ದೇಶ

ಪ್ರಸಕ್ತ ಆರ್ಥಿಕ ವರ್ಷಕ್ಕೆ ಭಾರತದ ಆರ್ಥಿಕ ಬೆಳವಣಿಗೆ ಮುನ್ನೋಟ ಶೇ.10ಕ್ಕೆ ಕಡಿತಗೊಳಿಸಿದ ಎಡಿಬಿ

ನವದೆಹಲಿ: ಏಷ್ಯನ್ ಅಭಿವೃದ್ಧಿ ಬ್ಯಾಂಕ್ ಸೆ.22 ರಂದು ,ಭಾರತದ ಆರ್ಥಿಕ ಬೆಳವಣಿಗೆ ಮುನ್ನೋಟವನ್ನು ಪ್ರಸಕ್ತ ಆರ್ಥಿಕ ವರ್ಷಕ್ಕೆ ಶೇ.10ಕ್ಕೆ ಕಡಿತಗೊಳಿಸಿದೆ.

ಈ ಹಿಂದೆ ಶೇ.11ಕ್ಕೆ ಮುನ್ನೋಟ ನಿಗದಿಯಾಗಿತ್ತು. ಆದರೆ ಕೋವಿಡ್-19 ಎರಡನೇ ಅಲೆಯ ಪರಿಣಾಮದಿಂದಾಗಿ ಶೇ.10ಕ್ಕೆ ಇಳಿಕೆ ಮಾಡಲಾಗಿದೆ.

ಮಾರ್ಚ್ 2022 ಕ್ಕೆ ಕೊನೆಗೊಳ್ಳುವ 2021 ರ ಆರ್ಥಿಕ ವರ್ಷದ ಆರ್ಥಿಕ ಬೆಳವಣಿಗೆಯನ್ನು ಕಡಿತಗೊಳಿಸಲಾಗಿದೆ. ಮೇ ತಿಂಗಳಲ್ಲಿ ಎದುರಾದ ಎರಡನೇ ಅಲೆಯ ಪರಿಣಾಮ ಆರ್ಥಿಕತೆ ಮೇಲೆ ಬೀರಿದ್ದರಿಂದ ಮುನ್ನೋಟದಲ್ಲಿ ಕಡಿತಗೊಳಿಸಲಾಗಿದೆ ಎಂದು ಎಡಿಬಿ ಹೇಳಿದೆ.

ಎರಡನೇ ಅಲೆ ನಿರೀಕ್ಷೆಗಿಂತಲೂ ಮೊದಲೇ ಕೊನೆಯಾಗಿದ್ದರಿಂದ ಹಲವು ರಾಜ್ಯಗಳಲ್ಲಿ ಲಾಕ್ ಡೌನ್ ನ್ನು ತೆರವುಗೊಳಿಸಲಾಗಿದ್ದು, ಚಟುವಟಿಕೆಗಳು ಸಹಜ ಸ್ಥಿತಿಗೆ ಬಂದಿವೆ. ತತ್ಪರಿಣಾಮವಾಗಿ 2021 ರ ಆರ್ಥಿಕ ವರ್ಷದ ಮೂರು ತ್ರೈಮಾಸಿಕದಲ್ಲಿ ಆರ್ಥಿಕತೆ ಪುಟಿದೇಳುವ ನಿರೀಕ್ಷೆ ಇದ್ದು ಶೇ.10 ರಷ್ಟು ಬೆಳವಣಿಗೆಯಾಗುವ ಸಾಧ್ಯತೆ ಇದೆ ಎಂದು ಎಡಿಬಿ ಹೇಳಿದೆ.

ಎಡಿಬಿ ಏಪ್ರಿಲ್ ತಿಂಗಳಲ್ಲಿನ ಮುನ್ನೋಟವನ್ನು ಪ್ರಕಟವಾಗಿದ್ದಾಗ, ಶೇ.11ಕ್ಕೆ ಅಂದಾಜಿಸಿತ್ತು. ಬಳಕೆ ಕ್ರಮೇಣ ಜಾಸ್ತಿಯಾಗಲಿದೆ. ಸರ್ಕಾರದ ಖರ್ಚು ಹೆಚ್ಚಾಗಲಿದೆ, ರಫ್ತು ಹೆಚ್ಚಾಗಲಿರುವುದು ಕಳೆದ ಆರ್ಥಿಕ ವರ್ಷಕ್ಕಿಂತಲೂ ಪ್ರಸಕ್ತ ಆರ್ಥಿಕ ವರ್ಷ 2021 ರಲ್ಲಿ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಲಿದೆ ಎಂದು ಹೇಳಿತ್ತು.

ಎಡಿಬಿಯ ಪ್ರಕಾರ ಪೀಪಲ್ಸ್ ರಿಪಬ್ಲಿಕ್ ಆಫ್ ಚೀನಾ (ಪಿಆರ್ ಸಿ) ದ ಆರ್ಥಿಕ ಬೆಳವಣಿಗೆ ಬಲಿಷ್ಠವಾಗಿರಲಿದ್ದು 2021 ರಲ್ಲಿ ಶೇ.8.1, 2022 ರಲ್ಲಿ ಶೇ.5.5 ರಷ್ಟಿರಲಿದೆ ಎಂದು ಅಂದಾಜಿಸಿದೆ.

Related Articles

Leave a Reply

Your email address will not be published. Required fields are marked *

Back to top button