ವರದಿ ನೀಡಿದ್ದಾರೆ.
ಕೋವಿಡ್ ಕಾರಣದಿಂದ ಕ್ರಮ ಕೈಗೊಳ್ಳದೆ ಪಾಲಿಕೆ ಸುಮ್ಮನೆ ಕುಳಿತಿದೆ. ಶಿಥಿಲಾವಸ್ಥೆಗೊಂಡಿರುವ ಕಟ್ಟಡಗಳನ್ನು ತೆರವುಗೊಳಿಸಬೇಕೆಂದು ಹಲವಾರು ಕಟ್ಟಡಮಾಲೀಕರಿಗೆ ಪಾಲಿಕೆ ನೋಟಿಸ್ ನೀಡಿದ್ದರೂ ಮಾಲೀಕರು ತೆರವು ಮಾಡುತ್ತಿಲ್ಲ. 1 ಇದು ಗೊತ್ತಿದ್ದೂ ಪಾಲಿಕೆ ಸುಮ್ಮನಿದೆ. ನಿನ್ನೆ ಲಕ್ಕಸಂದ್ರದಲ್ಲಿ ಮೂರು ಅಂತಸ್ತಿನ ಕಟ್ಟಡವೊಂದು ಕುಸಿದು ಬಿತ್ತು.
ಇಂದು ಆಡುಗೋಡಿಯಲ್ಲಿ ಕಟ್ಟಡ ಕುಸಿದು ಬಿದ್ದಿದೆ. ಮುಂದೆ ಎಲ್ಲಿ ಯಾವ ಕಟ್ಟಡಗಳು ಕುಸಿದು ಬೀಳುತ್ತವೋ ಯಾವ ಯಾವ ಅಪಾಯಗಳು ಸಂಬಂಸುತ್ತವೆಯೋ ಊಹಿಸಲು ಸಾಧ್ಯವಿಲ್ಲ. ಯಲಹಂಕ ವಲಯದಲ್ಲಿ 67 ಕಟ್ಟಡಗಳು ಶಿಥಿಲಾವಸ್ಥೆಯಲ್ಲಿವೆ. ಪೂರ್ವ ವಲಯದಲ್ಲಿ 53, ಪಶ್ಚಿಮ ವಲಯದಲ್ಲಿ 33, ದಕ್ಷಿಣ ವಲಯದಲ್ಲಿ 38, ಮಹದೇವಪುರ ವಲಯದಲ್ಲಿ ಮೂರು ಕಟ್ಟಡಗಳ ಶಿಥಿಲಾವಸ್ಥೆಯನ್ನು ಗುರುತಿಸಲಾಗಿದೆ.
ಒಟ್ಟಾರೆ 194 ಕಟ್ಟಡಗಳು ಬೀಳುವ ಹಂತದಲ್ಲಿರುವುದನ್ನು ಪತ್ತೆ ಮಾಡಿ ವರದಿ ನೀಡಿ ಒಂದೂವರೆ ವರ್ಷವಾದರೂ ಪಾಲಿಕೆ ಯಾವುದೇ ಕ್ರಮ ಕೈಗೊಂಡಿಲ್ಲ. 2019 ಜುಲೈನಲ್ಲಿ ಬೆಂಗಳೂರಿನ ಕಾಕ್‍ಸ್ಟೌನ್‍ನಲ್ಲಿ ಕಟ್ಟಡ ಕುಸಿದು ನಾಲ್ಕು ಜನ ಸಾವಿಗೀಡಾಗಿದ್ದರು. 2019 ಸೆಪ್ಟೆಂಬರ್‍ನಲ್ಲಿ ಪುಟ್ಟೇನಹಳ್ಳಿಯಲ್ಲಿ ಮೂರು ಅಂತಸ್ತಿನ ಕಟ್ಟಡ ಧರೆಗುರುಳಿತ್ತು. ಈ ಸಂದರ್ಭದಲ್ಲಿ ಶಿಥಿಲಾವಸ್ಥೆಯಲ್ಲಿರುವ ಕಟ್ಟಡಗಳನ್ನು ಸರ್ವೆ ಮಾಡಲಾಗಿತ್ತು. ಸರ್ವೆ ಮಾಡಿ ಇಷ್ಟು ದಿನಗಳಾದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಕಳೆದ ಎರಡು ದಿನಗಳಲ್ಲಿ ಎರಡು ಕಟ್ಟಡಗಳು ಕುಸಿದು ಬಿದ್ದಿವೆ.