ಕೋವಿಡ್ 3ನೇ ಅಲೆ ಅನುಮಾನ!
ನವದೆಹಲಿ(ನ.24): ಯುರೋಪ್ ಹಾಗೂ ಏಷ್ಯಾದ (Europe and Asia) ಕೆಲ ದೇಶಗಳಲ್ಲಿ ಎದ್ದಿರುವ ಕೋವಿಡ್ ಹೊಸ ಅಲೆ ಭಾರೀ ಆತಂಕ ಹುಟ್ಟುಹಾಕಿರುವ ಹಂತದಲ್ಲೇ, ಭಾರತದಲ್ಲಿ ಮೂರನೇ ಅಲೆಯ (Third Wave Of Covid) ಸಾಧ್ಯತೆ ಬರುವುದು ಅನುಮಾನ ಎಂದು ತಜ್ಞರು ಅಂದಾಜಿಸಿದ್ದಾರೆ. ಜೊತೆಗೆ ಒಂದು ವೇಳೆ ಹೊಸ ತಳಿಯ ವೈರಾಣುವಿನ ಉಗಮದಿಂದ ಕೋವಿಡ್‌ನ 3ನೇ ಅಲೆ ಸೃಷ್ಟಿಯಾದರೂ ಅದು ಎರಡನೇ ಅಲೆಯಷ್ಟು ತೀವ್ರವಾಗಿ ಇರಲಿಕ್ಕಿಲ್ಲ. ಅಲ್ಲದೆ, ಡಿಸೆಂಬರ್ ನಿಂದ ಫೆಬ್ರವರಿ ಮಧ್ಯೆ ಪ್ರಕರಣಗಳ ಸಂಖ್ಯೆ ಹೆಚ್ಚಿದರೂ ಪರಿಣಾಮ ಅಷ್ಟಾಗದು. ಆದರೂ ಜನರು ಎಚ್ಚರ ವಹಿಸಬೇಕು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಸೋನಿಪತ್ ಅಶೋಕ ವಿವಿ ಜೀವಶಾಸ್ತ್ರ ಪ್ರಾಧ್ಯಾಪಕ ಗೌತಮ ಮೆನನ್ ‘ಹೊಸ ಕೊರೋನಾ ತಳಿ (New Covid Varient) ಉಗಮದ ಹೊರತು 3ನೇ ಅಲೆ ಸೃಷ್ಟಿಸಾಧ್ಯತೆ ಕ್ಷೀಣ. ಏಕೆಂದರೆ 2ನೇ ಅಲೆ ವೇಳೆ ಬಹುಸಂಖ್ಯೆಯ ಜನರು ಬಾಧಿತರಾದರು. ಇದರಿಂದ ಸಾಮೂಹಿಕ ರೋಗನಿರೋಧಕ ಶಕ್ತಿ ಉತ್ಪತ್ತಿ ಆಯಿತು. ಜತೆಗೆ, ಲಸಿಕಾಕರಣ ತೀವ್ರಗೊಂಡಿದೆ. ಇದು ರೋಗದ ಗಂಭೀರತೆ, ಆಸ್ಪತ್ರೆ ದಾಖಲೀಕರಣ ಹಾಗೂ ಸಾವನ್ನು ತಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದೆ’ ಎಂದಿದ್ದಾರೆ.

ಜೊತೆಗೆ ‘ಲಸಿಕೆ ಪಡೆದವರಿಗಿಂತ ಹೆಚ್ಚು ರೋಗನಿರೋಧಕ ಶಕ್ತಿಯು ಕೊರೋನಾದಿಂದ ಗುಣವಾದವರಲ್ಲಿ ಇರುತ್ತದೆ. ಜತೆಗೆ ಗುಣಮುಖರು ಲಸಿಕೆ ಪಡೆದರೆ ಅವರಲ್ಲಿ ರೋಗನಿರೋಧಕ ಶಕ್ತಿ ಇನ್ನಷ್ಟು ಬಲಗೊಳ್ಳುತ್ತದೆ. ಇದಕ್ಕೆ ‘ಹೈಬ್ರಿಡ್ ಇಮ್ಯುನಿಟಿ’ ಎನ್ನಲಾಗುತ್ತದೆ. ಒಂದು ವೇಳೆ 3ನೇ ಅಲೆ ಏಳುವ ಸಾಧ್ಯತೆ ಇದ್ದರೆ ಅದರ ಲಕ್ಷಣಗಳು ಈಗಾಗಲೇ ಗೋಚರಿಸುತ್ತಿದ್ದವು’ ಎಂದು ತಿಳಿಸಿದ್ದಾರೆ.
3ನೇ ಅಲೆ ಬಂದು ಹೋಗಿದೆ- ಸಿನ್ಹಾ:
ಚೆನ್ನೈನ ಭೌತಶಾಸ್ತ್ರ ತಜ್ಞ ಸೀತಾಭ್ರ ಸಿನ್ಹಾ ಅವರು, ‘ದೇಶದಲ್ಲಿ ಈಗಾಗಲೇ ಸೆಪ್ಟೆಂಬರ್ ಮಧ್ಯಭಾಗದಲ್ಲಿ ಬಂದು ಹೋಗಿದೆ. ಪ್ರಸ್ತುತ ಸೋಂಕು ಹರಡುವಿಕೆ ಪ್ರಮಾಣ (ಆರ್ ವ್ಯಾಲ್ಯೂ), ಜಮ್ಮು-ಕಾಶ್ಮೀರ, ಮಿಜೋರಂ, ಪ.ಬಂಗಾಳ ಹೊರತುಪಡಿಸಿ ದೇಶದ ಉಳಿದ ಯಾವ ಭಾಗದಲ್ಲೂ ‘1’ ಅಂಕಿಯನ್ನು ಮೀರಿಲ್ಲ. ಯುರೋಪ್‌ನಲ್ಲಿ 4ನೇ ಅಲೆ ಎದ್ದಿದ್ದರೂ ಅಲ್ಲಿನ ಚಳಿ ಪರಿಸ್ಥಿತಿ ಕಾರಣ ಇರಬಹುದು. ಆದರೆ ಯುರೋಪ್‌ನಷ್ಟುಚಳಿಗಾಲ ಭಾರತದಲ್ಲಿ ತೀವ್ರವಾಗಿರುವುದಿಲ್ಲ’ ಎಂದು ಪ್ರತಿಪಾದಿಸಿದರು.
ದೇಶದಲ್ಲಿ ಕಳೆದ ಸತತ 46 ದಿನದಿಂದ 20 ಸಾವಿರಕ್ಕಿಂತ ಕಮ್ಮಿ ನಿತ್ಯ ಪ್ರಕರಣ ವರದಿ ಆಗುತ್ತಿವೆ. ಸತತ 149 ದಿನದಿಂದ 50 ಸಾವಿರಕ್ಕಿಂತ ಕಮ್ಮಿ ದೈನಂದಿನ ಪ್ರಕರಣ ವರದಿ ಆಗುತ್ತಿವೆ
