
ಬೆಂಗಳೂರು: ಕೋಮು ಸೂಕ್ಷ್ಮ ಪ್ರದೇಶ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಮಾಯಕರು ಬಲಿಯಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದ್ದು, ಕೋಮು ಪ್ರಚೋದಕ ಭಾಷಣಗಳಿಗೂ ಕಡಿವಾಣ ಇಲ್ಲದಂತಾಗಿದೆ. ರಾಜ್ಯದಲ್ಲಿ ಮತೀಯ ಸಂಘರ್ಷಗಳಿಗೆ ಕೊನೆ ಹಾಡುತ್ತೇವೆ ಎಂದು ಹೇಳಿದ್ದ ಸಿಎಂ ಸಿದ್ದರಾಮಯ್ಯ ಸರ್ಕಾರದ 2 ವರ್ಷಗಳ ಅವಧಿಯಲ್ಲಿ ಮೂವರು ಪ್ರಾಣ ಕಳೆದುಕೊಂಡಿದ್ದಾರೆ.ಪಹಲ್ಗಾಮ್ ದಾಳಿಯ ಸಂದರ್ಭದಲ್ಲಿ ಮಂಗಳೂರಿನಲ್ಲಿ ಅಶ್ರಫ್ ಎಂಬ ಮಾನಸಿಕ ಅಸ್ವಸ್ಥನನ್ನು ಗುಂಪು ಹಲ್ಲೆ ನಡೆಸಿ ಕೊಲೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಫಾಝಿಲ್ ಕೊಲೆ ಪ್ರಕರಣದ ಆರೋಪಿ ಸುಹಾಸ್ ಶೆಟ್ಟಿಯನ್ನು ಹತ್ಯೆ ಮಾಡಲಾಯಿತು. ಈ ಎರಡು ಪ್ರಕರಣಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿತ್ತು. ಅಲ್ಲಲ್ಲಿ ಚೂರಿ ಇರಿತ, ತಲವಾರು ದಾಳಿ ನಡೆದಿದ್ದವು.ಇದೀಗ ಮತ್ತೊಂದು ಹತ್ಯೆ ಜಿಲ್ಲೆಯ ಶಾಂತಿಯನ್ನು ಕದಡಿಸಿದೆ. ಬಂಟ್ವಾಳದ ಕೊಳತ್ತಮಜಲು ನಿವಾಸಿ ಅಬ್ದುಲ್ ರಹಿಮಾನ್ ಎಂಬ ಯುವಕನನ್ನು ಮಂಗಳವಾರ ಸಂಜೆ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹತ್ಯೆ ನಡೆಸಿದ್ದಾರೆ.ಜುಮ್ಮಾ ಮಸೀದಿ ಕಾರ್ಯದರ್ಶಿ ಪಿಕಪ್ ಚಾಲಕ ಅಬ್ದುಲ್ ರಹೀಂ (32) ಹತ್ಯೆ ಮತ್ತು ಕಲಂದರ್ ಶಾಫಿ ಮೇಲಿನ ಕೊಲೆಯತ್ನ ಪ್ರಕರಣ ಸಂಬಂಧಿಸಿ ಸ್ಥಳೀಯ ಇಬ್ಬರು ಸೇರಿ 15 ಮಂದಿಯ ವಿರುದ್ಧ ಬಂಟ್ವಾಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದೀಪಕ್ ಮತ್ತು ಸುಮಿತ್ ಸೇರಿ ಒಟ್ಟು ಹಲವರು ಕೃತ್ಯದಲ್ಲಿ ಭಾಗಿಯಾಗಿದ್ದರು ಎಂಬುವುದು ಪ್ರಾಥಮಿಕ ತನಿಖೆಯಿಂದ ಹೊರಬಂದಿದೆ. ಮೇಲ್ನೋಟಕ್ಕೆ ಇದು ಮತೀಯ ಕಾರಣದಿಂದಲೇ ನಡೆದ ಹತ್ಯೆ ಎಂದು ತಿಳಿದು ಬಂದಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಅವಧಿಯಲ್ಲೂ ನಿರಂತರವಾಗಿ ಕೊಲೆಗಳು ನಡೆಯುತ್ತಿವೆ. ಬಸವರಾಜ ಬೊಮ್ಮಾಯಿ ಸರ್ಕಾರ ಅವಧಿಯಲ್ಲಿ ಸುಳ್ಯದಲ್ಲಿ ಮಸೂದ್ ಕೊಲೆ ಪ್ರಕರಣ ನಡೆದಿತ್ತು. ಇದಕ್ಕೆ ಪ್ರತೀಕಾರವಾಗಿ ಪ್ರವೀಣ್ ನೆಟ್ಟಾರು ಕೊಲೆಯಾಗಿತ್ತು. ಪ್ರವೀಣ್ ನೆಟ್ಟಾರು ಕೊಲೆಗೆ ಪ್ರತಿಕಾರವಾಗಿ ಫಾಝಿಲ್ ಎಂಬ ಯುವಕನನ್ನು ಹತ್ಯೆ ಮಾಡಲಾಗಿದೆ. ಇದೀಗ ಸಿದ್ದರಾಮಯ್ಯ ಸರ್ಕಾರದ ಅವಧಿಯಲ್ಲೂ ಈ ಹತ್ಯಾ ಸರಣಿ ಮುಂದುವರಿದಿದೆ.
