ಬಿಬಿಎಂಪಿಗೆ ಅನ್ವಯವಾಗದ ಸುಪ್ರೀಂ ತೀರ್ಪು! ಬೆಂಗಳೂರಿನ ಶಾಸಕರು ನಿರಾಳ; ಆಕಾಂಕ್ಷಿಗಳ ಆಸೆಗೆ ತಣ್ಣೀರು
ಸ್ಥಳೀಯ ಸಂಸ್ಥೆಗಳ ಅಧಿಕಾರಾವಧಿ ಪೂರ್ಣಗೊಂಡ ಬಳಿಕ ನಿರ್ವಾತ ಸೃಷ್ಟಿಯಾಗಲು ಬಿಡದೆ ಚುನಾವಣೆ ನಡೆಸಬೇಕೆಂಬ ಸುಪ್ರೀಂ ತೀರ್ಪು ಬಿಬಿಎಂಪಿಗೆ ಅನ್ವಯವಾಗುವುದೇ ಇಲ್ಲ. ಇದರಿಂದ ನಗರದ ಶಾಸಕರು ನಿರಾಳರಾಗಿದ್ದು, ಆಕಾಂಕ್ಷಿ ಅಭ್ಯರ್ಥಿಗಳ ಆಸೆಗೆ ತಣ್ಣೀರು ಎರಚಿದಂತಾಗಿದೆ!
ಪಾಲಿಕೆಗೆ ಚುನಾವಣೆ ಯಾವಾಗ ಎಂಬ ಕುತೂಹಲ ತಣಿಯಬೇಕಾದರೆ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠದ ಮುಂದೆ ಬಾಕಿ ಇರುವ ಪ್ರಕರಣದ ತೀರ್ಪು ಹೊರಬರಲೇಬೇಕಿದೆ. 198 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕೆಂದು 2020ರ ಡಿ. 4ರಂದು ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ಡಿ. 18ರಂದು ತಡೆಯಾಜ್ಞೆ ನೀಡಿದೆ. ಈ ತಡೆಯಾಜ್ಞೆ ತೆರವಾಗದ ಹೊರತು ತಾಂತ್ರಿಕವಾಗಿ ಪಾಲಿಕೆಗೆ ಚುನಾವಣೆ ನಡೆಸಲು ಸಾಧ್ಯವೇ ಇಲ್ಲ.
ಬಿಬಿಎಂಪಿಯಲ್ಲಿ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿಯು 2020ರ ಸೆ. 10ಕ್ಕೆ ಅಂತ್ಯಗೊಂಡಿತು. ಆದರೆ, ರಾಜ್ಯ ಸರಕಾರ ಚುನಾವಣೆ ನಡೆಸಲು ಒಲವು ತೋರಲಿಲ್ಲ. ಹೀಗಾಗಿ, ಚುನಾವಣೆ ವಿಳಂಬ ಪ್ರಶ್ನಿಸಿ, ಕಾಂಗ್ರೆಸ್ ಮುಖಂಡರಾದ ಎಂ.ಶಿವರಾಜು ಹಾಗೂ ಅಬ್ದುಲ್ ವಾಜೀದ್ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಈ ಮಧ್ಯೆ ಸರಕಾರ 1976ರ ಕೆಎಂಸಿ ಕಾಯಿದೆಗೆ ತಿದ್ದುಪಡಿ ತಂದು, ವಾರ್ಡ್‌ಗಳ ಸಂಖ್ಯೆಯನ್ನು 198 ರಿಂದ 243ಕ್ಕೆ ಹೆಚ್ಚಿಸಿತು. ಬಿಬಿಎಂಪಿ ಕಾಯಿದೆಯನ್ನೂ ಜಾರಿಗೆ ತಂದಿತು. ಇದನ್ನು ಮಾನ್ಯ ಮಾಡದ ಹೈಕೋರ್ಟ್, 198 ವಾರ್ಡ್‌ಗಳಿಗೆ ಚುನಾವಣೆ ನಡೆಸಬೇಕೆಂದು 2020ರ ಡಿ. 4ರಂದು ಆದೇಶಿಸಿತು.
