Businessಇತ್ತೀಚಿನ ಸುದ್ದಿರಾಜ್ಯಸುದ್ದಿ

ಪ್ರತಿಷ್ಠಿತ ಕಂಪನಿಗಳ ಹೆಸರಲ್ಲಿ ನಕಲಿ ಉತ್ಪನ್ನಗಳ ತಯಾರಿ, ಮಾರಾಟ, ಕೋಟ್ಯಂತರ ರೂ. ಮೌಲ್ಯದ ವಸ್ತುಗಳು ಸೀಜ್.

ನಾವು ಬಳಸುವ ದಿನಬಳಕೆಯ ವಸ್ತುಗಳಲ್ಲಿ ಯಾವುದು ನಕಲಿ, ಯಾವುದು ಅಸಲಿ ಎಂಬುದು ಗೊತ್ತಾಗುವುದೇ ಕಷ್ಟವಿದೆ. ಅಷ್ಟರಮಟ್ಟಿಗೆ ನಕಲಿ ವಸ್ತುಗಳ ಮಾರಾಟ ದಂಧೆ ನಗರದಲ್ಲಿ ಸಕ್ರಿಯವಾಗಿದೆ.‌‌ ಇಂತಹ ನಕಲಿ ಪ್ರಾಡಕ್ಟ್​​ಗಳ ಜಾಲದ ಮೇಲೆ ಸಿಸಿಬಿ ಪೊಲೀಸರು ದಾಳಿ ಮಾಡಿ ಕೋಟ್ಯಂತರ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಡಿಟರ್ಜೆಂಟ್, ಸೋಪ್, ಆಯಿಲ್, ಚಹಾ ಪುಡಿ, ಮಸ್ಕಿಟೋ ಕಾಯಿಲ್ ಇವುಗಳೆಲ್ಲ ನಿತ್ಯ ಮನೆಗೆ ಬೇಕಾಗುವ ವಸ್ತುಗಳು. ಇವುಗಳ ಗುಣಮಟ್ಟ ಚೆನ್ನಾಗಿರಲಿ ಎಂದು ಜನ ಬ್ರಾಂಡೆಡ್ ಕಂಪನಿ ವಸ್ತುಗಳನ್ನೇ ಖರೀದಿ ಮಾಡುತ್ತಾರೆ. ಆದರೆ, ಕೆಲವು ನಕಲಿ ವೀರರು ಬ್ರಾಂಡೆಡ್ ಉತ್ಪನ್ನಗಳನ್ನೇ ಹೋಲುವಂತೆ ನಕಲಿ ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುವ ಮೂಲಕ ಗ್ರಾಹಕರನ್ನು ವಂಚಿಸುತ್ತಿರುವುದು ಬಯಲಾಗಿದೆ.

ಕಾಟನ್ ಪೇಟೆಯಲ್ಲಿ ನಕಲಿ ಸರ್ಫ್ ಎಕ್ಸೆಲ್, ರಿನ್, ವ್ಹೀಲ್, ಏರಿಯಲ್, ಟೈಡ್, ಗುಡ್ ನೈಟ್ ಮತ್ತು ಆಲ್ ಔಟ್ ಸೇರಿ ಪ್ರತಿಷ್ಠಿತ ಕಂಪನಿಗಳ ಉತ್ಪನ್ನಗಳನ್ನ ಇಟ್ಟು ಮಾರಾಟ ಮಾಡುತ್ತಿದ್ದುದು ಬೆಳಕಿಗೆ ಬಂದಿದೆ. ಈ ದೂರು ಆಧರಿಸಿ ಸಿಸಿಬಿ ಅಧಿಕಾರಿಗಳು ಗೋಡೌನ್ ಮತ್ತು ಮಾದನಾಯಕನಹಳ್ಳಿ ಠಾಣವ್ಯಾಪ್ತಿಯ ಕಾಚೋಹಳ್ಳಿಯ ಕಾರ್ಖಾನೆ ಮೇಲೆ ದಾಳಿ ಮಾಡಿ ಕೋಟ್ಯಂತರ ರೂಪಾಯಿ ಬೆಲೆಬಾಳುವ ನಕಲಿ ಉತ್ಪನ್ನಗಳನ್ನು ಸೀಜ್ ಮಾಡಿದ್ದಾರೆ. ಹೀಗೆ ವಶಪಡಿಸಿಕೊಂಡ ನಕಲಿ ಮಾಲುಗಳ ಅಂದಾಜು ಮೌಲ್ಯ 1.75 ಕೋಟಿ ರೂ. ಎನ್ನಲಾಗಿದೆ.

ಇನ್ನು ನಕಲಿ ವಸ್ತುಗಳನ್ನು ಸಣ್ಣ ಪುಟ್ಟ ಅಂಗಡಿಗಳಿಗೆ ಅರ್ಧ ಬೆಲೆಗೆ ಸರಬರಾಜು ಮಾಡಲಾಗಿತ್ತಿತ್ತು ಎಂದೂ ಹೇಳಲಾಗುತ್ತಿದೆ. ಇದರಿಂದ ಬ್ರಾಂಡೆಡ್ ಕಂಪನಿಗಳ ವಹಿವಾಟಿಗೆ ಹೊಡೆತವಾಗುವುದರ ಜತೆಗೆ ಜನರ ಜೇಬಿಗೆ ನೇರವಾಗಿ ಕತ್ತರಿ ಬೀಳುತ್ತಿತ್ತು.

ಸದ್ಯ ನಕಲಿ ಉತ್ಪನ್ನಗಳ ದಂಧೆ ನಡೆಸುತ್ತಿದ್ದ ಪ್ರಮುಖ ಆರೋಪಿ ದಳಪತ್ ಸಿಂಗ್​ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಕಾಚೋಹಳ್ಳಿಯಲ್ಲಿ ನಕಲಿ ಉತ್ಪನ್ನಗಳ ಕಾರ್ಖಾನೆ ತೆರೆದಿದ್ದ ದಳಪತ್ ಸಿಂಗ್ ನಕಲಿ ಡಿಟರ್ಜೆಂಟ್ ಪೌಡರ್ ಮತ್ತು ಸೊಳ್ಳೆ ನಿವಾರಕ ದ್ರವಗಳನ್ನು ಉತ್ಪಾದಿಸುತ್ತಿದ್ದ. ಈ ನಕಲಿ ಉತ್ಪನ್ನಗಳಿಗೆ ಬೇಕಾದ ಲೇಬಲ್​ಗಳನ್ನ ಗುಜರಾತ್​ನ ಸೂರತ್ ನಲ್ಲಿರುವ ಕೆಲವು ಪ್ರಿಂಟಿಂಗ್ ಹಬ್‌ಗಳಿಂದ ದೊಡ್ಡ ಪ್ರಮಾಣದಲ್ಲಿ ತರಿಸಿಕೊಳ್ಳುತ್ತಿದ್ದ.ನಕಲಿ ಉತ್ಪನ್ನಗಳನ್ನು ಹುಬ್ಬಳ್ಳಿ, ಬೆಳಗಾವಿ, ಕೋಲಾರ, ಮಂಗಳೂರು, ಚೆನ್ನೈ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಪೂರೈಕೆ ಮಾಡಲಾಗುತ್ತಿತ್ತು ಎನ್ನಲಾಗಿದೆ. ಈ ನಕಲಿ ದಂಧೆಯ ಜಾಲ ದೊಡ್ಡದಾಗಿದ್ದು ಸಿಸಿಬಿ ಪೊಲೀಸರು ಮತ್ತಷ್ಟು ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button