ರಾಜ್ಯದಲ್ಲಿ ನಿರಂತರವಾಗಿ ಇಂತಹ ಕೃತ್ಯಗಳು ನಡೆಯುತ್ತಿರುವುದು ಜನಸಾಮಾನ್ಯರಲ್ಲಿ ಆತಂಕ ಸೃಷ್ಟಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂಬ ಆರೋಪಗಳು ಕೇಳಿ ಬರುತ್ತಿವೆ. ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕ್ರಮದ ಭರವಸೆಯನ್ನು ನೀಡಿದರೂ ಜಿಲ್ಲೆಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ಹಾಗೂ ಪ್ರತಿಕಾರದ ಹತ್ಯೆಗಳು ಅಪಾಯಕಾರಿ ಸನ್ನಿವೇಶವನ್ನು ಸೃಷ್ಟಿಸಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೋಮು ಸಂಘರ್ಷ ನಿಯಂತ್ರಣಕ್ಕೆ ಆ್ಯಂಟಿ ಕಮ್ಯೂನಲ್ ಪೋರ್ಸ್ ಸ್ಥಾಪನೆ ಮಾಡಲು ಸರ್ಕಾರ ಮುಂದಾಗಿದೆ. ಈ ನಿಟ್ಟಿನಲ್ಲಿ ರೂಪುರೇಷೆ ತಯಾರಿ ಮಾಡಲಾಗುವುದು ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ. ಆದರೆ ಇನ್ನೂ ಕಾರ್ಯರೂಪಕ್ಕೆ ಯಾವಾಗ ಬರಲಿದೆ ಎಂಬುವುದು ಸ್ಪಷ್ಟಗೊಂಡಿಲ್ಲ.
ದಕ್ಷಿಣ ಕನ್ನಡ ಜಿಲ್ಲೆಯ ಹತ್ಯಾ ಸರಣಿ ಹೀಗಿದೆ
- 2003 ಮೇ 13: ಎಂಬಿ ಜಬ್ಬಾರ್
- 2003 ಡಿಸೆಂಬರ್ 26 – ನರಸಿಂಹ ಶೆಟ್ಟಿಗಾರ್
- 2003 ಡಿಸೆಂಬರ್ 28 – ಫಾರೂಕ್
- 2005 ಜೂನ್ 7 – ಪೊಳಲಿ ಅನಂತು
- 2006 ಡಿಸೆಂಬರ್ 1- ಸುಖಾನಂದ ಶೆಟ್ಟಿ
- 2009 ಫೆಬ್ರವರಿ 18 – ಕ್ಯಾಂಡಲ್ ಸಂತು
- 2014 ಮಾರ್ಚ್ 21 – ರಾಜೇಶ್ ಪೂಜಾರಿ
- 2015 ಸೆಪ್ಟಂಬರ್ 7 – ನಾಸೀರ್
- 2015 ನವೆಂಬರ್ 12 – ಹರೀಶ್ ಪೂಜಾರಿ
- 2015 ಅಕ್ಟೋಬರ್ 9 – ಪ್ರಶಾಂತ್ ಪೂಜಾರಿ
- 2016 ಏಪ್ರಿಲ್ 12 – ರಾಜೇಶ್ ಕೋಟ್ಯಾನ್
- 2016 ಏಪ್ರಿಲ್ 26 – ಸೈಫಾನ್ ಯಾನೆ ಸಫ್ವಾನ್
- 2017 ಜೂನ್ 21 – ಅಶ್ರಫ್ ಕಲಾಯಿ
- 2017 ಜುಲೈ 4 – ಶರತ್ ಮಡಿವಾಳ
- 2018 ಜನವರಿ 3- ದೀಪಕ್ ರಾವ್
- 2018 ಜನವರಿ 3- ಅಬ್ದುಲ್ ಬಶೀರ್
- 2022 ಜುಲೈ 19 – ಮಸೂದ್ ಬೆಳ್ಳಾರೆ
- 2022 ಜುಲೈ 26 – ಪ್ರವೀಣ್ ನೆಟ್ಟಾರು
- 2022 ಜುಲೈ 28 – ಫಾಝಿಲ್
- 2022 ಡಿಸೆಂಬರ್ 24 – ಅಬ್ದುಲ್ ಜಲೀಲ್
- 2025 ಏಪ್ರಿಲ್ 27 – ಅಶ್ರಫ್
- 2025 ಮೇ 1 – ಸುಹಾಸ್ ಶೆಟ್ಟಿ
- 2025 ಮೇ 28 – ಅಬ್ದುಲ್ ರಹಮಾನ್