ರಾಜ್ಯ ಸರಕಾರ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ 2020ರ ಡಿ. 10ರಂದು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಇದನ್ನು ಆಲಿಸಿದ ನ್ಯಾಯಾಲಯವು ಹೈಕೋರ್ಟ್ ಆದೇಶಕ್ಕೆ 2020ರ ಡಿ. 18ರಂದು ತಡೆಯಾಜ್ಞೆ ನೀಡಿದ್ದು, ಪ್ರಕರಣದ ವಿಚಾರಣೆ ಇನ್ನೂ ಬಾಕಿ ಇದೆ. ಸರಕಾರ ಸಲ್ಲಿಸಿರುವ ವಿಶೇಷ ಮೇಲ್ಮನವಿಯು ಇತ್ತೀಚೆಗೆ ನ್ಯಾಯಮೂರ್ತಿಗಳಾದ ಎ.ಎಂ.ಖನ್ವಿಲ್ಕರ್ ಮತ್ತು ನ್ಯಾ. ಎ.ಎಸ್.ಓಕ್ ಅವರಿದ್ದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತು. ಆಗ ನ್ಯಾ. ಎ.ಎಸ್.ಓಕ್ ತಾವು ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯುತ್ತಿರುವುದಾಗಿ ಪ್ರಕಟಿಸಿದರು.
ಏಕೆಂದರೆ, ಅವರೇ 2020ರ ಡಿ.4 ರಂದು ಆದಷ್ಟು ಶೀಘ್ರ ಚುನಾವಣೆ ನಡೆಸಬೇಕೆಂದು ಆದೇಶಿಸಿದ್ದರು. ಹಾಗಾಗಿ, ಅವರು ತಾವೇ ವಿಚಾರಣೆ ನಡೆಸುವುದು ಸರಿಯಲ್ಲಎಂದು ಹಿಂದೆ ಸರಿದಿದ್ದರು. ನಿಯಮದಂತೆ ವಿಚಾರಣೆಗೆ ಇದೀಗ ಸಿಜೆಐ ಹೊಸ ನ್ಯಾಯಪೀಠ ರಚನೆ ಮಾಡಬೇಕಿದೆ. ಜತೆಗೆ, ಮೇ 21ರಿಂದ ಜು 10ರವರೆಗೆ ಸುಪ್ರೀಂ ಕೋರ್ಟ್‌ಗೆ ಬೇಸಿಗೆ ರಜೆ ಇದೆ. ಅಲ್ಲಿಯವರೆಗೆ ಪಾಲಿಕೆ ಚುನಾವಣೆಯ ಅರ್ಜಿಯ ವಿಚಾರಣೆ ನಡೆಯುವುದಿಲ್ಲ.
ಅಧಿಕಾರಿಗಳದ್ದೇ ದರ್ಬಾರ್!
ಪಾಲಿಕೆಯಲ್ಲಿ ಚುನಾಯಿತ ಸದಸ್ಯರ ಅಧಿಕಾರಾವಧಿ ಮುಗಿದು ಒಂದೂವರೆ ವರ್ಷ ಕಳೆದಿದೆ. 2020ರ ಸೆ. 10ರಿಂದಲೂ ಪಾಲಿಕೆಯಲ್ಲಿಅಧಿಕಾರಿಗಳದ್ದೇ ದರ್ಬಾರ್ ಆಗಿದೆ. 198 ವಾರ್ಡ್‌ಗಳನ್ನು 243ಕ್ಕೆ ಹೆಚ್ಚಿಸುವ ಸಂಬಂಧ ಪಾಲಿಕೆಯ ಮುಖ್ಯ ಆಯುಕ್ತರ ಅಧ್ಯಕ್ಷತೆಯಲ್ಲಿ ರಚಿಸಲ್ಪಟ್ಟಿರುವ ವಾರ್ಡ್ ಮರುವಿಂಗಡಣಾ ಸಮಿತಿಯ ಅವಧಿಯನ್ನೂ ಮೂರು ಬಾರಿ ವಿಸ್ತರಿಸಿದರೂ, ಈವರೆಗೆ ವರದಿ ಸಲ್ಲಿಕೆಯಾಗಿಲ್ಲ. ಬಿಬಿಎಂಪಿ ಗಡಿಯಿಂದ ಒಂದು ಕಿಮೀ ವ್ಯಾಪ್ತಿಯಲ್ಲಿರುವ ಎಲ್ಲ ಗ್ರಾಮಗಳನ್ನು ಪಾಲಿಕೆ ತೆಕ್ಕೆಗೆ ಸೇರಿಸುವ ನಿರ್ಧಾರವನ್ನು ಕೈಬಿಟ್ಟು, 198 ವಾರ್ಡ್‌ಗಳಲ್ಲೇ 243 ವಾರ್ಡ್‌ಗಳನ್ನು ವಿಂಗಡಿಸಲು ಉದ್ದೇಶಿಸಲಾಗಿದೆ.
ಶಾಸಕರ ಆಯ್ಕೆ ನಂತರವೇ ಚುನಾವಣೆ?
ಬಿಬಿಎಂಪಿ ವಾರ್ಡ್‌ಗಳಿಗೆ ಚುನಾವಣೆ ನಡೆಯುವುದು ಪಕ್ಷಾತೀತವಾಗಿ ಯಾವುದೇ ಶಾಸಕರಿಗೂ ಇಷ್ಟವಿಲ್ಲ. ಮುಂಬರುವ ವಿಧಾನಸಭಾ ಚುನಾವಣೆ ಮುಗಿಯುವವರೆಗೆ ಪಾಲಿಕೆಗೆ ಚುನಾವಣೆ ನಡೆಸುವುದು ಬೇಡ ಎಂಬುದು ಎಲ್ಲರ ಅಪೇಕ್ಷೆ. ಹಾಗಾಗಿಯೇ, ಬಿಜೆಪಿ ಸರಕಾರವು ಚುನಾವಣೆ ನಡೆಸಲು ಒಲವು ತೋರುತ್ತಿಲ್ಲ. ಇದಕ್ಕೆ ಇಂಬು ನೀಡುವಂತೆ ಸುಪ್ರೀಂ ಕೋರ್ಟ್‌ನಿಂದಲೂ ಅಂತಿಮ ತೀರ್ಪು ಹೊರಬಿದ್ದಿಲ್ಲ.
ಮಧ್ಯಪ್ರದೇಶ ಸರಕಾರ ಮತ್ತು ಸುರೇಶ್ ಮಹಾಜನ್ ನಡುವಿನ ಮೇಲ್ಮನವಿ ಪ್ರಕರಣದಲ್ಲಿಸುಪ್ರೀಂ ನೀಡಿರುವ ತೀರ್ಪಿನಂತೆ ಪಾಲಿಕೆಗೆ ಚುನಾವಣೆ ನಡೆಸಿದರೆ, ಶಾಸಕರಿಗೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಲಿದೆ. ಏಕೆಂದರೆ, ಪ್ರತಿಯೊಂದು ಕ್ಷೇತ್ರದಲ್ಲಿಆಕಾಂಕ್ಷಿಗಳ ದೊಡ್ಡ ದಂಡೇ ಇದೆ. ಟಿಕೆಟ್‌ಗೆ ಹಲವು ಮಂದಿ ಶಾಸಕರುಗಳ ಬೆನ್ನು ಬಿದ್ದಿದ್ದಾರೆ. ಟಿಕೆಟ್ ವಂಚಿತ ಅಭ್ಯರ್ಥಿಗಳು ತಿರುಗಿ ಬೀಳಲಿದ್ದು, ವಿಧಾನಸಭಾ ಚುನಾವಣೆ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಇದನ್ನು ಅರಿತಿರುವ ಶಾಸಕರು, ಪಾಲಿಕೆಗೆ ಸದ್ಯಕ್ಕೆ ಚುನಾವಣೆ ನಡೆಯುವುದು ಬೇಡ ಎನ್ನುತ್ತಿದ್ದಾರೆ.ಮಧ್ಯಪ್ರದೇಶದ ಪ್ರಕರಣವೊಂದರಲ್ಲಿಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಎಲ್ಲ ರಾಜ್ಯಗಳಂತೆ ಕರ್ನಾಟಕಕ್ಕೂ ಅನ್ವಯವಾಗಲಿದೆ. ಆದರೆ ಬಿಬಿಎಂಪಿಗೆ ಆ ಆದೇಶ ಅನ್ವಯವಾಗುವುದಿಲ್ಲ, ಏಕೆಂದರೆ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿದ್ದು, ಅದು ತೆರವಾಗದ ಹೊರತು ಪಾಲಿಕೆಗೆ ಚುನಾವಣೆ ನಡೆಸಲಾಗದು ಎಂದು ರಾಜ್ಯ ಚುನಾವಣಾ ಆಯೋಗದ ಪರ ಹಿರಿಯ ನ್ಯಾಯವಾದಿ ಕೆಎನ್ ಫಣೀಂದ್ರ ಹೇಳಿದ್ದಾರೆ.